ಒಂದೊಂದು ಜಾನರ್ ಸಿನಿಮಾಗಳಿಗೆ ಒಂದೊಂದು ರೀತಿಯ ಪ್ರೇಕ್ಷಕರಿದ್ದಾರೆ. ಆದರೆ, ಸಾಧಕರು, ಸಾಹಸಿಗಳ ಕುರಿತ ನೈಜ
ಘಟನೆಯಾಧಾರಿತ ಚಿತ್ರಗಳು ಎಲ್ಲ ಬಗೆಯ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತವೆ. ಇನ್ನು ಕರೊನಾ ಸಮಯದಲ್ಲಿ ಮನೆಗಳಲ್ಲಿ ಟಿವಿ, ಒಟಿಟಿಗಳಿಗೆ ಅಂಟಿಕೊಂಡ ಪ್ರೇಕ್ಷಕರು ಎಲ್ಲ ರೀತಿಯ ಕಂಟೆಂಟ್ಗಳಿಗೂ ತೆರೆದುಕೊಂಡಿದ್ದು, ವಿಶೇಷವಾಗಿ ಬಯೋಪಿಕ್ಗಳಿಗೆ ಹೆಚ್ಚು ಪ್ರಾಮುಖ್ಯ ದೊರೆತಿದೆ. ಇನ್ನು ಕರೊನಾ ಬಳಿಕ ಪ್ಯಾನ್ ಇಂಡಿಯಾ ಪರಿಕಲ್ಪನೆ ವೇಗ ಪಡೆದಂತೆ, ಇತ್ತೀಚಿನ ವರ್ಷಗಳಲ್ಲಿ ನೈಜ ಘಟನೆ ಅಥವಾ ನೈಜ ವ್ಯಕ್ತಿಗಳ ಕುರಿತ ಸಿನಿಮಾಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಬಾಲಿವುಡ್ನಲ್ಲಿ ಅತಿಹೆಚ್ಚು ಬಯೋಪಿಕ್ಗಳು ಮೂಡಿಬರುತ್ತಿವೆ. ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 90ಕ್ಕೂ ಅಧಿಕ ನೈಜ ಘಟನೆಯಾಧಾರಿತ ಸಿನಿಮಾಗಳು ರಿಲೀಸ್ ಆಗಿದ್ದು, 2027ರ ಅಂತ್ಯಕ್ಕೆ ಈ ಸಂಖ್ಯೆ 100 ದಾಟುವ ನಿರೀಕ್ಷೆ ಇದೆ. 2026ರಲ್ಲೇ ಏಳು ತಿಂಗಳಲ್ಲಿ 12 ಬಯೋಪಿಕ್ಗಳು ತೆರೆಗೆ ಬಂದಿದ್ದು, ಇನ್ನು ಐದು ತಿಂಗಳಲ್ಲಿ ಈ ಸಂಖ್ಯೆ 20 ದಾಟಲಿದೆ. ಈ ಕುರಿತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.
ಐದು ವರ್ಷಗಳ ರಿಪೋರ್ಟ್
ಕರೊನಾ ಸಮಯದಲ್ಲಿ ನೈಜ ಘಟನೆಯಾಧಾರಿತ ಚಿತ್ರಗಳತ್ತ ಪ್ರೇಕ್ಷಕರ ಒಲವನ್ನು ಅರಿತು, ಬಾಲಿವುಡ್ ನಿರ್ಮಾಣ ಸಂಸ್ಥೆಗಳು ನಾ ಮುಂದು ತಾ ಮುಂದು ಅಂತ ಬಯೋಪಿಕ್ಗಳನ್ನು ನಿರ್ಮಿಸುತ್ತಿವೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆಯೂ ಏರುತ್ತಿದೆ. 2021ರಲ್ಲಿ 15, 2022 13 ಇದ್ದ ಈ ಸಂಖ್ಯೆ 2023 ಮತ್ತು 24ರಲ್ಲಿ 16 ಮುಟ್ಟಿದ್ದು, 2025ರಲ್ಲಿ 20 ಆಗಿವೆ.
2026ರಲ್ಲಿ ಇದುವರೆಗೆ...
ಈ ವರ್ಷ ಮೊದಲ ಏಳು ತಿಂಗಳಲ್ಲಿ 12 ಸತ್ಯ ಘಟನೆಯಾಧಾರಿತ ಸಿನಿಮಾಗಳು ರಿಲೀಸ್ ಆಗಿವೆ. 1971ರ ಭಾರತ - ಪಾಕ್ ಯುದ್ಧದ ಕುರಿತ "ಇಕ್ಕೀಸ್' ಮತ್ತು "ಬಾರ್ಡರ್ 2', ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್ನ ವೀರಸೇನಾನಿ ನೀರಾ ಆರ್ಯ ಜೀವನಾಧಾರಿತ ಸಿನಿಮಾ "ಆಜಾದ್ ಭಾರತ್', ಆರ್ಎಸ್ಎಸ್ ನೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯ "ಶತಕ್ : ಸಂಘ್ ಕಾ 100 ವರ್ಷ್', ಲವ್ ಜಿಹಾದ್ ಪ್ರಕರಣಗಳ ಕುರಿತ "ದ ಕೇರಳ ಸ್ಟೋರಿ 2', ಪಾಕಿಸ್ತಾನದಲ್ಲಿ ಭಾರತೀಯ ಗೂಢಚಾರರ ಕುರಿತ "ಧುರಂಧರ್ 2 : ದ ರಿವೆಂಜ್', ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ "ರಾಜಾ ಶಿವಾಜಿ', ನೀಮ್ ಕರೋಲಿ ಬಾಬಾ ಬಯೋಪಿಕ್ "ಶ್ರೀ ಬಾಬಾ ನೀಬ್ ಕರೋರಿ ಮಹಾರಾಜ್', 1990ರ ದಶಕದಲ್ಲಿ ಭಾರತ ಎದುರಿಸಿದ ಆರ್ಥಿಕ ಹಿಂಜರಿತ ಮತ್ತು ಆರ್ಬಿಐ ಗೌವರ್ನರ್ ಎಸ್. ವೆಂಕಟರಮನ್ ಅವರ ಕ್ರಮಗಳ ಕುರಿತ "ಗೌವರ್ನರ್', ಮುಂಬೈ ಭಯೋತ್ಪಾದಕ ದಾಳಿ ಸಮಯದಲ್ಲಿ ಕಾಮಾ ಆಸ್ಪತ್ರೆಯ ಸಿಬ್ಬಂದಿ 20 ಗರ್ಭಿಣಿಯರನ್ನು ರಕ್ಷಿಸಿದ ಕುರಿತ "ಭಾರತ್ ಭಾಗ್ಯವಿಧಾತಾ', 1990ರ ದಶಕದಲ್ಲಿ ಅನುಮಾನಾಸ್ಪದವಾಗಿ ಕಣ್ಮರೆಯಾದ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಕಾಲ್ರಾ ಜೀವನದ ಬಗೆಗಿನ "ಸಟ್ಲುಜ್' ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ.
ತೆರೆಗೆ ಬರಲಿರುವ ಚಿತ್ರಗಳು
ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ವಾಯುಸೇನೆಯ ಕಾರ್ಯಾಚರಣೆ ಕುರಿತ "ಆಪರೇಷನ್ ಸಫೇದ್ ಸಾಗರ್', ನೀಮ್ ಕರೋಲಿ ಬಾಬಾ ಕುರಿತ "ಹನುಮಾನ್ ಅಂಶ್', ಹಾಗೂ ಸ್ವಾತಂತ್ರ್ಯಪೂರ್ವ ಭಾರತೀಯ ಉದ್ಯಮಿ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು ಜೀವನಾಧಾರಿತ "ಜಿಡಿಎನ್' ಚಿತ್ರ ಇದೇ ಶುಕ್ರವಾರ (ಆ. 7) ರಿಲೀಸ್ ಆಗುತ್ತಿದ್ದು, ಭಾರತ ಮತ್ತು ಪಾಕಿಸ್ತಾನ ವಿಭಜನೆ ಕುರಿತ "ಬಟ್ವಾರಾ 1947' (ಆ.14) ತೆರೆಗೆ ಬರಲು ರೆಡಿಯಾಗಿದೆ. ಹಾಗೇ ಭಾರತ ಮತ್ತು ಚೀನಾ ನಡುವಿನ ಗಲ್ವಾನ್ ಕಣಿವೆ ಕದನದ ಕುರಿತ "ಮಾತೃಭೂಮಿ', ಲಾವಣಿ ಡಾನ್ಸರ್ ವಿಠಾಬಾಯಿ ನಾರಾಯಣಗಾಂವ್ಕರ್ ಜೀವನಾಧಾರಿತ "ಈಠಾ', ಲಂಡನ್ನಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಹೋರಾಟಗಾರರ ಕುರಿತ "ದ ಇಂಡಿಯಾ ಹೌಸ್', ಭಾರತದ ಚುನಾವಣಾ ಪ್ರಕ್ರಿಯೆ ಮತ್ತು ಸವಾಲುಗಳ ಕುರಿತ "ಹಮ್ ಹಿಂದುಸ್ಥಾನಿ', ಸರ್ಕಾರಿ ಅಭಿಯೋಜಕ ಉಜ್ವಲ್ ನಿಕಮ್ ಬಯೋಪಿಕ್ "ಪ್ರಹಾರ್', ಅಮೆರಿಕಗೆ ವಲಸೆ ಹೋಗುವ ಭಾರತೀಯ ಕುಟುಂಬ ಎದುರಿಸುವ ಸವಾಲುಗಳ ಕುರಿತ ಸಿನಿಮಾ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ಜೀವನಾಧಾರಿತ "ಕಲಾಮ್', ಭಾರತೀಯ ಸಿನಿಮಾ ಲೋಕದ ದಿಗ್ಗಜ ವಿ. ಶಾಂತಾರಾಮ್ ಬಯೋಪಿಕ್, ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಗುರೂಜಿ ಜೀವನಾಧಾರಿತ "ವೈಟ್', ನಿವೃತ್ತ ಮುಂಬೈ ಪೊಲೀಸ್ ಕಮಿಷನರ್ ರಾಕೇಶ್ ಮರಿಯಾ ಬಯೋಪಿಕ್ "ಮರಿಯಾ ಐಪಿಎಸ್', ಬಾಲಿವುಡ್ ನಟಿ ಮಧುಬಾಲಾ ಬಯೋಪಿಕ್, ಕ್ರಿಕೆಟಿಗ ಸೌರವ್ ಗಂಗೂಲಿ ಜೀವನಾಧಾರಿತ "ದಾದಾ'... ಹೀಗೆ ಸಾಲು ಸಾಲು ಸಿನಿಮಾಗಳು ವಿವಿಧ ಹಂತದಲ್ಲಿವೆ. ಕೆಲವು ರಿಲೀಸ್ ಡೇಟ್ ಘೋಷಿಸಿಕೊಂಡಿದ್ದು, ಕೆಲವು ಇನ್ನಷ್ಟೇ ಮಾಹಿತಿ ನೀಡಬೇಕಿದೆ.