'ಟಾಕ್ಸಿಕ್'​, 'ಪ್ಯಾರಡೈಸ್'​... ಸ್ಟಾರ್​ ಹೀರೋಗಳ ಸಿನಿಮಾಗೆ ಸೆಡ್ಡು ಹೊಡೆದು 50 ದಿನ ಪೂರೈಸಿದ 'ಹನುಮಾನ್​ ಅಂಶ್​' | Hanuman Ansh 
ಬಾಲಿವುಡ್

'ಟಾಕ್ಸಿಕ್'​, 'ಪ್ಯಾರಡೈಸ್'​... ಸ್ಟಾರ್​ ಹೀರೋಗಳ ಸಿನಿಮಾಗೆ ಸೆಡ್ಡು ಹೊಡೆದು 50 ದಿನ ಪೂರೈಸಿದ 'ಹನುಮಾನ್​ ಅಂಶ್​' | Hanuman Ansh

ಹೊಸ ಚಿತ್ರಗಳು ಸ್ಪರ್ಧೆಗೆ ಇಳಿದಿದ್ದರೂ, ಈ ಆಧ್ಯಾತ್ಮಿಕ ಕಥಾಹಂದರವುಳ್ಳ ಚಿತ್ರವು ಚಿತ್ರಮಂದಿರಗಳಲ್ಲಿ ತನ್ನ ಗಳಿಕೆಯನ್ನು ಮುಂದುವರಿಸಿದ್ದು, ದೊಡ್ಡ ಬಜೆಟ್​ ಚಿತ್ರಗಳು ಬಂದರೂ ಪ್ರೇಕ್ಷಕರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವುದು ಯಶಸ್ವಿಯಾಗಿ ಮುಂದುವರಿದಿದೆ.

Hanuman Ansh: ಯಶ್​ ಅಭಿನಯದ ಟಾಕ್ಸಿಕ್​, ನಟ ನಾನಿ ನಟಿಸಿರುವ ದಿ ಪ್ಯಾರಡೈಸ್​ ಸೇರಿದಂತೆ ಭಾರತೀಯ ಚಿತ್ರೋದ್ಯಮದ ಹಲವು ಬಿಗ್ ಬಜೆಟ್​ನ ಸ್ಟಾರ್​ಡಮ್​ ಸಿನಿಮಾಗಳು ಎಂಟ್ರಿಕೊಟ್ಟರೂ ಸಹ ಅವುಗಳಿಗೆ ಸೆಡ್ಡು ಹೊಡೆದು ಇಂದಿಗೂ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಹನುಮಾನ್​ ಅಂಶ ಇದೀಗ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಗ್ಗುತ್ತಿದೆ.

ಸದ್ದಿಲ್ಲದೇ ಆ.7ರಂದು ದೊಡ್ಡ ಸ್ಟಾರ್​ ತಾರಾಗಣವಿಲ್ಲದೆ, ಭರ್ಜರಿ ಪ್ರಚಾರವಿಲ್ಲದೆ ಬಹುತೇಕ ಚಿತ್ರಮಂದಿರಗಳಿಗೆ ಎಂಟ್ರಿಕೊಟ್ಟ ವಿಶಾಲ್​ ಚತುರ್ವೇದಿ ನಿರ್ದೇಶನದ 'ಹನುಮಾನ್ ಅಂಶ್​' ಚಿತ್ರವು ಇದೀಗ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂ. ಕ್ಲಬ್​ ಸೇರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ರಿಲೀಸ್​ ಆಗಿ ಎಂಟನೇ ವಾರಕ್ಕೆ ಕಾಲಿಟ್ಟಿದ್ದರೂ, ಚಿತ್ರದ ಬಾಕ್ಸ್ ಆಫೀಸ್ ಹವಾ ಕಿಂಚಿತ್ತೂ ಕಡಿಮೆಯಾಗಿಲ್ಲ. ಹೊಸ ಚಿತ್ರಗಳು ಸ್ಪರ್ಧೆಗೆ ಇಳಿದಿದ್ದರೂ, ಈ ಆಧ್ಯಾತ್ಮಿಕ ಕಥಾಹಂದರವುಳ್ಳ ಚಿತ್ರವು ಚಿತ್ರಮಂದಿರಗಳಲ್ಲಿ ತನ್ನ ಗಳಿಕೆಯನ್ನು ಮುಂದುವರಿಸಿದ್ದು, ದೊಡ್ಡ ಬಜೆಟ್​ ಚಿತ್ರಗಳು ಬಂದರೂ ಪ್ರೇಕ್ಷಕರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವುದು ಯಶಸ್ವಿಯಾಗಿ ಮುಂದುವರಿದಿದೆ.

ಸ್ಟಾರ್​ ನಟರ ಚಿತ್ರಗಳಿಗೆ ಸೆಡ್ಡು

ನಾನಿ ಅವರ 'ದಿ ಪ್ಯಾರಡೈಸ್' ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ನಟನೆಯ 'ದಿ ವಾನ್ - ಫೋರ್ಸ್ ಆಫ್ ದಿ ಫಾರೆಸ್ಟ್' ನಂತಹ ದೊಡ್ಡ ಚಿತ್ರಗಳು ಬಿಡುಗಡೆಯಾಗಿದ್ದರೂ, 'ಹನುಮಾನ್ ಅಂಶ್' ಭಾನುವಾರದ ಗಳಿಕೆಯಲ್ಲಿ ತನ್ನ ಹಿಡಿತವನ್ನು ಕಾಯ್ದುಕೊಂಡಿದೆ. ವಾಣಿಜ್ಯ ಸಿನಿ ವೆಬ್‌ಸೈಟ್ 'ಸ್ಯಾಕ್ನಿಲ್ಕ್' (Sacnilk) ವರದಿ ಪ್ರಕಾರ, ಈ ಚಿತ್ರವು ದೇಶಾದ್ಯಂತ 4,387 ಪ್ರದರ್ಶನಗಳಿಂದ 52ನೇ ದಿನದಂದು ಸುಮಾರು 9 ಕೋಟಿ ರೂ. ಗಳಿಕೆಯನ್ನು ಕಂಡಿದೆ. ಅಲ್ಲಿಗೆ, ಕೇವಲ ಭಾರತದಲ್ಲೇ ಚಿತ್ರದ ಒಟ್ಟು ಕಲೆಕ್ಷನ್​ 307.03 ಕೋಟಿ ರೂ.ಗೆ ತಲುಪಿದ್ದರೆ, ಒಟ್ಟಾರೆ 362.70 ಕೋಟಿ ರೂ. ಎಂದು ದಾಖಲಾಗಿದೆ.

ಇನ್ನು, ಜಾಗತಿಕ ಮಾರುಕಟ್ಟೆಯ ವಿಷಯಕ್ಕೆ ಬಂದರೆ, ಕೇವಲ ಭಾನುವಾರವೊಂದರಲ್ಲೇ 75 ಲಕ್ಷ ರೂ. ಗಳಿಸಿದ ನಂತರ ಒಟ್ಟು ಗಳಿಕೆ 38.50 ಕೋಟಿ ರೂ.ಗೆ ಏರಿಕೆಯಾಗಿದೆ. ಇದರೊಂದಿಗೆ, 'ಹನುಮಾನ್ ಅಂಶ್' ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆಯು ಈಗ 401.20 ಕೋಟಿ ರೂ. ತಲುಪಿರುವುದು ಚಿತ್ರತಂಡಕ್ಕೆ ಎಲ್ಲಿಲ್ಲದ ಸಂತಸ ಮೂಡಿಸಿದೆ. ಬಿಡುಗಡೆಯ ಎಂಟನೇ ವಾರದಲ್ಲೂ ಪ್ರೇಕ್ಷಕರು ಈ ಚಿತ್ರವನ್ನು ವೀಕ್ಷಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಶನಿವಾರದಂದು ಚಿತ್ರಮಂದಿರಗಳಲ್ಲಿ ಸರಾಸರಿ ಶೇ. 44.04ರಷ್ಟು ಪ್ರೇಕ್ಷಕರ ಹಾಜರಾತಿ (occupancy) ದಾಖಲಾದರೆ, ರಾತ್ರಿಯ ಪ್ರದರ್ಶನಗಳಲ್ಲಿ ಗರಿಷ್ಠ ಶೇ.59.62ರಷ್ಟು ಹಾಜರಾತಿ ಕಂಡುಬಂದಿದೆ.

2 ಕೋಟಿಯಿಂದ 400 ಕೋಟಿ!

ಕೇವಲ 2 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಿಸಿದ 'ಹನುಮಾನ್ ಅಂಶ್' ಚಿತ್ರವು ಈಗ 400 ಕೋಟಿ ರೂ. ಬಾಚಿಕೊಳ್ಳುವ ಮೂಲಕ ನಿರ್ಮಾಪಕರಿಗೆ ಹೊಸ ಭರವಸೆ, ಗೆಲುವು ತಂದುಕೊಟ್ಟಿದೆ. ವಿಶಾಲ್ ಚತುರ್ವೇದಿ ಅವರು ಬರೆದ 'ಡಿವೈನ್ ಡಿಟೂರ್: ದಟ್ ಚೇಂಜ್ಡ್ ಮೈ ಲೈಫ್' (Divine Detour: That Changed My Life) ಎಂಬ ಪುಸ್ತಕವನ್ನು ಆಧರಿಸಿದ ಕಥೆಯಿದಾಗಿದ್ದು, ಅವರೇ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ ಎಂಬುದು ಗಮನಾರ್ಹ.

ಕಥೆಯ ಎಳೆಯಿದು...

ಸ್ವಾತಂತ್ರ್ಯಪೂರ್ವ ಭಾರತದ ಹಿನ್ನೆಲೆಯನ್ನು ಹೊಂದಿರುವ ಈ ಕಥೆಯಲ್ಲಿ, ಲಕ್ಷ್ಮಿ ನಾರಾಯಣ ಎಂಬ ಯುವಕನು ತನ್ನ ತಾಯಿಯ ಮರಣದ ನಂತರ ಮನೆಯನ್ನು ತೊರೆದು ಆಧ್ಯಾತ್ಮಿಕ ಪಯಣವನ್ನು ಪ್ರಾರಂಭಿಸುತ್ತಾನೆ. ಉತ್ತರ ಭಾರತದಲ್ಲಿ ಆತ ನಡೆಸುವ ಪ್ರಯಾಣ ಮತ್ತು ಆತ ಹೇಗೆ 'ನೀಮ್ ಕರೋಲಿ ಬಾಬಾ' ಆಗಿ ಪರಿವರ್ತನೆಗೊಳ್ಳುತ್ತಾನೆ ಎಂಬುದು ಚಿತ್ರದ ಕಥಾಹಂದರವಾಗಿದೆ. ಶೋಭಿನವ್ ಸತ್ಯ ಅವರು ಲಕ್ಷ್ಮಿ ನಾರಾಯಣ ಶರ್ಮಾ ಪಾತ್ರದಲ್ಲಿ ನಟಿಸಿದ್ದರೆ, ಚಂದನ್ ಕೆ. ಆನಂದ್, ನಿಖಿಲ್ ದುಬೆ, ಅನಿಲ್ ರಸ್ತೋಗಿ ಮತ್ತು ಸುಗಂಧ ಮಲ್ಹೋತ್ರಾ ಅವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).