ಪದ್ಮಾವತ್ ಸಿನಿಮಾದ ಶೂಟಿಂಗ್ ವೇಳೆ ರಣವೀರ್ ಸಿಂಗ್‌ಗೆ 24 ಬಾರಿ ಕಪಾಳಮೋಕ್ಷ ಮಾಡಿದ್ದ ಘಟನೆಯನ್ನು ಹಂಚಿಕೊಂಡ ಹಿರಿಯ ನಟ ರಜಾ ಮುರಾದ್. 
ಬಾಲಿವುಡ್

ಆ ದೃಶ್ಯಕ್ಕಾಗಿ 24 ಬಾರಿ ಕಪಾಳಮೋಕ್ಷ ತಿಂದಿದ್ದ ರಣವೀರ್: ಶೂಟಿಂಗ್ ಸೆಟ್‌ನ ರಹಸ್ಯ ಬಿಚ್ಚಿಟ್ಟ ರಜಾ ಮುರಾದ್! Ranveer Singh

ಮುಂಬೈ: ತಮ್ಮ ಅಮೋಘ ಅಭಿನಯ ಹಾಗೂ ಪಾತ್ರಕ್ಕೆ ಜೀವ ತುಂಬುವ ಶೈಲಿಯ ಮೂಲಕ ಬಾಲಿವುಡ್​ ಸೇರಿದಂತೆ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಫ್ಯಾನ್​ ಬೇಸ್​​ ಹೊಂದಿರುವ ನಟನೆಂದರೆ ಅದು ರಣವೀರ್​ ಸಿಂಗ್​ ಆಗಿದ್ದಾರೆ.

ಆದಿತ್ಯ ಧರ್​ ನಿರ್ದೇಶನದ ಧುರಂಧರ್​ ಸಿನಿಮಾ ತೆರೆಕಾಣುವವರೆಗೆ ಬಾಲಿವುಡ್​ಗೆ ಸೀಮಿತವಾಗಿದ್ದ ರಣವೀರ್​, ಈಗ ಫ್ಯಾನ್​ ಇಂಡಿಯಾ ನಟನಾಗಿ ಹೊರಹೊಮ್ಮಿದ್ದಾರೆ. ಆದರೆ, ಧುರಂಧರ್​ಗೂ ಪೂರ್ವದಲ್ಲಿ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್​ ಸಿನಿಮಾದಲ್ಲಿ ಅಲ್ಲಾವುದ್ದೀನ್​ ಖಿಲ್ಜಿ ಪಾತ್ರಕ್ಕೆ ಜೀವತುಂಬಿದ್ದ ರಣವೀರ್​, ತಮ್ಮ ಅಭಿನಯದ ಮೂಲಕ ಈಡೀ ಚಿತ್ರರಂಗಕ್ಕೆ ಶಾಕ್​ ನೀಡಿದ್ದರು.

24 ಬಾರಿ ಕೆನ್ನೆಗೆ ಹೊಡೆದಿದ್ದೆ!

ಕೆಲ ದಿನಗಳ ಹಿಂದೆ ಈ ಪದ್ಮಾವತ್​ ಸಿನಿಮಾದಲ್ಲಿ ಜಲಾಲುದ್ದೀನ್​ ಖಿಲ್ಜಿ ಪಾತ್ರದಲ್ಲಿ ನಟಿಸಿದ್ದ ಹಿರಿಯ ನಟ ರಜಾ ಮುರಾದ್,​​ ಸಂಜಯ್​ ಲೀಲಾ ಬನ್ಸಾಲಿ ಹಾಗೂ ರಣವೀರ್​ ಸಿಂಗ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಸಂದರ್ಶವೊಂದರಲ್ಲಿ ಮಾತನಾಡಿದ ರಜಾ, ಪದ್ಮಾವತ್​ ಸಿನಿಮಾದ ಒಂದು ದೃಶ್ಯದಲ್ಲಿ ನಾನು, ಅಲ್ಲಾವುದ್ದೀನ್​ ಖಿಲ್ಜಿ (ರಣವೀರ್​ ಸಿಂಗ್​) ಪಾತ್ರಕ್ಕೆ ಕೆನ್ನೆಗೆ ಹೊಡೆಯುವ ಸನ್ನಿವೇಶವಿದೆ. ಆ ಸನ್ನಿವೇಶವು ಸಿನಿಮಾದಲ್ಲಿ ಅತ್ಯಂತ ಪ್ರಮುಖ ಘಟನೆಯಾಗಿದ್ದ ಕಾರಣ, ನಿರ್ದೇಶಕ ಸಂಜಯ್​, ಈ ಸೀನ್​ ನೈಜವಾಗಿ ಮೂಡಿ ಬರಬೇಕು, ಹೀಗಾಗಿ ನೀನು ನಿಜವಾಗಿಯೇ ಕೆನ್ನೆಗೆ ಬಾರಿಸು ಎಂದಿದ್ದರು.

ಇದಕ್ಕೆ ರಣವೀರ್​ ಕೂಡ ಯಾವುದೇ ಚಕಾರ ಎತ್ತದೆ ನಿಂತಿದ್ದ. ನಾನು ಒಂದು ಬಾರಿ, ಎರಡು ಬಾರಿ, ಹತ್ತು ಬಾರಿ ಹೊಡೆದರೂ ಸಂಜಯ್​ಗೆ ಸಮಾಧಾನವಾಗಲಿಲ್ಲ. ನನಗೆ ನೆನಪಿರುವಂತೆ ಅಂದು ನಾನು ರಣವೀರ್​ಗೆ ಬರೊಬ್ಬರಿ 24 ಬಾರಿ ಕಪಾಳಮೋಕ್ಷ ಮಾಡಿದ್ದೆ ಎಂದು ರಜಾ ಮುರಾದ್​​ ತಿಳಿಸಿದ್ದಾರೆ.

ಅವನ ಕೆನ್ನೆ ಊದಿಹೋಗಿತ್ತು!

ಆದರೆ, ಒಬ್ಬ ನಟನಿಗೆ ಹೀಗೆ ಹೊಡೆಯುವುದು ನನಗೆ ಸ್ವಲ್ಪ ಇರುಸು ಮುರುಸು ಆಗುತ್ತದೆ. ಆದರೆ ಅಂದು ಸಂಜಯ್​ ನನಗೆ ಸೀನ್​ ನೈಜವಾಗಿಯೇ ಬೇಕು. ನೀನು ಸರಿಯಾಗಿ ಹೊಡಿ ಎನ್ನುತ್ತಿದ್ದ. ಪಾಪ ರಣವೀರ್​ ಕೂಡ ಸರ್​, ನೀವು ಹೊಡೆಯಿರಿ ಏನಾಗಲ್ಲ ಎನ್ನುತ್ತಿದ್ದ. ಆದರೆ, ನನ್ನ ಕೈಯಲ್ಲಿ ಭರ್ತಿ 24 ಕಪಾಳಮೋಕ್ಷ ತಿಂದ ರಣವೀರ್​ನ ಕೆನ್ನೆ ಕೆಂಪಗೆ ಊದಿಕೊಂಡಿತ್ತೆಂದು ಹಿರಿಯ ನಟ ರಜಾ ಮುರಾದ್​​ ಹೇಳಿದ್ದಾರೆ.

ರಣವೀರ್​ ವಿನಯವಂತ!

ಕೇವಲ ಈ ದೃಶ್ಯ ಮಾತ್ರವಲ್ಲ, ರಣವೀರ್​ ಈಡೀ ಸಿನಿಮಾ ಶೂಟಿಂಗ್​ ಸಮಯದಲ್ಲಿ ಬಹಳ ವಿನಯವಂತನಾಗಿ ಕಾಣಿಸಿಕೊಂಡಿದ್ದ. ಹಾಗೆಯೇ ಅವನು ಬಹಳ ಶಿಸ್ತಿನ ಮನುಷ್ಯ ಕೂಡ ಹೌದು. ಶೂಟಿಂಗ್​ ನಡುವೆ ಅವನು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ತನ್ನ ಪಾತ್ರದ ಬಗ್ಗೆ ಓದಿಕೊಳ್ಳುತ್ತಾ, ಸದಾ ಆ ಪಾತ್ರದ ಬಗ್ಗೆಯೇ ವಿಚಾರ ಮಾಡುತ್ತಾ ಇರುತ್ತಿದ್ದ. ಅವನು ಡೈಲಾಗ್​ ಹೇಳುವಾಗ ಎದುಗಿರುವ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ಹೇಳುತ್ತಿದ್ದ. ಇದು ನನಗೆ ಬಹಳ ಇಷ್ಟವಾಗುತ್ತದೆ. ಅವನ ಈ ಪರಿಶ್ರಮದಿಂದಲೇ ಈಗ ಉನ್ನತ ಹಂತ ತಲುಪಿದ್ದಾನೆಂದು ರಜಾ ಮುರಾದ್​​ ಸಂತೋಷ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).