Sholay - ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ಯಶಸ್ಸು ಗಳಿಸಿದ ಸಿನಿಮಾಗಳ ಪೈಕಿ ಅಮಿತಾಭ್ ಬಚ್ಚನ್, ಧಮೇರ್ಂದ್ರ, ಹೇಮಾ ಮಾಲಿನಿ, ಜಯಾ ಬಚ್ಚನ್ ಅಭಿನಯದ ರಮೇಶ್ ಸಿಪ್ಪಿ ನಿರ್ದೇಶನದ "ಶೋಲೆ' ಮೊದಲ ಸಾಲಿನಲ್ಲಿ ನಿಲ್ಲುತ್ತದೆ. 1975ರ ಆ. 15ರಂದು ರಿಲೀಸ್ ಆಗಿದ್ದ ಈ ಚಿತ್ರ ಅಂದು 10 ಪಟ್ಟು ಲಾಭ ಗಳಿಸಿತ್ತು. ಮೂರು ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ "ಶೋಲೆ'ಯನ್ನು ಆಗ ಬರೋಬ್ಬರಿ 25 ಕೋಟಿ ಜನ ವೀಸಿದ್ದರು.
ಈಗ್ಗೆ 50 ವರ್ಷಗಳ ಹಿಂದೆಯೇ ₹35 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿಕೊಂಡಿದ್ದ ಚಿತ್ರವಿದು. ಇವತ್ತಿನ ಮಾರ್ಕೆಟ್ಗೆ ಅದು ₹3,200 ಕೋಟಿ ಎಂದು ಅಂದಾಜಿಸಲಾಗಿದೆ. ಇಂತಹ ಇಂಡಸ್ಟ್ರಿ ಹಿಟ್ "ಶೋಲೆ' ಇದೀಗ ಐದು ದಶಕಗಳ ಬಳಿಕ ಮತ್ತೆ ತೆರೆಗೆ ಬರಲು ರೆಡಿಯಾಗಿದೆ. ಹೌದು, ಚಿತ್ರವನ್ನು ಇದೇ ಡಿ. 12ರಂದು ಮರುಬಿಡುಗಡೆ ಮಾಡಲು ಸಿಪ್ಪಿ ಫಿಲಂಸ್ ನಿರ್ಮಾಣ ಸಂಸ್ಥೆ ಘೋಷಿಸಿದೆ.
ಲಂಡನ್ನ ತಾಂತ್ರಿಕ ತಂಡವೊಂದರ ಸಹಾಯದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿತ್ರಕ್ಕೆ ಹೊಸ ರೂಪ ನೀಡಲಾಗಿದೆ. ತುರ್ತು ಪರಿಸ್ಥಿತಿ ಸಮಯದಲ್ಲಿ ಸಿನಿಮಾ ಬಿಡುಗಡೆಯಾಗಿದ್ದ ಕಾರಣ, ಸೆನ್ಸಾರ್ ಬೋರ್ಡ್ನವರು ತೀವ್ರ ಕಟ್ಟುನಿಟ್ಟು ವಹಿಸಿದ್ದರು. ಹೀಗಾಗಿ ಚಿತ್ರದ ಕ್ಲೆಮ್ಯಾಕ್ಸ್ ಬದಲಿಸಿದ್ದ ನಿರ್ದೇಶಕ ರಮೇಶ್ ಸಿಪ್ಪಿ, ಮರು ಚಿತ್ರೀಕರಣ ನಡೆಸಿದ್ದರು. ಬಳಿಕ "ಶೋಲೆ' ಟಿವಿ, ಒಟಿಟಿಯಲ್ಲೂ ಹೊಸ ಕ್ಲೆಮ್ಯಾಕ್ಸ್ನಲ್ಲಿಯೇ ಪ್ರಸಾರವಾಗಿತ್ತು. ಆದರೆ, ಇದೀಗ 50 ವರ್ಷಗಳ ಬಳಿಕ ಚಿತ್ರತಂಡ ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿಸಿದ್ದ ಕ್ಲೆಮ್ಯಾಕ್ಸ್ಅನ್ನೇ ಚಿತ್ರಕ್ಕೆ ಸೇರಿಸಿದೆ. ಹೀಗಾಗಿ ಹಳೆ "ಶೋಲೆ' ಚಿತ್ರದ ಹೊಸ ವರ್ಷನ್ ಬಗ್ಗೆ ಕುತೂಹಲವೂ ಹೆಚ್ಚಿದೆ.