ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಅವರ ದಾಂಪತ್ಯ ಜೀವನದ ಬಗ್ಗೆ ಆಗಾಗ್ಗೆ ಕೇಳಿಬರುವ ಟೀಕೆಗಳು ಹಾಗೂ ವದಂತಿಗಳಿಗೆ ಇದೀಗ ಆಲಿಯಾ ಖಡಕ್ ಉತ್ತರ ನೀಡಿದ್ದಾರೆ. ತಮ್ಮದು ಅಸಮಾನ ದಾಂಪತ್ಯ (Unequal Marriage) ಎಂಬ ಅಭಿಪ್ರಾಯವನ್ನು ತಳ್ಳಿಹಾಕಿರುವ ಅವರು, ಇಂತಹ ಊಹಾಪೋಹಗಳು ಆಕ್ಷೇಪಾರ್ಹ ಮತ್ತು ನೋವುಂಟುಮಾಡುವಂಥವು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೈಮ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಲಿಯಾ, ತಮ್ಮ ವೈವಾಹಿಕ ಸಂಬಂಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ರಣಬೀರ್ ಅವರೊಂದಿಗಿನ ಸಂಬಂಧದಲ್ಲಿ ತಮಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿಲ್ಲ ಅಥವಾ ತಾವು ಅಸಹಾಯಕ ಸ್ಥಿತಿಯಲ್ಲಿದ್ದೇನೆ ಎಂಬ ರೀತಿಯ ಅಭಿಪ್ರಾಯಗಳನ್ನು ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಮಹಿಳೆಯರು ತಮ್ಮ ಮನಸ್ಸು ಮತ್ತು ಭಾವನೆಗಳನ್ನು ಅರ್ಥಮಾಡಿಕೊಂಡು, ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಯಾವಾಗಲೂ ಪ್ರತಿಪಾದಿಸುತ್ತೇನೆ. ಹೀಗಿರುವಾಗ, ಕಲ್ಪಿತ ಸನ್ನಿವೇಶವೊಂದರಲ್ಲಿ ಕಷ್ಟ ಅನುಭವಿಸುತ್ತಿರುವ ಮಹಿಳೆಯಂತೆ ನನ್ನನ್ನು ಬಿಂಬಿಸುವುದು ಆಕ್ಷೇಪಾರ್ಹ ಎಂದು ಆಲಿಯಾ ಹೇಳಿದ್ದಾರೆ.
2022ರಲ್ಲಿ ದೀರ್ಘಕಾಲ ಪ್ರೀತಿಸಿದ ಬಳಿಕ ಆಲಿಯಾ ಮತ್ತು ರಣಬೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ರಾಹಾ ಎಂಬ ಮಗಳಿದ್ದಾಳೆ. ಆದರೂ, ಇಬ್ಬರ ನಡುವಿನ ಸಂಬಂಧದ ಬಗ್ಗೆ ಕೆಲವರು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಮಾಡುತ್ತಿರುತ್ತಾರೆ. ತಮ್ಮ ಮದುವೆಯ ಬಗ್ಗೆ ಇಂತಹ ವದಂತಿಗಳು ಮುಂದುವರಿಯಲು ಕಾರಣವೇನು ಎಂಬುದನ್ನೂ ಆಲಿಯಾ ವಿವರಿಸಿದ್ದಾರೆ. ಅವರ ಸಂಬಂಧವು ಸಮಾಜದಲ್ಲಿ ಮದುವೆಯ ಬಗ್ಗೆ ಇರುವ ಕೆಲವು ಸಾಂಪ್ರದಾಯಿಕ ಕಲ್ಪನೆಗಳಿಗೆ ಹೊಂದಿಕೆಯಾಗದಿರುವುದೇ ಇಂತಹ ಚರ್ಚೆಗಳಿಗೆ ಕಾರಣವಾಗಿರಬಹುದು ಎಂದಿದ್ದಾರೆ.
ಯಾವುದೇ ಪ್ರಯತ್ನವಿಲ್ಲದೆ ನಮ್ಮನ್ನು ಅರ್ಥಮಾಡಿಕೊಳ್ಳುವವರು, ನಾವು ಏನನ್ನೂ ಹೇಳದಿದ್ದರೂ ನಮ್ಮ ಮಾತುಗಳನ್ನು ಆಲಿಸುವವರು ಸಿಕ್ಕಾಗಲೇ ಸಂಬಂಧದ ಬುನಾದಿ ಗಟ್ಟಿಯಾಗುತ್ತದೆ. ನನಗೆ ರಣಬೀರ್ ಅಂಥ ವ್ಯಕ್ತಿ. ಅದುವೇ ನಮ್ಮ ನೈಜ ಸಂಬಂಧ ಎಂದು ಪತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂದರ್ಶನದಲ್ಲಿ ಆಲಿಯಾ ತಮ್ಮ ವೃತ್ತಿಜೀವನದ ಆದ್ಯತೆಗಳ ಬಗ್ಗೆಯೂ ಮಾತನಾಡಿದ್ದಾರೆ. ಉದ್ಯಮ, ಮನರಂಜನೆ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಉದಯೋನ್ಮುಖ ನಾಯಕರನ್ನು ಗೌರವಿಸುವ ಟೈಮ್100 ನೆಕ್ಸ್ಟ್ ಇಂಡಿಯಾದ ಮೊದಲ ಪಟ್ಟಿಯಲ್ಲೂ ಆಲಿಯಾ ಸ್ಥಾನ ಪಡೆದಿದ್ದಾರೆ. ಮದುವೆ ಹಾಗೂ ತಾಯಿಯಾದ ಬಳಿಕ ಸಿನಿಮಾ ಆಯ್ಕೆ ಮಾಡುವ ವಿಧಾನದಲ್ಲಿ ಬದಲಾವಣೆಯಾಗಿದೆ ಎಂದಿರುವ ಅವರು, ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಉತ್ತಮ ಗುಣಮಟ್ಟದ ಕಥೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಸಂಖ್ಯೆಗೆ ಹೋಲಿಸಿದರೆ ಚಿತ್ರದ ಗುಣಮಟ್ಟವೇ ಈಗ ಹೆಚ್ಚು ಮುಖ್ಯವಾಗಿದೆ ಎಂಬುದು ಅವರ ಅಭಿಪ್ರಾಯ.
ಚಿತ್ರರಂಗದಲ್ಲಿ ಕಲಾವಿದರು ಹಾಗೂ ತಂತ್ರಜ್ಞರಿಗೆ ನ್ಯಾಯಯುತ ಕೆಲಸದ ಅವಧಿ ಇರಬೇಕು ಎಂದು ಆಲಿಯಾ ಈ ಹಿಂದೆಯೂ ಒತ್ತಾಯಿಸಿದ್ದರು. ನಿರ್ಮಾಪಕಿಯಾಗಿಯೂ ತಮ್ಮ ಪ್ರಭಾವವನ್ನು ಬಳಸಿಕೊಂಡು ಚಿತ್ರರಂಗದ ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆ ತರಲು ಬಯಸಿದ್ದಾರೆ. ನ್ಯಾಯಯುತ ಕೆಲಸದ ಅವಧಿ ಇದ್ದರೆ ಕೆಲಸದ ದಕ್ಷತೆ ಹೆಚ್ಚುತ್ತದೆ. ಕೆಲಸದ ಸಮಯದ ಬಗ್ಗೆ ಮಿತಿಗಳನ್ನು ನಿಗದಿಪಡಿಸಿದರೆ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ಯಾರಿಗೂ ಇರಬಾರದು. ಕೆಲಸದ ಅವಧಿ ವ್ಯಕ್ತಿಗಳ ಇಚ್ಛೆಗೆ ಅನುಗುಣವಾಗಿ ಅನಿಯಂತ್ರಿತವಾಗಿರಬಾರದು ಎಂದು ಅವರು ಹೇಳಿದ್ದಾರೆ.
ಆಲಿಯಾ ಭಟ್ ಕೊನೆಯದಾಗಿ ಆಲ್ಫಾ ಸಿನಿಮಾದಲ್ಲಿ ಗೂಢಚಾರಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಲವ್ ಆ್ಯಂಡ್ ವಾರ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದರ ಜೊತೆಗೆ ತುಂಭಾಡ್ 2ಸಿನಿಮಾದಲ್ಲೂ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ.