ಹನುಮಾನ್ ಅಂಶ್ ಚಿತ್ರದ ಪೋಸ್ಟರ್
- ಯಾವುದೇ ದೊಡ್ಡ ಸ್ಟಾರ್ ತಾರಾಗಣವಿಲ್ಲದೆ, ಭರ್ಜರಿ ಪ್ರಚಾರವಿಲ್ಲದೆ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟ 'ಹನುಮಾನ್ ಅಂಶ್'
- ರಿಲೀಸ್ ಆದ 39ನೇ ದಿನವು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್
- ಬಿಡುಗಡೆಯಾದ ಮೊದಲ ದಿನ 10 ಲಕ್ಷ ರೂ. ಕಲೆಕ್ಷನ್ ನೋಡಿದ್ದ ಚಿತ್ರತಂಡ ಈಗ ಕೋಟಿಯಲ್ಲಿ ಗಳಿಕೆ ಕಾಣುತ್ತಿದೆ
ಬೆಂಗಳೂರು: ಯಾವುದೇ ದೊಡ್ಡ ಸ್ಟಾರ್ ತಾರಾಗಣವಿಲ್ಲದೆ, ಭರ್ಜರಿ ಪ್ರಚಾರವಿಲ್ಲದೆ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟ ವಿಶಾಲ್ ಚತುರ್ವೇದಿ ನಿರ್ದೇಶನದ 'ಹನುಮಾನ್ ಅಂಶ್' (Hanuman Ansh) ಚಿತ್ರವು ಇದೀಗ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಹಣ ಬಾಚಿಕೊಳ್ಳುತ್ತಿದ್ದು, 'ಟಾಕ್ಸಿಕ್' ಸೇರಿದಂತೆ ಬಾಲಿವುಡ್ನ ಸಿನಿಮಾಗಳನ್ನೇ ಗಳಿಕೆಯಲ್ಲಿ ಹಿಂದಿಕ್ಕಿದೆ. ಸಾಕಷ್ಟು ವಿಚಾರಗಳಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಈ ಸಿನಿಮಾ ಇದೀಗ 39ನೇ ದಿನವೂ ಗಳಿಕೆಯಲ್ಲಿ ಅದೇ ವೇಗವನನ್ನು ಕಾಯ್ದುಕೊಂಡಿದೆ.
ರಿಲೀಸ್ ಆದ 39ನೇ ದಿನವು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಹನುಮಾನ್ ಅಂಶ್, ಹೊಸ ದಾಖಲೆ ನಿರ್ಮಿಸಿದೆ. ಹಬ್ಬಗಳ ಹಿನ್ನೆಲೆ ಸಾಲು ಸಾಲು ರಜೆ ಬಂದ ಕಾರಣ, ಗಳಿಕೆಯು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಆಧ್ಯಾತ್ಮಿಕ ಹಿನ್ನೆಲೆಯನ್ನು ಆಧಾರಿಸಿದ ಈ ಸಿನಿಮಾ, ಧುರಂಧರ್ 2 ನಂತರದಲ್ಲಿ ಈ ವರ್ಷ ಅತ್ಯಂತ ಯಶಸ್ಸು ಕಂಡ ಚಿತ್ರವಾಗಿ ಹೊರಹೊಮ್ಮಿದೆ.
ಬಿಡುಗಡೆಯಾದ ಪ್ರಾರಂಭದಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡದ ಈ ಸಿನಿಮಾ, ನಂತರ ಇದರ ಚಿತ್ರಕಥೆ ಮತ್ತು ಪ್ರೇಕ್ಷಕರ ಮಾತಿನ ಮೂಲಕ ಜನಪ್ರಿಯತೆ ಪಡೆದುಕೊಂಡಿದೆ.ಬಳಿಕ ದಿನೇ ದಿನೇ ಕಲೆಕ್ಷನ್ ಮಟ್ಟದಲ್ಲಿ ಚೇತರಿಸಿಕೊಳ್ಳುತ್ತಾ 39 ದಿನಗಳ ಬಳಿಕ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 222.88 ಕೋಟಿ ಗಳಿಕೆ ಮಾಡುವ ಮೊಲಕ ಭರ್ಜರಿ ಯಶಸ್ಸು ಸಾಧಿಸಿದೆ.
ರಿಲೀಸ್ ಆದ ಮೊದಲ ದಿನವೇ ಕೇವಲ 10 ಲಕ್ಷ ರೂ. ಗಳಿಸುವ ಮೂಲಕ ತೀರ ಮಂದಗತಿಯಲ್ಲಿ ಸಾಗಿದ ಈ ಭಕ್ತಿಪ್ರಧಾನ ಚಿತ್ರವು, ಕೇವಲ ಭಾರತದಲ್ಲೇ ಈಗ 222 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಕಂಡಿದೆ. ಮೌತ್ ಮಾರ್ಕೆಟಿಂಗ್ ಅಂದರೆ ಮಾತಿನಿಂದ ಮಾತು ಹರಡಿದ ಬೆನ್ನಲ್ಲೇ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದು, ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪಾಸಿಟಿವ್ ವಿಮರ್ಶೆಗಳು ಮತ್ತು ಪ್ರತಿಕ್ರಿಯೆಗಳು ಹರಿದುಬರುತ್ತಿವೆ. ಮತ್ತೊಂದೆಡೆ, ಥಿಯೇಟರ್ಗಳಿಗೆ ಜನರ ದಂಡು ಕೂಡ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ.
39ನೇ ದಿನ ಭಾರತದಲ್ಲಿ ಗಳಿಕೆ ಎಷ್ಟು?
ದೇಶವ್ಯಾಪಿ ‘ಹನುಮಾನ್ ಅಂಶ’ ಚಿತ್ರವು 39 ದಿನವು ತನ್ನ ವೇಗದ ಓಟವನ್ನು ಮುಂದುವರೆಸಿದೆ. ಕೇವಲ ಇದೊಂದೇ ದಿನ 8.25 ಕೋಟಿ ರೂ. ಗಳಿಸಿದೆ. ಅಲ್ಲಿಗೆ, ಚಿತ್ರದ ಒಟ್ಟು ಕಲೆಕ್ಷನ್ 263.30 ಕೋಟಿಗೆ ತಲುಪಿದೆ. ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾ ತನ್ನ ಓಟ ಮುಂದುವರಿಸಿದ್ದು, 39ನೇ ದಿನ ಸುಮಾರು 2 ಕೋಟಿ ಗಳಿಸಿದೆ. ಇದರಿಂದ ಚಿತ್ರದ ಒಟ್ಟು ಗಳಿಕೆ 16.50 ಕೋಟಿಗೆ ತಲುಪಿದೆ.
ಕೇವಲ 2 ಕೋಟಿ ಬಜೆಟ್!
ಸಾಮಾನ್ಯವಾಗಿ, ಬಾಲಿವುಡ್ನ ಸಿನಿಮಾಗಳು ಎಂದರೆ ಅಲ್ಲಿ ನೂರಾರು ಕೋಟ್ಯಂತರ ರೂಪಾಯಿ ಬಂಡವಾಳವನ್ನೇ ಹೂಡಿಕೆ ಮಾಡಿರುತ್ತಾರೆ ಎಂಬುದು ಸಿನಿಪ್ರೇಕ್ಷಕರಿಗೆ ಗೊತ್ತಿರುವ ವಿಷಯ. ಆದರೆ, 'ಹನುಮಾನ್ ಅಂಶ' ಚಿತ್ರವನ್ನು ಕೇವಲ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇನ್ನೂ ವಿಶೇಷ ಎಂದರೆ, ನಿರ್ದೇಶಕ ಮತ್ತು ನಿರ್ಮಾಪಕ ವಿಶಾಲ್ ಚತುರ್ವೇದಿ ಅವರು ತಮಗಾಗಿ ಯಾವುದೇ ಸಂಭಾವನೆ ಪಡೆಯದೆ ಸಿನಿಮಾವನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಉಳಿತಾಯದ ಹಣವನ್ನೇ ಬಂಡವಾಳ
ಇನ್ನು, ಸಿನಿಮಾದ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದ 21 ವರ್ಷದ ಯುವ ನಿರ್ಮಾಪಕಿ ಅನುಪ್ರಿಯಾ ನಗರ್, "ಈ ಚಿತ್ರವನ್ನು ಮೂವರು ಮಹಿಳೆಯರು ನಿರ್ಮಿಸಿದ್ದಾರೆ. ಅವರಲ್ಲಿ ನಾನೇ ಅತಿ ಕಿರಿಯವಳು. ಚಿತ್ರೀಕರಣದ ನಂತರದ ಹಂತದಲ್ಲಿ ನಾನು ತಂಡ ಸೇರಿದೆ. ಚಿತ್ರೀಕರಣ ಪೂರ್ಣಗೊಂಡಿದ್ದರೂ, ಬಾಕಿ ಉಳಿದ ಕೆಲಸಗಳಿಗೆ ಹಣಕಾಸಿನ ಸಮಸ್ಯೆ ಎದುರಾಯಿತು. ಕಥೆಯ ಮೇಲೆ ಬಲವಾದ ನಂಬಿಕೆ ಇದ್ದ ಕಾರಣ, ನನ್ನ ಬಳಿಯಿದ್ದ ಸಂಪೂರ್ಣ ಉಳಿತಾಯದ ಹಣವನ್ನೇ ಹೂಡಿಕೆ ಮಾಡಿದೆ. ಇದು ನನಗೆ ಅತ್ಯಂತ ಎಮೋಷನಲ್ ಪ್ರಾಜೆಕ್ಟ್ ಎಂದರು,(ಏಜೆನ್ಸೀಸ್).