ಬಾಲಿವುಡ್

ಎರಡನೇ ಮಗುವಿಗೆ ವಿಶಿಷ್ಟ ಹೆಸರಿಟ್ಟ ದೀಪಿಕಾ-ರಣ್‌ವೀರ್: ಅದರ ಹಿಂದಿರುವ ಅಪರೂಪದ ಮಹತ್ವವೇನು..? | Deepika Ranveer Singh Baby

Deepika Ranveer Singh Baby: ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ತಮ್ಮ ಎರಡನೇ ಮಗಳಿಗೆ ದೇವಿ ಪಡುಕೋಣೆ ಸಿಂಗ್ (Devi Padukone Singh) ಎಂದು ನಾಮಕರಣ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮುದ್ದಾದ ಕುಟುಂಬದ ಫೋಟೋ ಭಾರೀ ವೈರಲ್ ಆಗಿದೆ.

Deepika Ranveer Singh Baby: ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ತಮ್ಮ ಎರಡನೇ ಮಗಳಿಗೆ ದೇವಿ ಪಡುಕೋಣೆ ಸಿಂಗ್ (Devi Padukone Singh) ಎಂದು ನಾಮಕರಣ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮುದ್ದಾದ ಕುಟುಂಬದ ಫೋಟೋ ಭಾರೀ ವೈರಲ್ ಆಗಿದೆ. ಈ ವಿಶೇಷ ಪ್ರಕಟಣೆಯು ಅಭಿಮಾನಿಗಳಿಗೆ ಜೋಡಿಯ ಕುಟುಂಬ ಜೀವನದ ಸುಂದರ ಕ್ಷಣಗಳ ಝಲಕ್ ನೀಡಿದೆ. ಚಿತ್ರದಲ್ಲಿ ಅವರ ಹಿರಿಯ ಮಗಳು ದುವಾ ಕೂಡ ತನ್ನ ಮುದ್ದು ತಂಗಿಯೊಂದಿಗೆ ಪ್ರೀತಿಯ ಕ್ಷಣವನ್ನು ಹಂಚಿಕೊಳ್ಳುತ್ತಿರುವುದು ಎಲ್ಲರ ಮನ ಸೆಳೆದಿದೆ.

ದೀಪಿಕಾ ಪಡುಕೋಣೆ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸುಂದರ ಫೋಟೋವನ್ನು ಹಂಚಿಕೊಂಡಿದ್ದು, ದೇವಿ ಪಡುಕೋಣೆ ಸಿಂಗ್ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಕ್ರೀಮ್ ಮತ್ತು ಗೋಲ್ಡ್ ಬಣ್ಣದ ಸಾಂಪ್ರದಾಯಿಕ ಉಡುಪುಗಳಲ್ಲಿ ಕಂಗೊಳಿಸುತ್ತಿರುವ ಈ ಸುಂದರ ಕುಟುಂಬದ ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ. ರಣ್‌ವೀರ್ ಸಿಂಗ್ ಮುಗುಳುನಗುತ್ತಾ ನಿಂತಿದ್ದರೆ, ದೀಪಿಕಾ ತಮ್ಮ ನವಜಾತ ಶಿಶುವನ್ನು ಪ್ರೀತಿಯಿಂದ ಎತ್ತಿಕೊಂಡಿದ್ದಾರೆ. ಇನ್ನು ಹಿರಿಯ ಮಗಳು ದುವಾ ತನ್ನ ಪುಟ್ಟ ತಂಗಿಗೆ ಮುದ್ದಾದ ಮುತ್ತು ಕೊಡುವ ದೃಶ್ಯವು ಈ ಚಿತ್ರದಲ್ಲಿದೆ.

ದೇವಿ ಹೆಸರಿನ ವಿಶೇಷತೆ ಮತ್ತು ಅರ್ಥವೇನು?

ದೇವಿ ಎನ್ನುವುದು ಸಂಸ್ಕೃತ ಮೂಲದ ಸುಂದರ ಪದವಾಗಿದ್ದು, ದೇವತೆ ಅಥವಾ ದೈವಿಕ ಮಹಿಳೆ (Divine Woman) ಎಂದು ಅರ್ಥೈಸುತ್ತದೆ. ಹಿಂದೂ ಧರ್ಮದಲ್ಲಿ ದೇವಿ ಎಂಬುದು ಸ್ತ್ರೀ ದೈವಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ದುರ್ಗಾ, ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿಯಂತಹ ವಿವಿಧ ಸ್ವರೂಪಗಳಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಹೆಸರು ಶಕ್ತಿ, ಅನುಕಂಪ, ಕರುಣೆ ಮತ್ತು ಸ್ತ್ರೀ ದೈವತ್ವದ ಪ್ರತೀಕವಾಗಿದೆ. ತಾಯಿ ದುರ್ಗೆಯು ಧೈರ್ಯ, ರಕ್ಷಣೆ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸಿದರೆ, ಲಕ್ಷ್ಮಿ ದೇವಿಯು ಸಮೃದ್ಧಿ ಹಾಗೂ ಸಂಪತ್ತನ್ನು, ಸರಸ್ವತಿ ದೇವಿಯು ಜ್ಞಾನ ಮತ್ತು ಕಲೆಗಳನ್ನು ಪ್ರತಿನಿಧಿಸುತ್ತಾಳೆ. ಹೀಗಾಗಿ ಈ ಹೆಸರು ಭಾರತೀಯ ಸಂಸ್ಕೃತಿ ಹಾಗೂ ಧರ್ಮದಲ್ಲಿ ಆಳವಾದ ಬೇರುಗಳನ್ನು ಹೊಂದಿದೆ. ಆದಾಗ್ಯೂ, ದೀಪಿಕಾ ಮತ್ತು ರಣ್‌ವೀರ್ ಈ ಹೆಸರನ್ನು ಆಯ್ಕೆ ಮಾಡಲು ಸ್ಫೂರ್ತಿ ಏನು ಎಂಬುದನ್ನು ಬಹಿರಂಗಪಡಿಸಿಲ್ಲ.

ಕುಟುಂಬದಲ್ಲಿ ಹೊಸ ಅಧ್ಯಾಯ!

ದೀಪಿಕಾ ಮತ್ತು ರಣ್‌ವೀರ್ ದಂಪತಿ ಕಳೆದ ತಿಂಗಳು ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಹೆಜ್ಜೆಗುರುತಿನ ಚಿತ್ರದೊಂದಿಗೆ ವೆಲ್ಕಮ್ ಬೇಬಿ ಗರ್ಲ್ ಎಂದು ಬರೆಯುವ ಮೂಲಕ ಮಗುವಿನ ಆಗಮನವನ್ನು ಹಂಚಿಕೊಂಡಿದ್ದರು. 2024ರ ಸೆಪ್ಟೆಂಬರ್‌ನಲ್ಲಿ ಇವರಿಗೆ ಮೊದಲ ಮಗಳು ದುವಾ ಜನಿಸಿತ್ತು. ನಂತರ ಅದೇ ವರ್ಷದ ನವೆಂಬರ್‌ನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಿರಿಯ ಮಗಳ ಹೆಸರನ್ನು ಬಹಿರಂಗಪಡಿಸಿದ್ದರು. ದುವಾ ಎಂದರೆ ಪ್ರಾರ್ಥನೆ ಎಂದರ್ಥ ಎಂದು ತಿಳಿಸಿದ್ದ ದೀಪಿಕಾ, ತಮ್ಮ ಮಗಳು ತಮ್ಮ ಪ್ರಾರ್ಥನೆಗೆ ಸಿಕ್ಕ ಉತ್ತರ ಎಂದು ಭಾವನೆ ಹಂಚಿಕೊಂಡಿದ್ದರು.

ಈಗ ತಮ್ಮ ಎರಡನೇ ಮಗಳ ಹೆಸರನ್ನು ಬಹಿರಂಗಪಡಿಸುವ ಮೂಲಕ ದಂಪತಿಗಳು ಅಭಿಮಾನಿಗಳಿಗೆ ಮತ್ತೊಂದು ಮಧುರ ಕ್ಷಣವನ್ನು ನೀಡಿದ್ದಾರೆ. ತಂದೆ-ತಾಯಿ ಹಾಗೂ ಇಬ್ಬರು ಹೆಣ್ಣುಮಕ್ಕಳಿರುವ ಈ ಸುಂದರ ಕುಟುಂಬದ ಹೊಸ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದು, ನೆಟ್ಟಿಗರು ಪ್ರೀತಿಯ ಸುರಿಮಳೆಗೈಯುತ್ತಿದ್ದಾರೆ(ಏಜೆನ್ಸೀಸ್​).