ಮುಂಬೈ: ಬಿಡುಗಡೆಯಾದ ದಿನ ನೀರಿಕ್ಷಿತ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದ್ದ 'ರಾಮಾಯಣ' ದಿನಗಳೆದಂತೆ ಬಾಕ್ಸ್ ಆಫೀಸ್ ರೆಕಾರ್ಡ್ಗಳನ್ನು ಮುರಿಯುತ್ತಾ, ತನ್ನ ನಾಗಾಲೋಟವನ್ನು ಮುಂದುವರಿಸಿದೆ.
ನಿತೇಶ್ ತಿವಾರಿ ನಿರ್ದೇಶನದ ಹಾಗೂ ನಮಿತ್ ಮಲೋತ್ರಾ ನಿರ್ಮಾಣದ ಬಿಗ್ ಬಜೆಟ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ನೋಡಿ, ಸಿನಿಮಾ ಫ್ಲಾಪ್ ಆಗುತ್ತೆ ಎಂದು ಬಯಸಿದವರ ಆಸೆಗೆ ಕೊಳ್ಳಿ ಬಿದ್ದಿದೆ. ಮೊದಲ ದಿನ ಕೇವಲ 127 ಕೋಟಿ ಗಳಿಸಿದ್ದ ಸಿನಿಮಾ ಆರನೇ ದಿನಗ ಅಂತ್ಯಕ್ಕೆ ಭರ್ತಿ 800 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ.
ಇನ್ನು ವಿದೇಶಿ ಗಳಿಕೆಯಲ್ಲಿ ಕೂಡ ಹಿಂದೆ ಬೀಳದ ರಾಮಾಯಣ ಸುಮಾರು 300 ಕೋಟಿಗೂ ಹೆಚ್ಚಿನ ಹಣವನ್ನು ಬಾಚಿಕೊಂಡಿದೆ. ಈ ಮೂಲಕ ಆಮೀರ್ ಖಾನ್ ನಟನೆಯ ಪಿಕೆ ಹಾಗೂ ರಣವೀರ್ ಸಿಂಗ್ ನಟನೆಯ ಧುರಂಧರ್ ದಾಖಲೆಯನ್ನು ಕೂಡ ಪುಡಿಗಟ್ಟಿದೆ.
ಸಿನಿಮಾ ಘೋಷಣೆ ಹಂತದಲ್ಲೇ, ಈ ಸಿನಿಮಾವನ್ನು ಕೇವಲ ಭಾರತದ ಪ್ರೇಕ್ಷಕರಿಗೆ ಮಾತ್ರವಲ್ಲ, ಜಗತ್ತಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಿದ್ದಾಗಿ ನಿರ್ಮಾಪಕ ನಮಿತ್ ಮಲೋತ್ರಾ ತಿಳಿಸಿದ್ದರು. ಭಾರತದ ಮಣ್ಣಿನ ಕಥೆಯನ್ನು ವಿಶ್ವಕ್ಕೆ ತಲುಪಿಸುವ ಉದ್ದೇಶದಿಂದ ಸುಮಾರು 4000 ಕೋಟಿ (ರಾಮಾಯಣ ಎರಡು ಭಾಗ ಸೇರಿ) ಹಣವನ್ನು ಈ ಸಿನಿಮಾಗಾಗಿ ಹೂಡಿದ್ದಾರೆ.
ಈಗ ವಿದೇಶಿ ನೆಲದಲ್ಲಿ ರಾಮಾಯಣ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಆರನೇ ದಿನದ ಅಂತ್ಯಕ್ಕೆ ಸುಮಾರು 291 ಕೋಟಿ ಅಷ್ಟು ಕಲೆಕ್ಷನ್ ಮಾಡಿದ್ದು, ಏಳನೇ ದಿನ (ನವೆಂಬರ್ 11) ಈ ಗಳಿಕೆ 300 ಕೋಟಿ ಗಡಿಯನ್ನು ಸುಲಭವಾಗಿ ಪಾರು ಮಾಡಲಿದೆ.
ಇನ್ನು ವಿದೇಶಿ ಗಳಿಕೆ ವಿಚಾರದಲ್ಲಿ ಆಮೀನ್ ಖಾನ್ ನಟನೆಯ, ಇದೇ ನಿತೇಶ್ ತಿವಾರಿ ನಿರ್ದೇಶನದ ದಂಗಲ್ ಸಿನಿಮಾ 1535 ಕೋಟಿ ಗಳಿಸಿ ಅಗ್ರಸ್ಥಾನದಲ್ಲಿದೆ. ಅದರ ನಂತರ ಸಿಕ್ರೇಟ್ ಸೂಪರ್ಸ್ಟಾರ್ (822 ಕೋಟಿ), ಬಜರಂಗಿ ಭಾಯ್ಜಾನ್ (482 ಕೋಟಿ), ಧುರಂಧರ್ 2 (451 ಕೋಟಿ), ಪಠಾನ್ (412 ಕೋಟಿ), ಜವಾನ್ (406 ಕೋಟಿ), ಅಂಧಾಧುನ್ (361 ಕೋಟಿ), ರಾಮಾಯಣ (297 ಕೋಟಿ){ಆರನೇ ದಿನದ ಅಂತ್ಯಕ್ಕೆ}, ಪಿಕೆ (303 ಕೋಟಿ), ಧುರಂಧರ್ (299 ಕೋಟಿ) ಟಾಪ್ ಹತ್ತರ ಪಟ್ಟಿಯಲ್ಲಿ ಕ್ರಮವಾಗಿ ಸ್ಥಾನ ಪಡೆದುಕೊಂಡಿವೆ.
ಇನ್ನೂ ಈ ಸಿನಿಮಾ ಘೋಷಣೆಯಾದ ದಿನದಿಂದಲೇ ಚರ್ಚೆ ವಸ್ತುವಾಗಿ ಮಾರ್ಪಟ್ಟಿತ್ತು. ಇದರ ಬಜೆಟ್ ಭರ್ತಿ 4000 ಕೋಟಿ ಆಗಿದ್ದು, ಎರಡು ಸಿನಿಮಾಗಳು ನಿರ್ಮಾಪಕರಿಗೆ ಲಾಭ ತಂದುಕೊಡಲಿದೆಯಾ? ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡುತ್ತಿದೆ. ಇಲ್ಲಿವರೆಗೆ ಇದು ಸುಮಾರು 800 ಕೋಟಿ ಕಲೆಕ್ಷನ್ ಮಾಡಿದೆ. ಆದರೆ ಅದು ಬಜೆಟ್ನ ಅರ್ಧದಷ್ಟು ಗಳಿಕೆಯನ್ನು ಮಾಡಿಲ್ಲ.
ಆದರೆ, ಸಿನಿಮಾ ಬಗ್ಗೆ ಸಕಾರಾತ್ಮಕ ಭಾವನೆ ಜನರಲ್ಲಿ ಮೂಡಿದ್ದು, ಮುಂದಿನ ದಿನಗಳಲ್ಲಿ ಪ್ರೇಕ್ಷಕ ಪ್ರಭುಗಳು ಈ ಸಿನಿಮಾವನ್ನು ಬೆಂಬಲಿಸಿದರೆ ಮಾತ್ರ ಭಾರತೀಯ ಚಿತ್ರರಂಗದಲ್ಲಿ ನೂತನ ಇತಿಹಾಸ ನಿರ್ಮಾಣವಾಗುವುದು ನಿಶ್ಚಿತವಾಗಿದೆ, (ಏಜೆನ್ಸೀಸ್).