Shamita Shetty ಚಿತ್ರ Instagram
- ನಟಿ ಶಮಿತಾ ಶೆಟ್ಟಿ ಅವರ ವಯಸ್ಸು ಮತ್ತು ವೈಯಕ್ತಿಕ ಜೀವನದ ಬಗ್ಗೆ ನಿರಂತರವಾಗಿ ಟೀಕೆ
- ಸ್ವಾವಲಂಬಿ ಜೀವನ ನಡೆಸುತ್ತಿರುವ ನಟಿಯ ನಡೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ
- ಶಮಿತಾ ಶೆಟ್ಟಿ ಅವರು 47 ನೇ ವಯಸ್ಸಿಗೆ ಕಾಲಿಟ್ಟಿದ್ದರೂ ಇಂದಿಗೂ ಮದುವೆಯಾಗದೆ ಒಂಟಿಯಾಗಿದ್ದಾರೆ
- ನಿನ್ನ ವಯಸ್ಸು ಮೀರಿದೆ ಮತ್ತು ನೀನು ಮೊದಲಿನಂತಿಲ್ಲ ಎಂದು ಕಾಮೆಂಟ್ ಮಾಡಿದ ಬಳಕೆದಾರನಿಗೆ ಕ್ಲಾಸ್ ತಗೊಂಡ ನಟಿ
ಮುಂಬೈ: ಬಾಲಿವುಡ್ ಚಿತ್ರರಂಗದ ನಟಿ ಶಮಿತಾ ಶೆಟ್ಟಿ (Shamita Shetty) ಅವರು ತಮ್ಮ ವಯಸ್ಸು ಮತ್ತು ವೈಯಕ್ತಿಕ ಜೀವನದ ಬಗ್ಗೆ ನಿರಂತರವಾಗಿ ಟೀಕಿಸುವವರಿಗೆ ತಮ್ಮ ಇನ್ಸ್ಟಾಗ್ರಾಮ್ ಮೂಲಕ ತಿರುಗೇಟು ನೀಡಿದ್ದಾರೆ. ಆದಾಗ್ಯೂ, ಸಮಾಜದ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ, ತಮ್ಮದೇ ಆದ ನಿಯಮಗಳ ಪ್ರಕಾರ ಸ್ವಾವಲಂಬಿ ಜೀವನ ನಡೆಸುತ್ತಿರುವ ನಟಿಯ ನಡೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ ಹಾಗೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಘಟನೆ ಏನು?
ಶಮಿತಾ ಶೆಟ್ಟಿ ಅವರು 47 ನೇ ವಯಸ್ಸಿಗೆ ಕಾಲಿಟ್ಟಿದ್ದರೂ ಇಂದಿಗೂ ಮದುವೆಯಾಗದೆ ಒಂಟಿಯಾಗಿದ್ದಾರೆ ಎಂಬ ಕಾರಣಕ್ಕೆ ಕೆಲವು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಟೀಕೆಗಳನ್ನು ಮಾಡುತ್ತಿದ್ದರು. ಸದಾ ಇಂತಹ ನೆಗೆಟಿವಿಟಿಯಿಂದ ದೂರವಿರುತ್ತಿದ್ದ ಶಮಿತಾ, ಈ ಬಾರಿ ಮಾತ್ರ ಸುಮ್ಮನಿರದೆ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ್ದಾರೆ.
ಶಮಿತಾ ಶೆಟ್ಟಿ ಪೋಸ್ಟ್ನಲ್ಲೇನಿದೆ?
ನಟಿ ಶಮಿತಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಾಮೆಂಟ್ಗಳ ಸ್ಕ್ರೀನ್ ಶಾಟ್ ಹಂಚಿಕೊಂಡು, ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡುವವರಿಗೆ ತೀವ್ರವಾಗಿ ಪ್ರತಿಕ್ರಯಿಸಿದ್ದಾರೆ. ಒಂದು ಕಾಮೆಂಟ್‌ನಲ್ಲಿ ನಿನ್ನ ವಯಸ್ಸು ಮೀರಿದೆ ಮತ್ತು ನೀನು ಮೊದಲಿನಂತಿಲ್ಲ ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಟಿ ಹೌದು, ನಾನು ವಿಭಿನ್ನವಾಗಿ ಕಾಣುತ್ತೇನೆ. ಕಾಲದೊಂದಿಗೆ ವಿಷಯಗಳು ಕೂಡಾ ಬದಲಾಗುತ್ತವೆ. ದೈಹಿಕ ನೋಟ ಸೇರಿದಂತೆ ಯಾವುದೂ ಕೂಡಾ ಶಾಶ್ವತವಾಗಿ ಉಳಿಯುವುದಿಲ್ಲ. ಆದರೆ ನನ್ನ ವಯಸ್ಸಿಗೆ, ನಾನು ಆರೋಗ್ಯವಾಗಿದ್ದೇನೆ, ಫಿಟ್ ಆಗಿದ್ದೇನೆ. ಸರ್ವಶಕ್ತನು ನನಗೆ ನೀಡಿದ ಎಲ್ಲದಕ್ಕೂ ಸಂತೋಷವಾಗಿದ್ದೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನೊಬ್ಬ ಬಳಕೆದಾರರು ಒಂದು ವೇಳೆ ನೀವು ಸರಿಯಾದ ಸಮಯಕ್ಕೆ ಮದುವೆಯಾಗಿದ್ದರೆ, ನಿಮ್ಮ ಮಕ್ಕಳು ಇಷ್ಟೊತ್ತಿಗಾಗಲೇ ದೊಡ್ಡವರಾಗುತ್ತಿದ್ದರು ಎಂದು ಕಮೆಂಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ನಟಿ ಹೌದು, ನೀವು ತುಂಬಾ ಸ್ಪಷ್ಟವಾದ ವಿಷಯವನ್ನೇ ಹೇಳಿದ್ದೀರಿ... ಹಾಗಾದರೆ ಅಣ್ಣ ನೀನೇಕೆ ಮದುವೆಯಾದೆ? ಎಲ್ಲಕ್ಕಿಂತ ಮುಖ್ಯವಾಗಿ, ನೀವು ನಮ್ಮ ವಯಸ್ಸನ್ನು ನೋಡಿ ನಮಗೆ ನಾಚಿಕೆಯಾಗುವಂತೆ ಮಾಡಲು ಮತ್ತು ಪುರುಷ-ಕೇಂದ್ರಿತ ಆಲೋಚನಾ ಪ್ರಕ್ರಿಯೆಯನ್ನು ನಾವು ಅನುಸರಿಸುವಂತೆ ಮಾಡಲು ಏಕೆ ಪ್ರಯತ್ನಿಸುತ್ತೀರಿ! ದಯವಿಟ್ಟು ನನಗೆ ಒಂದು ಉಪಕಾರ ಮಾಡಿ, ನನ್ನನ್ನು ಅನ್‌ಫಾಲೋ ಮಾಡಿ! ಎಂದು ಕಿಡಿಕಾರಿದ್ದಾರೆ.
ಶಮಿತಾ ಶೆಟ್ಟಿ ಹಂಚಿಕೊಂಡ ಪೋಸ್ಟ್! ಶಿಲ್ಪಾ ಶೆಟ್ಟಿ ಸಂಸಾರ ಮತ್ತು ಶಮಿತಾ ಅವರ ವೈಯಕ್ತಿಕ ಆಯ್ಕೆ
ನಟಿ, ಶಮಿತಾ ಅವರ ಹಿರಿಯ ಸಹೋದರಿ ಶಿಲ್ಪಾ ಶೆಟ್ಟಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿ, ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದಾರೆ. ಆದರೆ, ಸಹೋದರಿಯ ಜೀವನವನ್ನು ನೋಡಿ ಎಂದಿಗೂ ತಾವು ಆ ಹಾದಿಯನ್ನು ಹಿಡಿಯಬೇಕು ಎಂದು ಬಯಸಲಿಲ್ಲ. ಆದಾಗ್ಯೂ, ಸಮಾಜ ಅಥವಾ ಕುಟುಂಬ ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಮದುವೆಯಾಗಬೇಕು ಎಂದು ನಿರೀಕ್ಷಿಸುತ್ತದೆ ಎಂಬ ಏಕೈಕ ಕಾರಣಕ್ಕಾಗಿ ತಾನು ಎಂದಿಗೂ ಮದುವೆಯಾಗಲು ಸಿದ್ಧರಿಲ್ಲ ಎಂದು ಶಮಿತಾ ಶೆಟ್ಟಿ ಹಲವು ವೇದಿಕೆಗಳಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಶಮಿತಾ ಶೆಟ್ಟಿಯವರ ಕೆಲಸದ ಮುನ್ನೋಟ
ಶಮಿತಾ 2000 ರಲ್ಲಿ ಮೊಹಬ್ಬತೇನ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ಜೆಹರ್, ಫರೇಬ್ ಮತ್ತು ಕ್ಯಾಶ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು. ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡ ನಂತರ, ಅವರು ಝಲಕ್ ದಿಖ್ಲಾ ಜಾ, ಖತ್ರೋನ್ ಕೆ ಖಿಲಾಡಿ 9, ಬಿಗ್ ಬಾಸ್ OTT ಮತ್ತು ಬಿಗ್ ಬಾಸ್ 15 ಸೇರಿದಂತೆ ರಿಯಾಲಿಟಿ ಶೋಗಳ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ಬಿಗ್ ಬಾಸ್ OTT ಯಲ್ಲಿ ರಾಕೇಶ್ ಬಾಪಟ್ ಭೇಟಿಯಾದ ನಂತರ ನಟ ರಾಕೇಶ್ ಬಾಪಟ್ ಜೊತೆಗೂ ಸಂಬಂಧ ಹೊಂದಿದ್ದರು. ಅವರ ಸಂಬಂಧ ಅಭಿಮಾನಿಗಳಲ್ಲಿ ಚರ್ಚೆಯ ವಿಷಯವಾಗಿದ್ದರೂ, ಶಮಿತಾ 2022 ರಲ್ಲಿ ಅವರು ಬೇರೆಯಾಗಿರುವುದನ್ನು ದೃಢಪಡಿಸಿದರು (ಏಜೆನ್ಸೀಸ್).