ಪಾರ್ವತಿ ತಿರುವೊತ್ತು 
ಬಾಲಿವುಡ್

‘ಕ್ಯಾಪ್ಟನ್ ಇಂಡಿಯಾ’ ಸೇರಿದ ಪಾರ್ವತಿ : ಬಾಲಿವುಡ್‌ನಲ್ಲಿ ಹೊಸ ಹೆಜ್ಜೆ ಮೂಡಿಸುತ್ತಿರುವ ‘ಮಿಲನ’ ನಟಿ

ಪ್ರಮುಖ ಮುಖ್ಯಾಂಶಗಳು

  • 2017ರ ಕರೀಬ್​ ಕರೀಬ್ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಪಾರ್ವತಿ ತಿರುವೋತ್ತು
  • ಭಾರತದ ರಕ್ಷಣಾ ಕಾರ್ಯಾಚರಣೆ ಹಿನ್ನೆಲೆಯ ಚಿತ್ರಕ್ಕೆ ಆಯ್ಕೆಯಾದ ಮಿಲನ ನಟಿ
  • ಮಲಯಾಳಂ, ತಮಿಳು, ಕನ್ನಡದಂತೆಯೇ ಹಿಂದಿಯಲ್ಲಿ ಛಾಪು ಮೂಡಿಸುತ್ತಿರುವ ನಟಿ

ಮಲಯಾಳಂ, ತಮಿಳು ಚಿತ್ರರಂಗದ ಜತೆ ಜತೆಗೆ ನಟಿ ಪಾರ್ವತಿ ತಿರುವೋತ್ತು ಬಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ. ‘ಕರೀಬ್ ಕರೀಬ್ ಸಿಂಗಲ್’ (2017) ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ್ದ ಅವರು ಬಳಿಕ ‘ಖಡಕ್ ಸಿಂಗ್’, ‘ತು ಯಾ ಮೇ’ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಹೃತಿಕ್ ರೋಷನ್ ನಿರ್ಮಾಣದ ‘ಸ್ಟೋರ್ಮ್’ ವೆಬ್ ಸರಣಿಯಲ್ಲಿ ಪಾರ್ವತಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆಯೇ, ಅವರು ಮತ್ತೊಂದು ಹಿಂದಿ ಸಿನಿಮಾಕ್ಕೆ ಆಯ್ಕೆಯಾಗಿದ್ದಾರೆ. ಕಾರ್ತಿಕ್ ಆರ್ಯನ್ ಅಭಿನಯದಲ್ಲಿ ಥ್ರಿಲ್ಲರ್ ಜಾನರ್‌ನ ‘ಕ್ಯಾಪ್ಟನ್ ಇಂಡಿಯಾ’ ಸಿನಿಮಾ ಘೋಷಣೆಯಾಗಿತ್ತು. ಇನ್ನೇನು ಸೆಟ್ಟೇರಲು ಚಿತ್ರತಂಡ ಸಿದ್ಧವಾಗಿದ್ದು, ಅದರ ನಡುವೆ ಪಾರ್ವತಿ ತಿರುವೋತ್ತು ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಭಾರತದ ಯಶಸ್ವಿಪೂರ್ಣ ರಕ್ಷಣಾ ಕಾರ್ಯಾಚರಣೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ‘ಕ್ಯಾಪ್ಟನ್ ಇಂಡಿಯಾ’ ಸಿನಿಮಾ ಮೂಡಿಬರುತ್ತಿದ್ದು, ಅದರಲ್ಲಿ ಕಾರ್ತಿಕ್ ಆರ್ಯನ್ ಪೈಲಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪಾರ್ವತಿ ತಿರುವೋತು ಪಾತ್ರವನ್ನು ಗೌಪ್ಯವಾಗಿಡಲಾಗಿದೆಯಾದರೂ, ಆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಮಹಿಳೆಯ ಪಾತ್ರದಲ್ಲಿ ಅವರು ಇರಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಪೂರ್ಣಗೊಂಡಿದ್ದು, ಸೆಪ್ಟೆಂಬರ್‌ನಿಂದ ಶೂಟಿಂಗ್ ಆರಂಭವಾಗಲಿದೆ. ‘ಚಕ್ ದೇ ಇಂಡಿಯಾ’, ‘ರಾಕೆಟ್ ಸಿಂಗ್: ಸೇಲ್ಸ್‌ಮ್ಯಾನ್ ಆಫ್ ದ ಈಯರ್’ ಖ್ಯಾತಿಯ ಶಿಮಿತ್ ಅಮೀನ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಕಾರ್ತಿಕ್, ಪಾರ್ವತಿ ಜತೆಗೆ ‘ಚಾಂದ್ ಮೇರೆ ದಿಲ್’ ನಟ ಮನೀಶ್ ಚೌದರಿ ಕಲಾಬಳಗದಲ್ಲಿರಲಿದ್ದಾರೆ. ಇನ್ನುಳಿದಂತೆ ಪಾರ್ವತಿ ತಿರುವೋತ್ತು ಸದ್ಯ ಮಲಯಾಳಂನ ‘ಪ್ರಧಮಾ ದೃಷ್ಟ್ಯಾ ಕುಟ್ಟಾಕರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್