Mohanlal - Ayushman Khurana 
ಬಾಲಿವುಡ್

Mohanlal - Ayushman Khurana : ಘೋಷಣೆಗೂ ಮುನ್ನವೇ ಸ್ಥಗಿತಗೊಂಡ ಸ್ಟಾರ್​ ಕಾಂಬೊ ಚಿತ್ರ

Mohanlal - Ayushman Khurana -
ಎಲ್ಲ ಭಾಷೆಗಳ ಸ್ಟಾರ್​ ನಟರು ಕೂಡ ಈಗ ಪ್ಯಾನ್​ ಇಂಡಿಯಾ ಹೊರಟಿದ್ದಾರೆ. ಹೀಗಾಗಿಯೇ ಬೇರೆ ಬೇರೆ ಭಾಷೆಗಳಲ್ಲೂ ನಟಿಸುತ್ತಿದ್ದಾರೆ. ಎಲ್ಲೆಡೆ ಸಲ್ಲುವ ಮೂಲಕ ಮಾರ್ಕೆಟ್​ ವಿಸ್ತರಿಸಿಕೊಳ್ಳುವ ಐಡಿಯಾ ಅವರದು. ಅದರಂತೆ ಮಾಲಿವುಡ್​ ನಟ ಮೋಹನ್​ ಲಾಲ್​ ಮತ್ತು ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ಒಟ್ಟಿಗೆ ನಟಿಸಬೇಕಿತ್ತು. "2018', "ತುಡಕ್ಕುಮ್​' ಖ್ಯಾತಿಯ ಜೂಡ್​ ಆ್ಯಂಟನಿ ಜೋಸೆಫ್​ ನಿರ್ದೇಶನದಲ್ಲಿ, ಬಾಲಿವುಡ್​ ನಿರ್ಮಾಣ ಸಂಸ್ಥೆ ಈ ಸಿನಿಮಾ ನಿರ್ಮಿಸಬೇಕಿತ್ತು. ಆದರೆ, ಘೋಷಣೆಗೂ ಮುನ್ನವೇ ಚಿತ್ರ ಸ್ಥಗಿತಗೊಂಡಿದೆ. ಮೋಹನ್​ ಲಾಲ್​ ಪಾತ್ರಕ್ಕೆ ಕತ್ತರಿ ಹಾಕಲು ಆಯುಷ್ಮಾನ್​ ತಿಳಿಸಿದ್ದೇ ಅದಕ್ಕೆ ಕಾರಣ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಜೂಡ್​, "ಕಥೆ ಕೇಳಿ ಆಯುಷ್ಮಾನ್​ ತುಂಬ ಖುಷಿ ಪಟ್ಟಿದ್ದರು. ಆದರೆ, ದುರಾದೃಷ್ಟವಶಾತ್​ ಈ ಸಿನಿಮಾ ಆಗುತ್ತಿಲ್ಲ. ಹಾಗಂತ ಅದಕ್ಕೆ ಅವರು ಕಾರಣರಲ್ಲ' ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಆಯುಷ್ಮಾನ್​, "ಜೂಡ್​ ನಾನು ನಿಮ್ಮ ಸಿನಿಮಾಗಳ ಅಭಿಮಾನಿ. ನಿಮ್ಮ ಜತೆ ಕೆಲಸ ಮಾಡುವ ಅವಕಾಶ ಆದಷ್ಟು ಬೇಗ ಸಿಗಲಿ ಎಂದು ಆಶಿಸುವೆ. ಮೋಹನ್​ ಲಾಲ್​ ಸರ್​ ಒಬ್ಬ ಲೆಜೆಂಡ್​. ಒಂದಲ್ಲ ಒಂದು ದಿನ ಅವರ ಜತೆ ತೆರೆ ಹಂಚಿಕೊಳ್ಳುವಷ್ಟು ಅರ್ಹನಾಗುವ ಭರವಸೆ ನನಗಿದೆ' ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, ಬಾಲಿವುಡ್​ ನಿರ್ಮಾಣ ಸಂಸ್ಥೆ ಮೋಹನ್​ ಲಾಲ್​ ಪಾತ್ರವನ್ನು ಕಡಿಮೆ ಮಾಡಲು ಜೂಡ್​ಗೆ ತಿಳಿಸಿತ್ತಂತೆ. ಆದರೆ, ನಿರ್ದೇಶಕ ಅದಕ್ಕೊಪ್ಪದ ಕಾರಣ ಸಿನಿಮಾ ಸ್ಥಗಿತಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.