ಪ್ರಮುಖ ಮುಖ್ಯಾಂಶಗಳು
ಜನ್ಮದತ್ತವಾಗಿ ಬಂದ ಲುಕ್ ಮತ್ತು ಹೇರ್‌ಸ್ಟೈಲ್ ಕೆಲ ಕಲಾವಿದರಿಗೆ ಅದುವೇ ವರದಾನ. ಆ ಕಾರಣಕ್ಕಾಗಿಯೇ ಅವರಿಗೆ ಅವಕಾಶಗಳು ಹೆಚ್ಚುತ್ತಿರುತ್ತವೆ. ಹೀಗಿರುವಾಗ ಅದನ್ನು ಬದಲಾಯಿಸಿಕೊಳ್ಳಿ ಎಂದರೆ ಕಷ್ಟವೇ. ಹಿಂದಿಯ ‘ಘೂಮರ್’ ನಟಿ ಸಯ್ಯಮಿ ಖೇರ್‌ಗೂ ಇಂತಹದ್ದೇ ಒಂದು ಪ್ರಸಂಗ ಎದುರಾಗಿತ್ತಂತೆ. ಚಿತ್ರರಂಗಕ್ಕೆ ಕಾಲಿಡುವ ಆರಂಭದಲ್ಲಿ ನಟಿ
ಸಯ್ಯಮಿ ಖೇರ್
ಗೆ ಅವರ ಗುಂಗುರು ಕೂದಲು ಮತ್ತು ಲುಕ್‌ನ್ನು ಬದಲಾಯಿಸಿಕೊಳ್ಳುವಂತೆ ಹೇಳಲಾಗಿತ್ತಂತೆ. ಆದರೆ, ಅವರು ಮೂಲ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಒಪ್ಪಲಿಲ್ಲವಂತೆ. ಆಗ ಎದುರಾಗಿದ್ದ ಪರಿಸ್ಥಿತಿ ಬಗ್ಗೆ ಇತ್ತೀಚೆಗೆ ಸಯ್ಯಮಿ ಮಾತನಾಡಿದ್ದು, ‘ಯಾರೋ ಹೇಳಿದರೆಂದು ಲುಕ್ ಬದಲಾಯಿಸಿಕೊಳ್ಳಲು ನಾನು ಕಾರ್ಖಾನೆಯಲ್ಲಿ ತಯಾರಾಗುವ ಗೊಂಬೆಯಲ್ಲ’ ಎಂದಿದ್ದಾರೆ. ‘ಅನೇಕರು ನಿಮ್ಮನ್ನು ಬದಲಾಯಿಸಲು ನೋಡುತ್ತಾರೆ. ಆದರೆ, ನೀವು ಮಾತ್ರ ನಿಮ್ಮ ವ್ಯಕ್ತಿತ್ವ ಹಾಗೂ ರೂಪಕ್ಕೆ ಬದ್ಧವಾಗಿರಬೇಕು. ಯಾಕೆಂದರೆ, ಅದುವೇ ನಿಮ್ಮನ್ನು ಇತರರಿಗಿಂತ ಭಿನ್ನವಾಗಿ ನಿಲ್ಲಲು ಕಾರಣವಾಗುತ್ತದೆ. ಅಕಸ್ಮಾತ್ ಯಾರೋ ಹೇಳಿದ್ದಾರೆಂದು ನೀವು ಬದಲಾದರೆ, ಕಾರ್ಖಾನೆಯಲ್ಲಿ ತಯಾರಾಗುವ ಗೊಂಬೆಗಳಾಗಿ ಬಿಡುತ್ತೀರಿ. ಆತರ ಆಗಲು ನನಗೆ ಇಷ್ಟವಿಲ್ಲ. ನನಗೆ ನಿರ್ದಿಷ್ಟ ರೀತಿಯಲ್ಲಿ ಉಡುಪು ಧರಿಸಬೇಕು ಹಾಗೂ ಗುಂಗುರು ಕೂದಲನ್ನು ಬದಲಾಯಿಸಿಕೊಳ್ಳಬೇಕು ಎಂದು ಹಲವರು ಸಲಹೆ ನೀಡಿದ್ದರು. ಆದರೆ, ಎಂದಿಗೂ ನಾನು ನನ್ನ ಲುಕ್, ಹೇರ್‌ಸ್ಟೈಲ್ ಬದಲಾಯಿಸಲಿಲ್ಲ. ಅದರಿಂದಾಗಿಯೇ ನನಗೆ ಅವಕಾಶಗಳು ಹೆಚ್ಚಾದವು. ಇನ್ನು ನನ್ನ ತಂದೆ-ತಾಯಿ ಕೂಡ ಅದರಂತೆ ನನ್ನನ್ನು ಬೆಳೆಸಿದ್ದರು. ನನ್ನ ನಿಲುವಿನ ಬಗ್ಗೆ ನನಗೆ ಅತೀವ ಸಂತೋಷವಿದೆ’ ಎಂದು ಹೇಳಿಕೊಂಡಿದ್ದಾರೆ. ಸದ್ಯ ಸಯ್ಯಮಿ ಖೇರ್, ಅಕ್ಷಯ್ ಕುಮಾರ್ ಅಭಿನಯದ ‘ಹೈವಾನ್’ ಚಿತ್ರದಲ್ಲಿ ನಟಿಸಿದ್ದು, ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್