Nikita Rawal ಚಿತ್ರ Instagram
- ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟಿ ನಿಕಿತಾ ರಾವಲ್ ಅವರಿಗೆ ಮಹಿಳಾ ಅಭಿಮಾನಿಯೊಬ್ಬರು ಅನಿರೀಕ್ಷಿತವಾಗಿ ತುಟಿಗೆ ಮುತ್ತಿಟ್ಟಿದ್ದರು
- ಈ ಮುಜುಗರದ ಪ್ರಸಂಗದ ನಂತರ ಇದೀಗ ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮೌನ ಮುರಿದಿದ್ದಾರೆ
- ನಾನು ಯಾವುದೇ ತಪ್ಪನ್ನೂ ಮಾಡಿಲ್ಲ ಮತ್ತು ನನ್ನ ಬಳಿ ಮುಚ್ಚಿಡುವಂತದ್ದು ಏನೂ ಇಲ್ಲ ಎಂದ ನಿಕಿತಾ
ಮುಂಬೈ: ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟಿ ನಿಕಿತಾ ರಾವಲ್ ಅವರಿಗೆ ಮಹಿಳಾ ಅಭಿಮಾನಿಯೊಬ್ಬರು ಅನಿರೀಕ್ಷಿತವಾಗಿ ತುಟಿಗೆ ಮುತ್ತಿಕ್ಕಿದ್ದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಮುಜುಗರದ ಪ್ರಸಂಗದ ನಂತರ ಇದೀಗ ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮೌನ ಮುರಿದಿದ್ದಾರೆ.
ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಟಿ
ತಮಗೆ ಬೆಂಬಲವಾಗಿ ನಿಂತ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿರುವ ನಿಕಿತಾ, ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಾನು ಯಾವುದೇ ತಪ್ಪನ್ನೂ ಮಾಡಿಲ್ಲ ಮತ್ತು ನನ್ನ ಬಳಿ ಮುಚ್ಚಿಡುವಂತದ್ದು ಏನೂ ಇಲ್ಲ. ನಾನು ಯಾವಾಗಲೂ ಸತ್ಯದ ಪರವಾಗಿಯೇ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಜಗತ್ತಿನಾದ್ಯಂತ ಹರಿದುಬಂದ ಬೆಂಬಲ
ಮತ್ತೊಂದು ಭಾವನಾತ್ಮಕ ಟಿಪ್ಪಣಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರತ ಮಾತ್ರವಲ್ಲದೆ ಪ್ರಪಂಚದ ನಾನಾ ಮೂಲೆಗಳಿಂದ ಸಾವಿರಾರು ಜನರು ನನಗೆ ಬೆಂಬಲ ನೀಡಿ ಸಂದೇಶ ಕಳುಹಿಸಿದ್ದಾರೆ. ನನ್ನ ಆರೋಗ್ಯ ವಿಚಾರಿಸಿ ಪ್ರೀತಿ ತೋರಿಸಿ, ಗೌರವ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಪ್ರತಿಯೊಬ್ಬರ ಸಂದೇಶಕ್ಕೂ ಪ್ರತ್ಯೇಕವಾಗಿ ಉತ್ತರಿಸಲು ಸಾಧ್ಯವಾಗದೇ ಇರಬಹುದು, ಆದರೆ ನಿಮ್ಮ ಪ್ರತಿಯೊಂದು ಬೆಂಬಲದ ಮಾತುಗಳು ನನ್ನ ಹೃದಯವನ್ನು ಮುಟ್ಟಿವೆ" ಎಂದು ಬರೆದುಕೊಂಡಿದ್ದಾರೆ.
ಘಟನೆಯ ಹಿನ್ನಲೆ ಏನು?
ನಟಿ ನಿಕಿತಾ ರಾವಲ್ ಅವರು ಇತ್ತೀಚಿನ ಸಾರ್ವಜನಿಕ ಕಾರ್ಯಕ್ರಮವೊಂದರ ರೆಡ್ ಕಾರ್ಪೆಟ್‌ನಲ್ಲಿ ಫೋಟೋಕ್ಕೆ ಪೋಸ್ಟ್ ನೀಡುತ್ತಿರುವಾಗ ಅಲ್ಲಿಗೆ ಬಂದ ಮಹಿಳಾ ಅಭಿಮಾನಿಯೊಬ್ಬರು ಅವರ ಅನುಮತಿಯಿಲ್ಲದೆ ಹಠಾತ್ತನೆ ಅವರ ತುಟಿಗೆ ಮುತ್ತಿಟ್ಟಿದ್ದರು ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇನು?
ಶನಿವಾರ (ಆ.08) ರಂದು ನಡೆದ ಕಾರ್ಯಕ್ರಮವೊಂದರಲ್ಲಿ ನಿಕಿತಾ ರಾವಲ್ ರೆಡ್ ಕಾರ್ಪೆಟ್ ಮೇಲೆ ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ನಟಿಯ ಬಳಿ ಬಂದು ಸೆಲ್ಫಿ ವಿನಂತಿಸಿದರು. ನಿಕಿತಾ ಕೂಡ ಸೌಜನ್ಯದಿಂದ ಮುಗುಳುನಗುತ್ತಾ ಫೋಟೋಗೆ ಅನುಮತಿ ನೀಡಿದರು. ಆದರೆ, ಫೋಟೋ ತೆಗೆಸಿಕೊಳ್ಳುತ್ತಿದ್ದಂತೆ ಆ ಮಹಿಳೆ ಮೊದಲು ನಿಕಿತಾ ಅವರ ಕೆನ್ನೆಗೆ ಮುತ್ತಿಟ್ಟರು. ತಕ್ಷಣವೇ ಅವರನ್ನು ಬಲವಂತವಾಗಿ ಎಳೆದುಕೊಂಡು ಕ್ಯಾಮರಾಗಳ ಮುಂದೆ ಅವರ ತುಟಿಗೆ ಮುತ್ತಿಟ್ಟಿದ್ದು ಎಲ್ಲೆಡೆ ವೈರಲ್ ಆಗಿತ್ತು.
ಈ ದಿಢೀರ್ ನಡವಳಿಕೆಯಿಂದ ತೀವ್ರ ಕಳವಳಗೊಂಡ ನಿಕಿತಾ, ತಕ್ಷಣವೇ ಆಕೆಯನ್ನು ತಡೆಯಲು ಪ್ರಯತ್ನಿಸಿದರು. ತಮ್ಮ ಬಾಯಿಗೆ ಕೈಯಿಟ್ಟುಕೊಂಡು ತೀವ್ರ ಮುಜುಗರ ಹಾಗೂ ಆಘಾತದಿಂದ ದೂರ ಸರಿಯಲು ಪ್ರಯತ್ನಿಸಿದರೂ, ಆ ಮಹಿಳೆ ನಟಿಯನ್ನು ಬಿಡದೇ ಬಲವಂತವಾಗಿ ಕೆನ್ನೆಗೆ ಮುತ್ತಿಟ್ಟು ಅಲ್ಲಿಂದ ಹೊರಟು ಹೋದರು.
ಆದಾಗ್ಯೂ, ನಟಿಯ ಒಪ್ಪಿಗೆ ಇಲ್ಲದಿರುವುದು ಹಾಗೂ ಅಸಮಾಧಾನ ವೀಡಿಯೋದಲ್ಲಿ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಾರೆಯರ ಸುರಕ್ಷತೆ ಮತ್ತು ಖಾಸಗಿತನದ ಕುರಿತು ಈ ವಿಡಿಯೋ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿತ್ತು (ಏಜೆನ್ಸೀಸ್).