ಮನೋಜ್ ಬಾಜಪೈ 
ಬಾಲಿವುಡ್

ಗಾಂಧಿ ಅವತಾರದಲ್ಲಿ ಮನೋಜ್ ಬಾಜಪೈ : ರಾಷ್ಟ್ರಪಿತ ಜೀವನಾಧರಿತ ಚಿತ್ರಕ್ಕೆ ಸುಧೀರ್ ಮಿಶ್ರಾ ಆ್ಯಕ್ಷನ್-ಕಟ್

ಪ್ರಮುಖ ಮುಖ್ಯಾಂಶಗಳು

  • ಹಿಂದಿಯಲ್ಲಿ ಮೂಡಿಬರಲಿದೆ ಗಾಂಧಿ ಕುರಿತ ಸಿನಿಮಾ
  • ‘ಚಮೇಲಿ’ ಖ್ಯಾತಿಯ ನಿರ್ದೇಶಕ ಸುಧೀರ್ ಮಿಶ್ರಾ ಆ್ಯಕ್ಷನ್​-ಕಟ್
  • ಐತಿಹಾಸಿಕ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ ಮನೋಜ್ ಬಾಜಪೈ

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜೀವನ ಹಾಗೂ ಅವರು ಪ್ರಚುರಪಡಿಸಿದ ಸಿದ್ಧಾಂತಗಳನ್ನು ಆಧಾರವಾಗಿಟ್ಟುಕೊಂಡು ಹಲವು ಸಿನಿಮಾಗಳು ಮೂಡಿಬಂದಿವೆ. ‘ಗಾಂಧಿ’, ‘ದ ಮೇಕಿಂಗ್ ಆಫ್​ ಮಹಾತ್ಮ’, ‘ಲಗೇ ರಹೋ ಮುನ್ನಾಭಾಯ್’, ಕನ್ನಡದ ‘ಕೂರ್ಮಾವತಾರ’ ಸೇರಿ ಹಲವು ಸಿನಿಮಾಗಳು ಈಗಾಗಲೇ ತೆರೆ ಮೇಲೆ ಬಂದಿವೆ. ಇದೀಗ ಹಿಂದಿಯಲ್ಲಿ ಮತ್ತೊಮ್ಮೆ ಗಾಂಧಿ ವಿಷಯಾಧಾರಿತ ಸಿನಿಮಾ ಮೂಡಿಬರುತ್ತಿದೆ. ‘ಚಮೇಲಿ’ ಖ್ಯಾತಿಯ ನಿರ್ದೇಶಕ ಸುಧೀರ್ ಮಿಶ್ರಾ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಅನುಭವ್ ಸಿನ್ಹಾ ಬಂಡವಾಳ ಹೂಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಮನೋಜ್ ಬಾಜಪೈ ಗಾಂಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಅವರು ಇದೇ ಮೊದಲ ಬಾರಿಗೆ ಐತಿಹಾಸಿಕ ವ್ಯಕ್ತಿಯ ಪಾತ್ರದಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಕಥೆ ಸಾಗಲಿದ್ದು, ಆ ವೇಳೆ ಗಾಂಧಿಯ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ. ಸಿನಿಮಾ ಕುರಿತು ಸುಧೀರ್ ಮಿಶ್ರಾ ಮಾಹಿತಿ ನೀಡಿದ್ದು, ‘ಇತಿಹಾಸದ ಪ್ರಮುಖ ಅಧ್ಯಾಯದ ಮೇಲೆ ಈ ಸಿನಿಮಾ ಮೂಡಿಬರಲಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ಧಾರ್ಮಿಕ ಸಾಮರಸ್ಯಕ್ಕಾಗಿ ಗಾಂಧಿ 21 ದಿನಗಳ ಕಾಲ ಉಪವಾಸ ಕುಳಿತಿದ್ದ ಐತಿಹಾಸಿಕ ಘಟನೆ ಕುರಿತು ಬೆಳಕು ಚೆಲ್ಲಲಾಗಿದೆ. ದೇಶವು ಸ್ವಾತಂತ್ರ್ಯದತ್ತ ಹೆಜ್ಜೆ ಹಾಕುತ್ತಿರುವಾಗ ರಾಜಕೀಯ ಅಧಿಕಾರದ ಕೇಂದ್ರವಾಗಿದ್ದ ದೆಹಲಿಯಲ್ಲಿ ಮಹತ್ವದ ಬದಲಾವಣೆ ನಡೆಯುತ್ತದೆ. ಆ ಬದಲಾವಣೆ ಬಳಿಕ ಬೆಳವಣಿಗೆಗಳನ್ನು ಸಿನಿಮಾ ಮೂಲಕ ತೋರಿಸಲಾಗುತ್ತಿದೆ’ ಎಂದು ಹೇಳಿಕೊಂಡಿದ್ದಾರೆ. ಮನೋಜ್ ಬಾಜಪೈ ಜತೆ ಸೌರಭ್ ಶುಕ್ಲಾ ತಾರಾಗಣದಲ್ಲಿದ್ದಾರೆ. -ಏಜೆನ್ಸೀಸ್