ವಂಚಕ ಸುಕೇಶ್ ಚಂದ್ರಶೇಖರ್ ಮತ್ತು ನೋರಾ ಫತೇಹಿ 
ಬಾಲಿವುಡ್

200 ಕೋಟಿ ವಂಚನೆ ಪ್ರಕರಣ: ನಟಿ ನೋರಾ ಫತೇಹಿಗೆ ಕೋರ್ಟ್​ ಸಮನ್ಸ್​; ಸುಕೇಶ್ ವಿರುದ್ಧ ಸಾಕ್ಷಿ ಹೇಳ್ತಾರಾ ಬಾಲಿವುಡ್​ ಬ್ಯೂಟಿ? Nora Fatehi

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಖತರ್ನಾಕ್ ವಂಚಕ ಸುಕೇಶ್ ಚಂದ್ರಶೇಖರ್ ಭಾಗಿಯಾಗಿರುವ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಹಾಟ್ ಬೆಡಗಿ ನೋರಾ ಫತೇಹಿಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ದೆಹಲಿ ಕೋರ್ಟ್‌, ನಟಿಗೆ ಸಮನ್ಸ್ ಜಾರಿ ಮಾಡಿದೆ.

ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ನವೆಂಬರ್ 2 ರಂದು ಖುದ್ದಾಗಿ ಹಾಜರಾಗುವಂತೆ ನೋರಾ ಫತೇಹಿಗೆ ಆದೇಶಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮೂರನೇ ಪೂರಕ ದೋಷಾರೋಪ ಪಟ್ಟಿಯಲ್ಲಿ ನಟಿಯನ್ನು ಪ್ರಾಸಿಕ್ಯೂಷನ್ ಸಾಕ್ಷಿ ಎಂದು ಹೆಸರಿಸಲಾಗಿದೆ. ಇದರಿಂದಾಗಿ ಸುಕೇಶ್ ವಿರುದ್ಧ ನಟಿ ಕೋರ್ಟ್‌ನಲ್ಲಿ ಯಾವೆಲ್ಲಾ ಸ್ಫೋಟಕ ಸತ್ಯಗಳನ್ನು ಬಿಚ್ಚಿಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಜೈಲಿನಲ್ಲಿ ಕೂತೇ 200 ಕೋಟಿ ಪಂಗನಾಮ ಹಾಕಿದ್ದ ಕಿಲಾಡಿ!

ರೋಹಿಣಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದ ಸುಕೇಶ್ ಚಂದ್ರಶೇಖರ್, ಅಲ್ಲಿಂದಲೇ ಸಿಂಡಿಕೇಟ್ ಕಟ್ಟಿಕೊಂಡು ಸುಮಾರು 200 ಕೋಟಿ ಲೂಟಿ ಹೊಡೆದಿದ್ದ. ಖ್ಯಾತ ಔಷಧ ಕಂಪನಿ ‘ರಾನ್‌ಬ್ಯಾಕ್ಸಿ’ಯ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಗೆ ಜೈಲಿನಿಂದಲೇ ಕರೆ ಮಾಡಿದ್ದ.

ಹೈಟೆಕ್ ಕಾಲ್-ಸ್ಪೂಫಿಂಗ್ ತಂತ್ರಜ್ಞಾನ ಬಳಸಿ, ತಾನು ಕೇಂದ್ರ ಸರ್ಕಾರದ ಪ್ರಭಾವಿ ಅಧಿಕಾರಿ ಎಂದು ನಂಬಿಸಿ, "ಹಣ ಕೊಟ್ಟರೆ ಜೈಲಿನಲ್ಲಿರುವ ನಿಮ್ಮ ಗಂಡನನ್ನು ಹೊರಗೆ ಕರೆತರುತ್ತೇನೆ" ಎಂದು ಭರವಸೆ ನೀಡಿ, ಹಂತ ಹಂತವಾಗಿ 200 ಕೋಟಿ ಸುಲಿಗೆ ಮಾಡಿದ್ದ. ಈ ವಂಚನೆ ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೀದಿತ್ತು. ಕೊನೆಗೆ ಆಗಸ್ಟ್ 2021 ರಲ್ಲಿ ಮತ್ತೊಮ್ಮೆ 1 ಕೋಟಿಗೆ ಬೇಡಿಕೆ ಇಟ್ಟಾಗ ಸಂಶಯಗೊಂಡ ಅದಿತಿ ಸಿಂಗ್ ಪೊಲೀಸರ ಮೊರೆ ಹೋಗಿದ್ದಾರೆ. ಖೆಡ್ಡಾ ತೋಡಿದ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ, ಸುಕೇಶ್‌ನ ಇಡೀ ದಂಧೆಯನ್ನು ಬಯಲಿಗೆಳೆದು ಆತನ ಹೆಡೆಮುರಿ ಕಟ್ಟಿತು.

ಸುಕೇಶ್ ಜಾಲದಲ್ಲಿ ನೋರಾ ಫತೇಹಿ ಸಿಲುಕಿದ್ದು ಹೇಗೆ?

ಸುಕೇಶ್ ಜೈಲಿನಲ್ಲಿ ಕೂತು ಬಾಲಿವುಡ್‌ನ ಖ್ಯಾತ ನಟಿಯರ ಮೇಲೆ ಹಣದ ಮಳೆ ಸುರಿಸುತ್ತಿದ್ದ ವಿಷಯ ತನಿಖೆ ವೇಳೆ ಬಯಲಾಗಿತ್ತು. ಈ ಜಾಲದಲ್ಲಿ ನೋರಾ ಫತೇಹಿ ಹೆಸರೂ ತಳಕುಹಾಕಿಕೊಂಡಿತ್ತು. ದೆಹಲಿ ಪೊಲೀಸರು ಈ ಹಿಂದೆಯೇ ನೋರಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಆಕೆಯ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿತ್ತು.

ವಿಚಾರಣೆ ವೇಳೆ ನಟಿ, "ನನಗೆ ಸುಕೇಶ್ ನೇರ ಸಂಪರ್ಕದಲ್ಲಿರಲಿಲ್ಲ, ಆತನ ಪತ್ನಿ ಲೀನಾ ಮರಿಯಾ ಪೌಲೋಸ್ ಮೂಲಕವಷ್ಟೇ ಪರಿಚಯವಾಗಿದ್ದು" ಎಂದು ಸ್ಪಷ್ಟನೆ ನೀಡಿದ್ದರು. 2020 ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರ ಬಗ್ಗೆಯೂ ಪೊಲೀಸರು ಆಕೆಯನ್ನು ತನಿಖೆ ನಡೆಸಿದ್ದರು. ಸುಕೇಶ್ ಅವರಿಂದ ದುಬಾರಿ ಉಡುಗೊರೆಗಳು ಹಾಗೂ ಕಾರು ಪಡೆದಿದ್ದಾರೆ ಎಂಬ ಆರೋಪಗಳೂ ಈ ಹಿಂದೆ ಕೇಳಿಬಂದಿದ್ದವು.

ನವೆಂಬರ್ 2 ಕ್ಕೆ ಕೋರ್ಟ್‌ನಲ್ಲಿ ಏನಾಗುತ್ತೆ?

ಸದ್ಯ ನೋರಾ ಫತೇಹಿ ಆರೋಪಿಯಲ್ಲ, ಬದಲಾಗಿ ಪ್ರಕರಣದ ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿಯಾಗಿದ್ದಾರೆ. ಆಕೆ ಸುಕೇಶ್ ವಿರುದ್ಧ ನೀಡುವ ಸಾಕ್ಷ್ಯವು ಈ 200 ಕೋಟಿ ಸುಲಿಗೆ ಜಾಲವನ್ನು ಭೇದಿಸಲು ಪ್ರಾಸಿಕ್ಯೂಷನ್‌ಗೆ ಅತ್ಯಂತ ಬಲ ನೀಡಲಿದೆ. ನವೆಂಬರ್ 2 ರಂದು ಕೋರ್ಟ್ ಕಟಕಟೆಯಲ್ಲಿ ನಿಲ್ಲಲಿರುವ ನೋರಾ ಫತೇಹಿ, ಸುಕೇಶ್ ಚಂದ್ರಶೇಖರ್‌ನ ಮುಖವಾಡ ಕಳಚಲು ಯಾವೆಲ್ಲಾ ರಹಸ್ಯಗಳನ್ನು ಹೊರಹಾಕಲಿದ್ದಾರೆ ಎಂಬುದನ್ನು ಇಡೀ ಬಾಲಿವುಡ್ ಕಾತರದಿಂದ ಎದುರುನೋಡುತ್ತಿದೆ, (ಏಜೆನ್ಸೀಸ್​).