ಎಐ ಅರ್ಥಾತ್ ಕೃತಕ ಬುದ್ಧಿಮತ್ತೆ ಮೂಲಕ ಸೆಲೆಬ್ರಿಟಿಗಳ ನಕಲಿ ಫೋಟೋ, ವಿಡಿಯೋಗಳನ್ನು ಸೃಷ್ಟಿಸಿ ವೈರಲ್ ಮಾಡುವ ಆನ್ಲೈನ್ ಕಿಡಿಗೇಡಿಗಳಿಗೆ ಕಡಿವಾಣ ಬೀಳುತ್ತಿಲ್ಲ. ಈ ನಕಲಿಗಳು ಸಿನಿಮಾ ತಾರೆಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಹೀಗಾಗಿಯೇ ವೈಯಕ್ತಿಕ ಹಕ್ಕುಗಳ ರಕ್ಷಣೆ ಕೋರಿ ಕೋರ್ಟ್ ಮೆಟ್ಟಿಲೇರುತ್ತಿರುವ, ಕಾನೂನು ಕ್ರಮ ಕೈಗೊಳ್ಳುತ್ತಿರುವ ನಟ, ನಟಿಯರ ಸಂಖ್ಯೆಯೂ ಹೆಚ್ಚುತ್ತಿದೆ. ಈಗಾಗಲೇ ಅಮಿತಾಭ್ ಬಚ್ಚನ್, ಅಭಿಷೇಕ್ ಮತ್ತು ಐಶ್ವರ್ಯಾ ದಂಪತಿ, ರಜಿನಿಕಾಂತ್, ಅಕ್ಷಯ್ ಕುಮಾರ್, ಚಿರಂಜೀವಿ ಸೇರಿ ಹಲವಾರು ತಾರೆಯರು ಈಗಾಗಲೇ ತಡೆಯಾಜ್ಞೆ ತಂದಿದ್ದಾರೆ. ಕೆಲವರು ಸೈಬರ್ ಕೆಮ್ಗೆ ದೂರು ಸಲ್ಲಿಸಿ, ಎಐವೀರರ ವಿರುದ್ಧ ಸಮರ ಸಾರಿದ್ದಾರೆ. ಇನ್ನು ಕೆಲವರು ತಮ್ಮ ಫೋಟೋ ಅಥವಾ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡು, ಜಾಲತಾಣದ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿಗೆ ಇದೀಗ "ಅರ್ಜುನ್ ರೆಡ್ಡಿ' ಖ್ಯಾತಿಯ ನಟಿ ಶಾಲಿನಿ ಪಾಂಡೆ ಸೇರಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಎಐ ಮೂಲಕ ಸೃಷ್ಟಿಸಿದೆ ಎನ್ನಲಾದ ನಟಿಯ ಬೋಲ್ಡ್ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದು ಗಮನಕ್ಕೆ ಬಂದಾಕ್ಷಣ ಎಚ್ಚೆತ್ತಿರುವ ಶಾಲಿನಿ, "ಇತ್ತೀಚೆಗೆ ಎಐ ಮೂಲಕ ಎಡಿಟ್ ಮಾಡಿರುವ ವಿಡಿಯೋವನ್ನು ಜಾಲತಾಣದಲ್ಲಿ ಹೆಚ್ಚು ಶೇರ್ ಮಾಡಲಾಗುತ್ತಿದೆ. ಅದರಲ್ಲಿರುವ ಯುವತಿ ನಾನಲ್ಲ. ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು, ಮಹಿಳೆಯನ್ನು ಗುರಿಯಾಗಿಸಿಕೊಂಡು ಹಾನಿ ಮಾಡಲು ಯತ್ನಿಸುತ್ತಿರುವ ಬೆಳವಣಿಗೆ ಆತಂಕಕಾರಿಯಾಗಿದೆ. ಈ ರೀತಿಯ ದೌರ್ಜನ್ಯವನ್ನು ನಾನು ವಿರೋಧಿಸುತ್ತೇನೆ. ಹೀಗೆ ತಂತ್ರಜ್ಞಾನ ದುರ್ಬಳಕೆಯನ್ನು ಸಾಮಾನ್ಯೀಕರಿಸಬಾರದು. ಅಂತಹ ವಿಡಿಯೋ ನಿಮ್ಮ ಗಮನಕ್ಕೆ ಬಂದರೆ ಅದನ್ನು ಡೌನ್ಲೋಡ್, ಶೇರ್ ಮಾಡಬೇಡಿ. ಬದಲಾಗಿ ಶೇರ್ ಮಾಡುತ್ತಿರುವ ಪೇಜ್ಗಳನ್ನು ರಿಪೋರ್ಟ್ ಮಾಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.