ತಮಗಿರುವ 'ಡಿಸ್ಕಾಲ್ಕುಲಿಯಾ'ಎನ್ನುವ ಕಾಯಿಲೆ ಬಗ್ಗೆ ಮಾತನಾಡಿರುವ ತಾರಾ ಸುತಾರಿಯಾ
- ಟಾಕ್ಸಿಕ್ ನಟಿ ತಾರಾ ಸುತಾರಿಯಾ
- ತಮಗಿರುವ 'ಡಿಸ್ಕಾಲ್ಕುಲಿಯಾ'ಎನ್ನುವ ಕಾಯಿಲೆ ಬಗ್ಗೆ ಮಾತನಾಡಿರುವ ನಟಿ
- ಸಂಖ್ಯೆಗಳು ಮತ್ತು ಹಣಕಾಸಿನ ವಿಚಾರದಲ್ಲಿ ತಮಗಿರುವ ಸವಾಲುಗಳ ಕುರಿತು ನಟಿ ಬಿಚ್ಚಿಟ್ಟ ರಹಸ್ಯವೇನು?
ಮುಂಬೈ: ಬಾಲಿವುಡ್‌ನಲ್ಲಿ ಅಂದದ ಜೊತೆಗೆ ನಟನೆಯಿಂದಲೂ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿರುವ ಚೆಲುವೆ ಎಂದರೆ ಅದು ತಾರಾ ಸುತಾರಿಯಾ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರಿಗೂ ಇಕೆ ಈದೀಗ ಪರಿಚಿತಳಾಗಿದ್ದಾಳೆ.
ಆದರೆ, ನಟಿ ಈ ಬಾರಿ ತಮ್ಮ ನಟನೆ ಬದಲು ವೈಯಕ್ತಿಕ ಜೀವನದ ರಹಸ್ಯವೊಂದನ್ನು ಬಿಚ್ಚಿಡುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು, ನಟಿ ತಾರಾ (Tara Sutaria on Dyscalculia) ತಮಗೆ ನಂಬರ್ಗಳು ಗಣಿತ ಹಾಗೂ ಲೆಕ್ಕಾಚಾರದ ಕುರಿತಾದ ಕಾಯಿಲೆಯೊಂದಿದೆ ಎಂದು ಬಹಿರಂಗ ಪಡಿಸಿದ್ದಾರೆ.
ನನಗೆ ನಂಬರ್ಸ್ ಜೊತೆ ಕೆಲಸ ಮಾಡೋಕೆ ಆಗಲ್ಲ!
ಇತ್ತೀಚೆಗೆ ಮಾಧ್ಯಮವೊಂದರ ಜೊತೆ ಮಾತನಾಡಿದ ತಾರಾ ಸುತಾರಿಯಾ, ತಮ್ಮ ಹಣಕಾಸು ಹಾಗೂ ಕಲಿಕಾ ಅಸಾಮರ್ಥ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನನಗೆ ಕಲಿಕಾ ಅಸಾಮರ್ಥ್ಯವಿದೆ, ಅದರಲ್ಲಿಯೂ ಮುಖ್ಯವಾಗಿ ಗಣಿತಕ್ಕೆ ಸಂಬಂಧಿಸಿದ ಕಲಿಕಾ ಅಸಾಮರ್ಥ್ಯವಿದೆ. ಇದನ್ನು 'ಡಿಸ್ಕಾಲ್ಕುಲಿಯಾ' (Dyscalculia) ಅಂತ ಕರೆಯುತ್ತಾರೆ. ನಾನು ಹಣಕಾಸಿನ ವಿಚಾರದಲ್ಲಿ ಪ್ರಯತ್ನ ಮಾಡುತ್ತೇನೆ, ಆದರೆ ಆಗಾಗ್ಗೆ ತಪ್ಪುಗಳನ್ನು ಮಾಡುತ್ತೇನೆ ಎಂದು ತಾರಾ ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ದೌರ್ಬಲ್ಯಗಳನ್ನು ಬಹಿರಂಗಪಡಿಸಲು ಹಿಂದೆಮುಂದೆ ನೋಡುತ್ತಾರೆ. ಆದರೆ ತಾರಾ ಸುತಾರಿಯಾ ಯಾವುದೇ ಮುಜುಗರವಿಲ್ಲದೆ ತಮ್ಮ ಸಮಸ್ಯೆ ಬಗ್ಗೆ ಮಾತನಾಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಹಣಕಾಸಿನ ವಿಷಯಗಳನ್ನು ನಿಭಾಯಿಸಲು ತಂದೆ ಹಾಗೂ ಅಕೌಂಟ್ಸ್ ಟೀಮ್ ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಏನಿದು ಡಿಸ್ಕಾಲ್ಕುಲಿಯಾ ಕಾಯಿಲೆ?
ಡಿಸ್ಕಾಲ್ಕುಲಿಯಾ ಎಂದರೆ ಗಣಿತ ಮತ್ತು ಸಂಖ್ಯಾತ್ಮಕ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವ ಒಂದು ರೀತಿಯ ಕಲಿಕಾ ಅಸಾಮರ್ಥ್ಯವಾಗಿದೆ. ಇದನ್ನು ಕೆಲವರು ಸರಳವಾಗಿ "ಮ್ಯಾಥ್ಸ್ ಡಿಸ್ಲೆಕ್ಸಿಯಾ" ಎಂದೂ ಕರೆಯುತ್ತಾರೆ.
ಈ ಸಮಸ್ಯೆ ಇರುವವರಿಗೆ ದಿನನಿತ್ಯದ ಲೆಕ್ಕಾಚಾರಗಳನ್ನು ಮಾಡಲು, ಸಂಖ್ಯೆಗಳನ್ನು ಸರಿಯಾಗಿ ಗ್ರಹಿಸಲು ಮತ್ತು ನೆನಪಿನಲ್ಲಿಟ್ಟುಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಇದು ವ್ಯಕ್ತಿಯ ಬುದ್ಧಿವಂತಿಕೆ ಅಥವಾ ಪ್ರತಿಭೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮಹಿಳೆಯರಿಗೆ ಹಣಕಾಸಿನ ಜ್ಞಾನ ಮುಖ್ಯ ಎಂದ ನಟಿ!
ಸಂಖ್ಯೆಗಳ ಜೊತೆ ತಮಗೆ ಕಷ್ಟವಿದ್ದರೂ, ಮಹಿಳೆಯರು ತಮ್ಮ ಬ್ಯಾಂಕಿಂಗ್ ವ್ಯವಹಾರಗಳು, ದಾಖಲೆಗಳು ಹಾಗೂ ಹಣಕಾಸಿನ ವಿಷಯಗಳನ್ನು ಸ್ವತಃ ತಿಳಿದುಕೊಳ್ಳುವುದು ತುಂಬಾ ಮುಖ್ಯ ಎಂದು ತಾರಾ ಅಭಿಪ್ರಾಯಪಟ್ಟಿದ್ದಾರೆ. ಯಾರ ಮೇಲೂ ಸಂಪೂರ್ಣವಾಗಿ ಅವಲಂಬಿತರಾಗದೆ, ತಾವೇ ಹಣಕಾಸಿನ ವಿಚಾರಗಳನ್ನು ಕಲಿಯಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇನ್ನು ತಮ್ಮ ಹೂಡಿಕೆಗಳ ಬಗ್ಗೆ ಮಾತನಾಡಿರುವ ನಟಿ, ತಮಗೆ ರಿಯಲ್ ಎಸ್ಟೇಟ್ ಮತ್ತು ಮನೆಗಳ ಮೇಲೆ ಹೆಚ್ಚು ಆಸಕ್ತಿಯಿದೆ ಎಂದು ತಿಳಿಸಿದ್ದಾರೆ. ತಾವಿನ್ನೂ ಈ ಬಗ್ಗೆ ಕಲಿಯುತ್ತಿದ್ದು, ಸರಿಯಾದ ತಿಳುವಳಿಕೆ ಹೊಂದಿರುವ ತಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ, (ಏಜನ್ಸೀಸ್).