ನನ್ನಮ್ಮ ಶರ್ಮಿಳಾ ಮತಾಂತರವಾಗಿ ಇಸ್ಲಾಂ ಬೋಧಿಸುತ್ತಿದ್ದರು, ನಾವು ಹಿಂದೂ ಧರ್ಮ ಪಾಲಿಸಲಿಲ್ಲ ಎಂದ ಸೈಫ್ ಸಹೋದರಿ! Sharmila Tagore  
ಬಾಲಿವುಡ್

ನನ್ನಮ್ಮ ಶರ್ಮಿಳಾ ಮತಾಂತರವಾಗಿ ಇಸ್ಲಾಂ ಬೋಧಿಸುತ್ತಿದ್ದರು, ನಾವು ಹಿಂದೂ ಧರ್ಮ ಪಾಲಿಸಲಿಲ್ಲ ಎಂದ ಸೈಫ್ ಸಹೋದರಿ! Sharmila Tagore

ಪ್ರಮುಖ ಮುಖ್ಯಾಂಶಗಳು

  • ಶರ್ಮಿಳಾ ಟಾಗೋರ್ ಮದುವೆಯ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು
  • ಅಮ್ಮನೇ ನಮಗೆ ಇಸ್ಲಾಂ ಧರ್ಮದ ಬಗ್ಗೆ ಮಾರ್ಗದರ್ಶನ ನೀಡಿದ್ದರು ಎಂದ ಸಬಾ ಪಟೌಡಿ
  • ನಮ್ಮ ಮನೆಯಲ್ಲಿ ಯಾವುದೇ ದೇವಸ್ಥಾನ ಅಥವಾ ಹಿಂದೂ ಆಚರಣೆಗಳು ಇರಲಿಲ್ಲ
  • ಒಡಹುಟ್ಟಿದವರು ಅಂತರಧರ್ಮೀಯ ವಿವಾಹ ಮಾಡಿಕೊಂಡಿರುವುದರಿಂದ ನಮ್ಮಲ್ಲಿ ಕಟ್ಟುನಿಟ್ಟಿಲ್ಲ
ಮುಂಬೈ: ಬಾಲಿವುಡ್‌ನ ದಿಗ್ಗಜ ನಟಿ ಶರ್ಮಿಳಾ ಟಾಗೋರ್ ( Sharmila Tagore ) ಹಾಗೂ ಮಾಜಿ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಕುಟುಂಬದ ಕುರಿತು ಸಬಾ ಪಟೌಡಿ ಮಹತ್ವದ ವಿಚಾರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ತಮ್ಮ ತಾಯಿ ಶರ್ಮಿಳಾ ಟಾಗೋರ್ ಮದುವೆಯ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಮತ್ತು ತಮ್ಮ ಮಕ್ಕಳಾದ ಸೈಫ್, ಸೋಹಾ ಹಾಗೂ ತಮಗೆ ಇಸ್ಲಾಂ ಧರ್ಮದ ಬಗ್ಗೆ ಮಾರ್ಗದರ್ಶನ ನೀಡಿದ್ದರು ಎಂದು ಸಬಾ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಯೂಟ್ಯೂಬ್ ಚಾನೆಲ್ 'ಬಿಗ್ ಬಾಲಿವುಡ್ ಬಫ್ಸ್' ಜೊತೆ ಮಾತನಾಡಿದ ಸಬಾ ಪಟೌಡಿ, ನನ್ನ ಧರ್ಮ ಇಸ್ಲಾಂ ಎಂದು ನಾನು ಹೇಳುತ್ತೇನೆ ಮತ್ತು ನಾನು ಅದರೊಂದಿಗೆ ಸಂಪರ್ಕ ಹೊಂದಿದ್ದೇನೆ. ನಾನು ಆಧ್ಯಾತ್ಮಿಕಳಾಗಿದ್ದೇನೆ ಏಕೆಂದರೆ ನಾನು ದೇವರ ಬಗ್ಗೆ ಯೋಚಿಸಿದಾಗಲೆಲ್ಲಾ 'ಅಲ್ಲಾ' ಎಂದೇ ಕರೆಯುತ್ತೇನೆ. ಹಾಗಂದ ಮಾತ್ರಕ್ಕೆ ನಾನು ಇತರ ಧರ್ಮಗಳನ್ನು ಗೌರವಿಸುವುದಿಲ್ಲ ಎಂದಲ್ಲ ಎಂದು ಸಬಾ ಸ್ಪಷ್ಟಪಡಿಸಿದ್ದಾರೆ.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸಬಾ, ಅಮ್ಮ ಮತ್ತು ಅಪ್ಪ ಮದುವೆಯಾದಾಗ, ಅಮ್ಮ ನಿಜಕ್ಕೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಮತ್ತು ನಮಗೆ ಯಾವುದೇ ಗೊಂದಲ ಉಂಟಾಗಬಾರದು ಹಾಗೂ ಸರಿಯಾದ ಅಡಿಪಾಯ ಸಿಗಬೇಕು ಎಂಬ ಕಾರಣಕ್ಕಾಗಿ ನಮಗೆ ಇಸ್ಲಾಂ ಕುರಿತು ಮಾರ್ಗದರ್ಶನ ನೀಡಿದರು. ಹೀಗಾಗಿ ನಮ್ಮ ಮನೆಯಲ್ಲಿ ಯಾವುದೇ ದೇವಸ್ಥಾನ ಅಥವಾ ಹಿಂದೂ ಧರ್ಮದ ಆಚರಣೆಗಳು ಇರಲಿಲ್ಲ ಎಂದು ವಿವರಿಸಿದ್ದಾರೆ.
ನಮ್ಮ ತಾಯಿ ನಮಗೆ ಧರ್ಮದ ಪಾಠ ಕಲಿಸಿದ ಬಗ್ಗೆ ಮಾತನಾಡುತ್ತಾ, ಅಮ್ಮನೇ ನನಗೆ ನನ್ನ ನಂಬಿಕೆಯನ್ನು ಕಲಿಸಿಕೊಟ್ಟರು ಮತ್ತು ಇಸ್ಲಾಂ, ರಂಜಾನ್ ಹಾಗೂ ಇತರ ಧರ್ಮದ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು. ಆ ನಂತರ ನಾವು ಯಾವುದನ್ನು ಅನುಸರಿಸಬೇಕು ಎಂಬುದು ಸಂಪೂರ್ಣವಾಗಿ ನಮ್ಮ ಸ್ವಂತ ಆಯ್ಕೆಯಾಗಿತ್ತು ಎಂದಿದ್ದಾರೆ. ಪೋಷಕರು ತಮ್ಮ ಮೇಲೆ ಅಥವಾ ಒಡಹುಟ್ಟಿದವರ ಮೇಲೆ ಯಾವುದೇ ಧರ್ಮವನ್ನು ಹೇರಿಲ್ಲ ಎಂಬುದನ್ನು ಸಬಾ ಒತ್ತಿಹೇಳಿದ್ದಾರೆ.
ಸೋಹದರ ಸೈಫ್ ಹಾಗೂ ತಂಗಿ ಸೋಹಾ ಅವರ ಮದುವೆಗಳ ಬಗ್ಗೆ ಮಾತನಾಡುತ್ತಾ, ನನ್ನ ಒಡಹುಟ್ಟಿದವರು ಅಂತರ್ ಧರ್ಮೀಯ ವಿವಾಹಗಳನ್ನು ಮಾಡಿಕೊಂಡಿದ್ದಾರೆ, ಹೀಗಾಗಿ ಯಾರೂ ಕೂಡ ಯಾವುದೇ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ನಂಬಿಕೆ ಎಂಬುದು ಅತ್ಯಂತ ವೈಯಕ್ತಿಕವಾದದ್ದು. ಅದನ್ನು ಯಾರೂ ಯಾರ ಮೇಲೂ ಹೇರಲು ಸಾಧ್ಯವಿಲ್ಲ, ಯಾರನ್ನು ನಂಬಬೇಕು ಎಂಬುದು ಅವರವರ ಸ್ವಂತ ಆಯ್ಕೆ ಎಂದು ಸಬಾ ತಿಳಿಸಿದ್ದಾರೆ.
ಅಂತಿಮವಾಗಿ ತಮ್ಮ ಕುಟುಂಬದ ಆಚರಣೆಗಳ ಬಗ್ಗೆ ಹೇಳುತ್ತಾ, ನಾವು ಕ್ರಿಸ್ಮಸ್, ದೀಪಾವಳಿ, ಹೋಳಿ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಿಸಿಕೊಂಡೇ ಬೆಳೆದಿದ್ದೇವೆ. ನಮ್ಮ ಪೋಷಕರು ಯಾವತ್ತೂ ನಿರ್ದಿಷ್ಟ ಧರ್ಮವನ್ನು ನಮ್ಮ ಮೇಲೆ ಬಲವಂತವಾಗಿ ಹೇರಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ವಿಚಾರದಲ್ಲಿ ಹೀಗೆಯೇ ಇರಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಅಂದಹಾಗೆ, ನಟನಾ ಲೋಕದಿಂದ ದೂರವಿರುವ ಸಬಾ ಪಟೌಡಿ ವೃತ್ತಿಯಲ್ಲಿ ಜ್ಯುವೆಲ್ಲರಿ ಡಿಸೈನರ್, ಟ್ಯಾರೋ ಕಾರ್ಡ್ ರೀಡರ್ ಮತ್ತು ಆಧ್ಯಾತ್ಮಿಕ ಹೀಲರ್​ ಹಾಗೂ ಭೋಪಾಲ್ ರಾಯಲ್ ಎಂಡೋಮೆಂಟ್ ಟ್ರಸ್ಟ್‌ನ ಮುಖ್ಯ ರಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ, (ಏಜೆನ್ಸೀಸ್​).