ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಪಟ್ಟಕ್ಕೇರಿದ ಕಿಂಗ್ ಖಾನ್
- ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಪಟ್ಟಕ್ಕೇರಿದ ಕಿಂಗ್ ಖಾನ್
- ವಿರಾಟ್ ಕೊಹ್ಲಿ, ರಣವೀರ್ ಸಿಂಗ್ ಹಿಂದಿಕ್ಕಿದ ಶಾರುಖ್ ಖಾನ್
- ಪಟ್ಟಿಯಲ್ಲಿ ಕ್ರಿಕೆಟ್-ಬಾಲಿವುಡ್ ತಾರೆಗಳ ಹೆಸರು
ಮುಂಬೈ: ಇತ್ತೀಚೆಗೆ ಪ್ರಕಟವಾದ ಕ್ರೋಲ್‌ನ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ 2025 ವರದಿ ಪ್ರಕಾರ, ಸುಮಾರು 36 ಬ್ರಾಂಡ್ಗಳ ಜಾಹೀರಾತನ್ನು ಹೊಂದುವ ಮೂಲಕ ಬಾಲಿವುಡ್ ನಟ ಕಿಂಗ್ ಖಾನ್ ಖ್ಯಾತಿಯ ಶಾರುಖ್ ಖಾನ್ (Shah Rukh Khan) ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಈ ಪಟ್ಟಿಯಲ್ಲಿ ಶಾರುಖ್ ಖಾನ್ ಸುಮಾರು 177.9 ಮಿಲಿಯನ್ ಡಾಲರ್ (1,691 ಕೋಟಿ) ಮೌಲ್ಯದೊಂದಿಗೆ ಪ್ರಥಮ ಸ್ಥಾನದಲ್ಲಿದರೆ, ಧುರಂಧರ್ ಖ್ಯಾತಿಯ ರಣವೀರ್ ಸಿಂಗ್ 162.9 ಮಿಲಿಯನ್ ಡಾಲರ್ (1,547 ಕೋಟಿ) ನೊಂದಿಗೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಹಾಗೂ ರನ್ ಮಷಿನ್ ವಿರಾಟ್ ಕೊಹ್ಲಿ 158.4 ಮಿಲಿಯನ್ ಡಾಲರ್ (1,505 ಕೋಟಿ) ನೊಂದಿಗೆ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಮೂರನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಜಂಪ್!
2024 ರಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ರಣವೀರ್ ಎರಡನೇ ಹಾಗೂ ಶಾರುಖ್ ಖಾನ್ ಮೂರನೇ ಸ್ಥಾನದಲ್ಲಿದ್ದರು. ಆದರೆ ಇವರ ಜವಾನ್ ಮತ್ತು ಪಠಾಣ್ ಸಿನಿಮಾಗಳು ಭರ್ಜರಿ ಯಶಸ್ಸನ್ನು ಕಂಡ ಹಿನ್ನಲೆಯಲ್ಲಿ, ಖಾನ್ರ ಮಾರುಕಟ್ಟೆ ಮೌಲ್ಯ ಹೆಚ್ಚಳವಾದ ಹಿನ್ನಲೆಯಲ್ಲಿ ಈ ಬಾರಿ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
2024 ರಲ್ಲಿ ಶಾರುಖ್ ಖಾನ್ 28 ಬ್ರಾಂಡ್ಗಳಿಗೆ ಜಾಹೀರಾತು ನೀಡುತ್ತಿದ್ದರೆ, ಈಗ ಈ ಸಂಖ್ಯೆ 36 ಕ್ಕೆ ಏರಿಕೆ ಕಂಡಿದ್ದು, ಖಾನ್ ಪ್ರತಿ ಬ್ರಾಂಡ್ನಿಂದ ಕನಿಷ್ಟ 10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ. ಅಂತೆಯೇ ಇವರ ಕಿಂಗ್ ಸಂಸ್ಥೆ ಕೂಡ ಲಾಭಗಳಿಸುತ್ತಿರುವ ಕಾರಣ ಶಾರುಖ್ ಖಾನ್ ಮತ್ತೊಮ್ಮೆ ಬಾದ್ ಶಾ ಮೂಡ್ಗೆ ಮರಳಿದ್ದಾರೆ ಎಂಬ ಲೆಕ್ಕಾಚಾರ ಕೇಳಿ ಬರುತ್ತಿದೆ.
ಪಟ್ಟಿಯಲ್ಲಿ ಸಿನಿಮಾ- ಕ್ರಿಕೆಟ್ ತಾರೆಗಳ ಮೇಲುಗೈ!
ಬಿಡುಗಡೆಯಾದ ಪಟ್ಟಿ ಪ್ರಕಾರ, ಭಾರತದ ಬಹುತೇಕ ಜಾಹೀರಾತುಗಳಲ್ಲಿ ಕ್ರಿಕೆಟ್ ಆಟಗಾರರು ಹಾಗೂ ಸಿನಿಮಾ ತಾರೆಗಳ ಹೆಸರೇ ತುಂಬಿದೆ. ಶಾರುಖ್, ರಣವೀರ್ ಹೊರತಾಗಿ ಆಲಿಯಾ ಭಟ್, ರಶ್ಮಿಕಾ ಮಂದಣ್ಣ, ಜಾನ್ವಿ ಕಪೂರ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಹಾಗೆಯೇ ವಿರಾಟ್ ಜೊತೆಗೆ, ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್ ಹಾಗೂ ಜಸ್ಪ್ರೀತ್ ಬುಮ್ರಾ ಕೂಡ ಈ ಲಿಸ್ಟ್ನಲ್ಲಿದ್ದಾರೆ. ಇತ್ತೀಚೆಗೆ ಕಾಮನ್ವೆಲ್ತ್ ಕ್ರೀಡಾಕೂಟ ಮುಗಿದಿದ್ದು, ಮುಂದಿನ ವರ್ಷ ಕ್ರಿಕೆಟ್ ಹೊರತಾಗಿ ಇತರೆ ಆಟಗಾರರ ಹೆಸರನ್ನು ಕೂಡ ಕಾಣಲು ಅವಕಾಶವಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).