ಪ್ರಮುಖ ಮುಖ್ಯಾಂಶಗಳು
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಎರಡೂವರೆ ದಶಕಗಳ ವೃತ್ತಿ ಜೀವನದಲ್ಲಿ ಭಿನ್ನ-ವಿಭಿನ್ನ ಪಾತ್ರಗಳನ್ನು ಮಾಡಿ, ಸೈ ಎನಿಸಿಕೊಂಡಿದ್ದಾರೆ. ಗ್ಲಾಮರ್, ಡಿ-ಗ್ಲಾಮರ್ ಜತೆಗೆ ಪೊಲೀಸ್, ತನಿಖಾಧಿಕಾರಿಯಂತಹ ಗಟ್ಟಿ ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ. ‘ಅಂಗ್ರೇಜಿ ಮೀಡಿಯಂ’ನಲ್ಲಿ (2022) ಇನ್‌ಸ್ಪೆಕ್ಟರ್ ನೈನಾ ಕೊಹ್ಲಿ ಹಾಗೂ ‘ಬಕ್ಕಿಂಗ್‌ಹ್ಯಾಮ್ ಮರ್ಡರ್ಸ್’ನಲ್ಲಿ (2023) ಜಸ್ಮೀತ್ ಎಂಬ ತನಿಖಾಧಿಕಾರಿ ಪಾತ್ರವನ್ನು ನಿರ್ವಹಿಸಿದ್ದರು. ಇದರ ಬೆನ್ನಲ್ಲೇ ಕರೀನಾ ‘ದಾಯ್ರ’ ಮೂಲಕ ಮತ್ತೊಮ್ಮೆ ಪೊಲೀಸ್ ಸಮವಸದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಹಾಗೂ ಕರೀನಾ ಕಪೂರ್ ಅಭಿನಯದ ‘ದಾಯ್ರಾ’ ಕಳೆದ ವರ್ಷ ಸೆಟ್ಟೇರಿತ್ತು. ‘ರಾಜಿ’ ಖ್ಯಾತಿಯ ಮೇಘನಾ ಗುಲ್ಜಾರ್ ನಿರ್ದೇಶನದ ಈ ಸಿನಿಮಾ ಇದೀಗ ಶೂಟಿಂಗ್ ಪೂರ್ಣಗೊಳಿಸಿ, ರಿಲೀಸ್‌ಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕರೀನಾ ಕಪೂರ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಪಾತ್ರದ ಫಸ್ಟ್‌ಲುಕ್ ರಿವೀಲ್ ಮಾಡಲಾಗಿದೆ. ಇಲ್ಲಿ ಕರೀನಾ ಡಿಸಿಪಿ ಅಜೂನಿ ಕೊಹ್ಲಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಫಸ್ಟ್ ಲುಕ್‌ನಲ್ಲಿ ಪೊಲೀಸ್ ಸಮವಸದಲ್ಲಿ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆ ಟ್ರಕ್‌ಗಳನ್ನು ನಿಂತಿದ್ದು, ಯಾವುದೋ ದೊಡ್ಡ ಮಾಫಿಯಾವನ್ನು ತಡೆಯುವ ರೀತಿಯಲ್ಲಿ ಕರೀನಾ ಕಾಣಿಸಿಕೊಂಡಿದ್ದಾರೆ. ನಟಿಯ ಈ ಪೊಲೀಸ್ ಅವತಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಪೃಥ್ವಿರಾಜ್ ಡಿಸಿಪಿ ರಮಣ್ ಆಗಿದ್ದು, ಕರೀನಾ ಜತೆ ಹೋರಾಟಕ್ಕೆ ಕೈಜೋಡಿಸಲಿದ್ದಾರೆ. ಅಂತೆಯೇ ‘ದಾಯ್ರಾ’ ಇದೇ ಸೆ.18ಕ್ಕೆ ಹಿಂದಿ ಮತ್ತು ಮಲಯಾಳಂನಲ್ಲಿ ತೆರೆಗೆ ಬರಲಿದೆ. -ಏಜೆನ್ಸೀಸ್