ಕೆಲವೊಂದು ಸಿನಿಮಾಗಳು ಪ್ರೇಕ್ಷಕರ ಮೇಲೆ ಅದೆಷ್ಟು ಪ್ರಭಾವ ಬೀರುತ್ತದೆಂದರೆ, ಅವರು ಚಿತ್ರದ ಕಥೆಯಿಂದ ಸ್ಪೂರ್ತಿ ಪಡೆದು ಜೀವನದಲ್ಲಿ ಅಳವಡಿಸಿಕೊಂಡು ಬದಲಾಗಿರುವ, ಬೆಳೆದಿರುವ ಹಲವು ಉದಾಹರಣೆಗಳು ಸಿಗುತ್ತವೆ. ಹೀಗಿರುವಾಗ ಆ ಚಿತ್ರತಂಡದ ಸದಸ್ಯರನ್ನು ಬದಲಿಸದೇ ಇರುತ್ತಾ? ಇಂಥದ್ದೇ ಒಂದು ಅನನ್ಯ ಅನುಭವಕ್ಕೆ ಒಳಗಾಗಿರುವ "ಹನುಮಾನ್ ಅಂಶ್' ನಟ ಚೇತನ್ ಆನಂದ್, ಆ ಚಿತ್ರದಿಂದ ತಮ್ಮ ಜೀವನವನ್ನೇ ಬದಲಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ರಾಮ್ ನಂದನ್ ಭೋಂಸ್ಲೆ ಪಾತ್ರದಲ್ಲಿ ಚೇತನ್ ನಟಿಸಿದ್ದಾರೆ. ನಾಸ್ತಿಕನೊಬ್ಬ ನೀಮ್ ಕರೋಲಿ ಬಾಬಾ ಪ್ರಭಾವಕ್ಕೊಳಗಾಗಿ ದೇವರನ್ನು ನಂಬತೊಡಗುವ ಪಾತ್ರ. ಪಾತ್ರದ ಬಗ್ಗೆ ಚೇತನ್, "15 ವರ್ಷಗಳ ಸಿನಿಮಾ ಕರಿಯರ್ನಲ್ಲಿ ನಾನು ಬಹುತೇಕ ವಿಲನ್ ಅಥವಾ ನೆಗಟಿವ್ ಶೇಡ್ ಪಾತ್ರಗಳಲ್ಲಿ ನಟಿಸಿದ್ದೇನೆ. "ಹನುಮಾನ್ ಅಂಶ್' ನಾನು ನಟಿಸಿದ ಮೊದಲ ಆಧ್ಯಾತ್ಮದ ಕುರಿತ ಭಕ್ತಿಪ್ರಧಾನ ಸಿನಿಮಾ. ನಿರ್ದೇಶಕ ವಿಶಾಲ್ ಚತುರ್ವೇದಿ ಶೂಟಿಂಗ್ ಪ್ರಾರಂಭಕ್ಕೂ ಮುನ್ನವೇ ಎಲ್ಲ ಸದಸ್ಯರಿಗೂ ಸೆಟ್ನಲ್ಲಿ ಅಶ್ಲೀಲ ಪದ ಬಳಸದಂತೆ, ಜಗಳವಾಡದಂತೆ, ಮದ್ಯಪಾನ, ಮಾಂಸಾಹಾರ ಸೇವಿಸದಂತೆ ತಿಳಿಸಿದ್ದರು. ಹೀಗಾಗಿ ಸಿನಿಮಾದಲ್ಲಿ ಮಾತ್ರವಲ್ಲ ಶೂಟಿಂಗ್ ಸಮಯದಲ್ಲೂ ಆಧ್ಯಾತ್ಮ ಹಾಗೂ ಶಾಂತ ವಾತಾವರಣವಿತ್ತು. ನಾನು ಸಿನಿಮಾಗೆ ಆಯ್ಕೆಯಾಗುವ ಆರು ತಿಂಗಳು ಮುನ್ನವಷ್ಟೇ ನೀಮ್ ಕರೋಲಿ ಬಾಬಾ ದೇವಸ್ಥಾನಕ್ಕೆ ಹೋಗಿದ್ದೆ. ಹನುಮಂತನ ಕುರಿತ ಸಿನಿಮಾದಲ್ಲಿ ನಟಿಸಲು ಅವಕಾಶಕ್ಕಾಗಿ ಬೇಡಿಕೊಂಡಿದ್ದೆ. ಅದಾಗಿ ಆರು ತಿಂಗಳಲ್ಲೇ ಚಿತ್ರತಂಡದಿಂದ ಕರೆ ಬಂತು. ಮೊದಲು ಪೊಲೀಸ್ ಅಧಿಕಾರಿ ಪಾತ್ರ ಎಂದಿದ್ದರು. ಆದರೆ, ಸೆಟ್ಗೆ ಹೋದಾಗ ಇನ್ನೂ ಒಳ್ಳೆಯ ಪಾತ್ರ ದೊರೆಯಿತು. ಇದು ಹನುಮಂತನ ಕೃಪೆಯಲ್ಲವೇ? ಜೀವನ ತುಂಬ ಕಠಿಣ. ಎಲ್ಲರೂ ಗುರಿಗಳ ಹಿಂದೆ ಓಡುತ್ತಿರುತ್ತಾರೆ. ಅದಕ್ಕಾಗಿ ಏನು ಬೇಕಾದರೂ ಮಾಡಲು ರೆಡಿಯಿರುತ್ತಾರೆ. ಆದರೆ, ಈ ಸಿನಿಮಾ ಮತ್ತು ಪಾತ್ರ ನಾನು ಜೀವನವನ್ನು ನೋಡುವ ರೀತಿಯನ್ನೇ ಬದಲಿಸಿದೆ' ಎಂದು ಹೇಳಿಕೊಂಡಿದ್ದಾರೆ.
ಸೋತು, ಗೆದ್ದ ಸಿನಿಮಾ
ಕಳೆದ ಆ. 7ರಂದು ರಿಲೀಸ್ ಆದ "ಹನುಮಾನ್ ಅಂಶ್' ಮೊದಲ ವಾರ ₹89 ಲಕ್ಷ, ಎರಡನೇ ವಾರ ₹46 ಲಕ್ಷ ಸೇರಿ, ಮೊದಲ 15 ದಿನಗಳಲ್ಲಿ ಕೇವಲ ₹1.35 ಲಕ್ಷ ಗಳಿಕೆ ಮಾಡಿಕೊಂಡಿತ್ತು. ₹2 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಚಿತ್ರ ಇನ್ನು ಓಡಲ್ಲ ಅಂತ ಹಲವೆಡೆ ಥಿಯೇಟರ್ಗಳಿಂದ ತೆಗೆಯಲಾಗಿತ್ತು. ಕ್ರಮೇಣ ಉಳಿದ ಥಿಯೇಟರ್ಗಳು ಹೌಸ್ುಲ್ ಆಗತೊಡಗಿದವು. ಅಲ್ಲಿಂದ ಮತ್ತೆ ಸ್ಕ್ರೀನ್ಗಳ ಸಂಖ್ಯೆ ಹೆಚ್ಚಿಸಲಾಯಿತು. ಅಂದಹಾಗೆ ದಿನಕಳೆದಂತೆ ಸಿನಿಮಾ ಕಲೆಕ್ಷನ್ ಕಡಿಮೆಯಾಗಬೇಕು. ಆದರೆ, "ಹನುಮಾನ್ ಅಂಶ್' ರಿಲೀಸ್ ಆದ 31ನೇ ದಿನ ಅತಿಹೆಚ್ಚು ಅರ್ಥಾತ್ ₹22.75 ಕೋಟಿ ಗಳಿಕೆ ಮಾಡಿಕೊಂಡಿದ್ದು, ಇದುವರೆಗೆ ಕಲೆಕ್ಷನ್ ₹170 ಕೋಟಿ ಮುಟ್ಟಿದೆ.