- ರಕ್ಷಾ ಬಂಧನ ಜಾಹೀರಾತಿನಲ್ಲಿ ಧರಿಸಿದ ಬಟ್ಟೆಯ ಕಾರಣಕ್ಕೆ ಟೀಕೆಗೆ ಗುರಿಯಾದ ನಟಿ ಕೃತಿ ಸನೂನ್
- ಜಾಹೀರಾತಿಗೆ ಕೃತಿ ಧರಿಸಿದ್ದ ಉಡುಗೆ ವಿರುದ್ಧ ಟೀಕಿಸಿದ್ದ ಸಂಸದೆ ಹಾಗೂ ನಟಿ ಕಂಗನಾ ರಣಾವತ್
- ಕಂಗನಾ ವಿರುದ್ಧ ತಿರುಗಿಬಿದ್ದ ನೆಟ್ಟಿಗರು, ಅವರ ಹಳೆಯ ಜಾಹೀರಾತುಗಳು ವೈರಲ್
Internet Compares Kriti Sanon And Kangana Ranaut's National Awards Looks:
ಇತ್ತೀಚೆಗೆ ರಕ್ಷಾ ಬಂಧನದ ಸಲುವಾಗಿ ಕೃತಿ ಸನೂನ್ ಅವರು ಭಾಗವಹಿಸಿದ್ದ ಜೀವಾ ಜ್ಯುವೆಲ್ಲರಿ ಜಾಹೀರಾತು ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ಡೀಪ್ ನೆಕ್ ಬ್ಲೌಸ್ ಧರಿಸಿ, ತಮ್ಮನಿಗೆ ಹಾಗು ಶ್ವಾನಕ್ಕೆ ರಾಖಿ ಕಟ್ಟುವ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದರು. ಹಬ್ಬಕ್ಕೆ ಇಂಥ ಬಟ್ಟೆ ಧರಿಸುತ್ತಾರಾ?ಎನ್ನುವ ಚರ್ಚೆ ಭುಗಿಲೆದ್ದಿತ್ತು. ಆ ಬೆನ್ನಲ್ಲೇ ಸಂಸದೆ ಕಂಗನಾ ರಣಾವತ್ ಮತ್ತು ರಾಹುಲ್ ಗಾಂಧಿ ಮಧ್ಯೆ ಟ್ವೀಟ್ ವಾರ್ ಸಹ ಶುರುವಾಗಿತ್ತು. ಈ ಎಲ್ಲ ವಿದ್ಯಾಮಾನ ಗಮನಿಸಿದ ಸಂಸ್ಥೆಯು ಜಾಹೀರಾತು ಹಿಂಪಡೆದುಕೊಂಡಿತು....ಇಷ್ಟೆಲ್ಲ ಆದರೂ ಸಹ ಈ ವಿಚಾರ ಮಾತ್ರ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.
ಹೌದು, ಕೃತಿ ಸನೂನ್ರನ್ನು ವ್ಯಂಗ್ಯ, ಟ್ರೋಲ್ ಮಾಡಿದ ನಂತರ ನೆಟ್ಟಿಗರು ಕಂಗನಾರನ್ನು ಟ್ರೋಲ್ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಕಂಗನಾರ ಹಳೆಯ ಜಾಹೀರಾತು, ರಾಜ್ಯಪಾಲರ ನ್ಯಾಶನಲ್ ಅವಾರ್ಡ್ ಸ್ವೀಕರಿಸುವ ವೇಳೆ ಧರಿಸಿದ್ದ ಪಾಶ್ಚಾತ್ಯ ಬಟ್ಟೆಗಳು ಹಾಗೂ ಹಳೆಯ ಜಾಹೀರಾತುಗಳನ್ನು ಮುನ್ನೆಲೆಗೆ ತಂದಿದ್ದಾರೆ. ಅದರ ಫೋಟೋ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಹೀಗಿದೆ.
62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ನಟಿ ಕಂಗನಾ ರಣಾವತ್ 'ಕ್ವೀನ್' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸ್ವೀಕರಿಸುವಾಗ, ಸಾಂಪ್ರದಾಯಿಕ ಭಾರತೀಯ ಉಡುಗೆಯನ್ನು ಬದಿಗಿಟ್ಟು, ಪಾಶ್ಚಾತ್ಯ ಶೈಲಿಯ ಆಫ್-ಶೋಲ್ಡರ್ ಈವ್ನಿಂಗ್ ಗೌನ್ ಮತ್ತು ಕೇಪ್ ಧರಿಸಿದ್ದರು.
ಭಾರತದ ರಾಷ್ಟ್ರಪತಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊರೆಯುವುದರ ಬಗ್ಗೆ ಕೇಳಿದಾಗ, ಅವರ ತರ್ಕವು ಸರಳವಾಗಿತ್ತು: "ನಾನು ಯೋಚಿಸಿದೆ, ನಾನೀಗ ಒಬ್ಬ ಸ್ಟಾರ್ ನಟಿ, ಹೀಗಾಗಿ ನಾನು ಸ್ಟಾರ್‌ನಂತೆ ಕಾಣಬೇಕು'... ಯಾವುದರ ಬಗ್ಗೆಯೂ ಪರವಾಗಿಲ್ಲ, ನನಗೆ ಒಂದು ಒಳ್ಳೆಯ ಫೋಟೋ ಬರಬೇಕು ಅಷ್ಟೇ ಎಂದಿದ್ದರು.
'ಮಿಮಿ' ಚಿತ್ರಕ್ಕೆ ಪ್ರಶಸ್ತಿ ಪಡೆಯುವಾಗ ಕೃತಿ ಧರಿಸಿದ್ದ ಬಟ್ಟೆ ಹೀಗಿತ್ತು
'ಮಿಮಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಾಗ ಕೃತಿ ಸನೂನ್ ಸೀರೆ ಧರಿಸಿದ್ದರು. ಆದರೆ, 'ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸುವಾಗ ಕಂಗನಾ ರಣಾವತ್ ಸ್ಟ್ರಾಪ್‌ಲೆಸ್ ಗೌನ್ ಧರಿಸಿದ್ದರು. ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕೈಯಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದ ಕಂಗನಾ ಅವರ ಆ ವಿಡಿಯೋ ಈಗ ವೈರಲ್ ಆಗಿದ್ದು, ಕಂಗನಾ ಅವರದ್ದು ದ್ವಿಮುಖ ನೀತಿ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಜಾಹೀರಾತಿನ ವಿಚಾರಕ್ಕೆ ಬಂದಾಗ
2017ರಲ್ಲಿ ಸಂಸದೆ ಹಾಗೂ ನಟಿ ಕಂಗನಾ ಅವರು ನಕ್ಷತ್ರಾ ಎನ್ನುವ ಜ್ಯುವೆಲ್ಲರಿ ಸಂಸ್ಥೆಗೆ ಕೊಟ್ಟ ರಕ್ಷಾ ಬಂಧನ ಜಾಹೀರಾತಿನ ಫೋಟೋಗಳು ಮತ್ತು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆ ಜಾಹೀರಾತಿನಲ್ಲಿ ಕಂಗನಾ ಸ್ಟ್ರಾಪ್‌ಲೆಸ್ ಬಿಳಿ ಬಣ್ಣದ ಮಾಡರ್ನ್ ಉಡುಗೆಯನ್ನು ಧರಿಸಿದ್ದರು. ಇದನ್ನು ಉಲ್ಲೇಖಿಸಿ ನೆಟ್ಟಿಗರು ಕಂಗನಾ ಅವರ ವಿರುದ್ಧ ಟ್ರೋಲ್ ಮಾಡುತ್ತಿದ್ದಾರೆ.
ನಾನು ತಮಾಷೆ ಮಾಡುತ್ತಿಲ್ಲ. ಕಂಗನಾಗೆ ಸೈಕಾಲಜಿಕಲಿ ಕೌನ್ಸಲಿಂಗ್ ಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅರ್ಧದಷ್ಟು ಕಾಮೆಂಟ್‌ಗಳು ತುಂಬಾ ಮೂರ್ಖತನದಿಂದ ಕೂಡಿವೆ, ನಿರ್ದೇಶಕರು ಏನು ಹೇಳುತ್ತಾರೋ ಅದನ್ನು ಕೃತಿ ಧರಿಸಿದ್ದರು. ಅದು ಅವರ ವೈಯಕ್ತಿಕ ಅಭಿಪ್ರಾಯ. ಮಹಿಳೆಯರು ಯಾವ ಬಟ್ಟೆ ಬೇಕಾದರೂ ಧರಿಸಬಹುದು, ನಾವು 2026 ರಲ್ಲಿ ಬದುಕುತ್ತಿದ್ದೇವೆ. ನಾನು ಕೃತಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬ ಮಹಿಳೆಗೆ ಗೌರವ ನೀಡುವ ಆತುರದಲ್ಲಿ ಮತ್ತೊಬ್ಬರನ್ನು ಕೀಳಾಗಿ, ವ್ಯಂಗ್ಯವಾಡುವ ಅಗತ್ಯ ಇಲ್ಲ ಎಂದ ನೆಟ್ಟಿಗರು.
ಕೃತಿ ಸನೂನ್ ತಿರುಗೇಟು
ಈ ಎಲ್ಲಾ ವಿವಾದಗಳ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿರುವ ಕೃತಿ ಸನೂನ್, "ನಾವು ಯಾವಾಗ ಮಹಿಳೆಯರಿಗೆ ಏನು ಧರಿಸಬೇಕು ಎಂದು ಹೇಳುವುದನ್ನು ನಿಲ್ಲಿಸುತ್ತೇವೆ? ವರ್ಷಗಳು ಕಳೆದಂತೆ ಸಾಂಪ್ರದಾಯಿಕ ಫ್ಯಾಷನ್ ಕೂಡ ಬದಲಾಗಿದೆ, ಆದರೂ ಮಹಿಳೆಯರ ಸಂಸ್ಕೃತಿಯ ಗೌರವವನ್ನು ಅವರ ಬಟ್ಟೆಯಿಂದ ಅಳೆಯಲಾಗುತ್ತದೆ.ಸಂಸ್ಕೃತಿ ಸಂಪ್ರದಾಯ ಬಟ್ಟೆಯಿಂದಲ್ಲ ಹೃದಯದಿಂದ ಗೌರವಿಸುವಂತದ್ದು ಎಂದಿದ್ದರು,(ಏಜೆನ್ಸೀಸ್).