ಮಗಳು ದುವಾ ಹುಟ್ಟುಹಬ್ಬಕ್ಕೆ ದೀಪಿಕಾ ವಿಶೇಷ ಫೋಟೋಶೂಟ್: ಡಿಪ್ಪಿ ಧರಿಸಿದ್ದ ಡ್ರೆಸ್ ಬೆಲೆ ಕೇಳಿದ್ರೆ ಹುಬ್ಬೇರಿಸುತ್ತೀರಾ! Deepika Padukone
- ಮಗಳು ದುವಾ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋಶೂಟ್ ಮಾಡಿಸಿದ ದೀಪಿಕಾ ಹಾಗೂ ರಣವೀರ್
- ಫೋಟೋಶೂಟ್ನಲ್ಲಿ ಮುದ್ದಾಗಿ ಕಾಣಿಸಿಕೊಂಡ ರಣವೀರ್ ಪುತ್ರಿ ದುವಾ
- ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ಸ್ಟಾರ್ ದಂಪತಿ
- ದೀಪಿಕಾ ಧರಿಸಿದ್ದ ಬಿಳಿ ಲೇಸ್ ಉಡುಪಿನ ಬೆಲೆ 48 ಸಾವಿರ ರೂಪಾಯಿಗೂ ಅಧಿಕ
ಮುಂಬೈ: ಬಾಲಿವುಡ್ನ ಜನಪ್ರಿಯ ತಾರಾದಂಪತಿ ದೀಪಿಕಾ ಪಡುಕೋಣೆ ( Deepika Padukone ) ಮತ್ತು ರಣವೀರ್ ಸಿಂಗ್ ( Ranveer Singh ) ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದಾರೆ. ತಮ್ಮ ಮಗಳು ದುವಾ ( Dua Padukone ) ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ದಂಪತಿ ವಿಶೇಷ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಈ ಫೋಟೋಗಳಲ್ಲಿ ದೀಪಿಕಾ ತಮ್ಮ ಬೇಬಿ ಬಂಪ್ ಅನ್ನು ಪ್ರದರ್ಶಿಸಿದ್ದು, ರಣವೀರ್ ಮತ್ತು ಮಗಳು ದುವಾ ಜತೆಗಿನ ಕುಟುಂಬದ ಮಧುರ ಕ್ಷಣಗಳು ಅಭಿಮಾನಿಗಳ ಗಮನ ಸೆಳೆದಿವೆ.
ಅಷ್ಟೇ ಅಲ್ಲದೆ ಫೋಟೋಗಳನ್ನು ಹಂಚಿಕೊಂಡಿರುವ ದಂಪತಿ, ಬೇಬಿ ದುವಾಳಿಂದ ನಮ್ಮ ಮನಸ್ಸು ಮತ್ತಷ್ಟು ವಿಶಾಲವಾಗಿದೆ. ನಿಮ್ಮ ಆಶೀರ್ವಾದಗಳಿಗೆ ಧನ್ಯವಾದಗಳು ಎಂಬ ಅರ್ಥದಲ್ಲಿ ಭಾವನಾತ್ಮಕ ಸಂದೇಶವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ ಬಾಲಿವುಡ್ ನಟರಾದ ಅರ್ಜುನ್ ರಾಂಪಾಲ್, ನೀನಾ ಗುಪ್ತಾ, ಆದಿತ್ಯ ಧರ್, ವರುಣ್ ಧವನ್, ಮಿನಿ ಮಾಥುರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.
ಡಿಪ್ಪಿ ಧರಿಸಿದ್ದ ಉಡುಪಿನ ಬೆಲೆ ಎಷ್ಟು?
ಫೋಟೋಶೂಟ್ನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಬಿಳಿ ಬಣ್ಣದ ಲೇಸ್ ಉಡುಪು ಎಲ್ಲರ ಗಮನ ಸೆಳೆದಿದೆ. ವರದಿಗಳ ಪ್ರಕಾರ, ಅವರು ಗ್ಯಾಬ್ರಿಲ್ಲಾ ಡೆಮೆಟ್ರಿಯಡೆಸ್ (deme by Gabriella) ಬ್ರ್ಯಾಂಡ್ನ ‘Kianna Set’ ಧರಿಸಿದ್ದರು. ಅಧಿಕೃತ ವೆಬ್ಸೈಟ್ನಲ್ಲಿ ಈ ಸೆಟ್ನ ಬೆಲೆ ಸುಮಾರು 48,643 ಸಾವಿರ ರೂಪಾಯಿ ಎಂದು ಹೇಳಲಾಗುತ್ತದೆ. ಬಿಳಿ ಲೇಸ್ನ ಈ ಎನ್ಸೆಂಬಲ್ನಲ್ಲಿ ಸೂಕ್ಷ್ಮವಾದ ಲೇಸ್ ಹಾಗೂ ಕಟ್ವರ್ಕ್ ವಿನ್ಯಾಸವಿದೆ. ಟಾಪ್ನಲ್ಲಿ ಮುಂಭಾಗದ ಕಟ್ಔಟ್ ವಿನ್ಯಾಸವಿದ್ದು, ಸೊಂಟದ ಭಾಗದಿಂದ ಕೆಳಕ್ಕೆ ವಿಸ್ತರಿಸುವ ರೀತಿಯಲ್ಲಿ ಆಕರ್ಷಕ ಸಿಲೂಯೆಟ್ ನೀಡುತ್ತದೆ. ಇದಕ್ಕೆ ಹೊಂದಿಕೆಯಾಗುವ ಫ್ಲೋರಲ್ ಲೇಸ್ ಪ್ಯಾಂಟ್ ಕೂಡ ದೀಪಿಕಾ ಧರಿಸಿದ್ದರು. ಫೋಟೋಶೂಟ್ಗಾಗಿ ದೀಪಿಕಾ ತಮ್ಮ ಕೂದಲನ್ನು ಓಪನ್ ಬೀಚ್ ವೇವ್ಸ್ ಶೈಲಿಯಲ್ಲಿ ವಿನ್ಯಾಸಗೊಳಿಸಿಕೊಂಡಿದ್ದರು. ಯಾವುದೇ ಆಭರಣ, ಕಿವಿಯೋಲೆಗಳನ್ನು ಧರಿಸದೆ ಸರಳವಾದ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಳಿ ಉಡುಪಿನಲ್ಲಿ ಮಿಂಚಿದ ರಣವೀರ್
ರಣವೀರ್ ಸಿಂಗ್ ಕೂಡ ದೀಪಿಕಾಗೆ ಹೊಂದಿಕೆಯಾಗುವಂತೆ ಬಿಳಿ ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರು. ಆದರೆ, ಈ ಫೋಟೋಶೂಟ್ನ ನಿಜವಾದ ಆಕರ್ಷಣೆ ಮಾತ್ರ ಅವರ ಮುದ್ದಾದ ಮಗಳು ದುವಾ. ರಣವೀರ್ ಪುತ್ರಿಯು ಶರ್ಟ್ ಮತ್ತು ಟ್ರೌಸರ್ ತೊಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ಎರಡು ಜಡೆ ಮಾಡಿಕೊಂಡಿದ್ದು, ಅವುಗಳಿಗೆ ಬಿಲ್ಲಿನಾಕಾರದ ರಿಬ್ಬನ್ಗಳನ್ನು ಕಟ್ಟಲಾಗಿತ್ತು. ದುವಾ ಮುದ್ದಾದ ನೋಟ ಅಭಿಮಾನಿಗಳ ಗಮನ ಸೆಳೆದಿದೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ-ರಣವೀರ್
ದೀಪಕಾ ಮತ್ತು ರಣವೀರ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಏ. 19ರಂದು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ದುವಾ ಕೈಯಲ್ಲಿ ಪಾಸಿಟಿವ್ ಪ್ರೆಗ್ನೆನ್ಸಿ ಟೆಸ್ಟ್ ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದ ದಂಪತಿ, ಯಾವುದೇ ವಿವರಣೆ ನೀಡದೆ ಕೇವಲ ಎರಡು ದೃಷ್ಟಿ ದೋಷ ನಿವಾರಣೆ ಎಮೋಜಿಗಳನ್ನು ಬಳಸಿಕೊಂಡಿದ್ದರು.
ತಮ್ಮ ಮೊದಲ ಗರ್ಭಧಾರಣೆಯ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾಗಿ ದೀಪಿಕಾ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಗರ್ಭಧಾರಣೆ ಮತ್ತು ಹೆರಿಗೆಯ ಅನುಭವ ತಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದು ಅವರು ಹೇಳಿದ್ದರು. ಮಾತೃತ್ವದ ಬಳಿಕ ತಮ್ಮ ತಾಯಿಯ ಬಗ್ಗೆ ಇನ್ನಷ್ಟು ಗೌರವ ಮೂಡಿದೆ ಎಂದು ಹೇಳಿದ್ದ ದೀಪಿಕಾ, “ತಾಯಿಯಾದ ಬಳಿಕ ಎಲ್ಲವೂ ಅರ್ಥವಾಗುತ್ತದೆ ಎಂದು ತಾಯಂದಿರು ಹೇಳುವ ಮಾತು ನಿಜ” ಎಂಬ ಅರ್ಥದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದರು. ಮಹಿಳೆಯರು ಹೆರಿಗೆಯ ನಂತರ ಮತ್ತೆ ಕೆಲಸಕ್ಕೆ ಮರುಳುವ ಸಂದರ್ಭದಲ್ಲಿ ಅವರಿಗೆ ಅಗತ್ಯವಾದ ಬೆಂಬಲ ಸಿಗಬೇಕು ಎಂಬುದರ ಬಗ್ಗೆ ದೀಪಿಕಾ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಮುಂಬರುವ ಸಿನಿಮಾಗಳು
ವೃತ್ತಿಜೀವನದ ವಿಚಾರಕ್ಕೆ ಬಂದರೆ, ರಣವೀರ್ ಸಿಂಗ್ ಮುಂದಿನ ದಿನಗಳಲ್ಲಿ ಪೋಸ್ಟ್-ಅಪೋಕಲಿಪ್ಟಿಕ್ ಸರ್ವೈವಲ್ ಥ್ರಿಲ್ಲರ್ ‘ಪ್ರಳಯ’ (‘Pralay’) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಶಾರುಖ್ ಖಾನ್, ಸುಹಾನಾ ಖಾನ್ ಮತ್ತು ಅಭಿಷೇಕ್ ಬಚ್ಚನ್ ಸೇರಿದಂತೆ ಹಲವರು ನಟಿಸಿರುವ ಕಿಂಗ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜತೆಗೆ ಪ್ಯಾನ್ ಇಂಡಿಯಾ ತೆಲಗು ಸಿನಿಮಾ ರಾಕದಲ್ಲೂ ನಟಿಸುತ್ತಿದ್ದಾರೆ, (ಏಜೆನ್ಸೀಸ್).