452 ಕೋಟಿ ರೂ. ಕಲೆಕ್ಷನ್ ಕಂಡ್ರೂ 'ಹನುಮಾನ್​ ಅಂಶ್​' ನಿರ್ದೇಶಕರಿಗಿಲ್ಲ ಕಿಂಚಿತ್ತು ಗೌರವ​! ನಿರ್ದೇಶಕ ವಿಶಾಲ್ ಚತುರ್ವೇದಿ ಬೇಸರ | Hanuman Ansh 
ಬಾಲಿವುಡ್

452 ಕೋಟಿ ರೂ. ಕಲೆಕ್ಷನ್ ಕಂಡ್ರೂ 'ಹನುಮಾನ್​ ಅಂಶ್​' ನಿರ್ದೇಶಕರಿಗಿಲ್ಲ ಕಿಂಚಿತ್ತು ಗೌರವ​! ಡೈರೆಕ್ಟರ್​ ವಿಶಾಲ್ ಚತುರ್ವೇದಿ ಬೇಸರ | Hanuman Ansh

ಮುಂಬೈ: ಯಾವುದೇ ದೊಡ್ಡ ಸ್ಟಾರ್​ ತಾರಾಗಣವಿಲ್ಲದೆ, ಭರ್ಜರಿ ಪ್ರಚಾರವಿಲ್ಲದೆ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟ ವಿಶಾಲ್​ ಚತುರ್ವೇದಿ ನಿರ್ದೇಶನದ 'ಹನುಮಾನ್ ಅಂಶ್​' (​Hanuman Ansh) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 442 ಕೋಟಿ ರೂ. ಕಲೆಕ್ಷನ್​ ಕಂಡು ಹೊಸ ದಾಖಲೆಯನ್ನು ನಿರ್ಮಿಸಿದೆ. ಕೇವಲ 2 ಕೋಟಿ ಬಜೆಟ್​ನ ಚಿತ್ರವು ಟಾಕ್ಸಿಕ್​ ಸೇರಿದಂತೆ ಸ್ಟಾರ್​ ನಟರ ಸಿನಿಮಾಗಳಿಗೆ ಕೊಟ್ಟ ಪೈಪೋಟಿ ಸಿನಿಪ್ರೇಮಿಗಳ ಹುಬ್ಬೇರಿಸಿತು. ಇಷ್ಟೆಲ್ಲ ಮೈಲಿಗಲ್ಲು ತಲುಪಿ, ಭರ್ಜರಿ ಸಕ್ಸಸ್​ ತಂದುಕೊಟ್ಟರೂ ಬಾಲಿವುಡ್​ ಮಂದಿಯಿಂದ ಮಾತ್ರ ಕಿಂಚಿತ್ತು ಗೌರವ ಸಿಗದಿರುವ ಬಗ್ಗೆ ನಿರ್ದೇಶಕರು ಬೇಸರ ಹೊರಹಾಕಿದ್ದಾರೆ.

ಬಾಲಿವುಡ್‌ನಲ್ಲಿ ಒಂದು ಸಿನಿಮಾ ಯಶಸ್ವಿ ಆಗಬೇಕಾದರೆ ದೊಡ್ಡ ಬಜೆಟ್, ಸ್ಟಾರ್ ನಟರು ಮತ್ತು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಬೆಂಬಲ ಇರಲೇಬೇಕು ಎಂಬುದು ಬಹುತೇಕರಿಗೆ ಗೊತ್ತೇ ಇರುವ ವಿಷಯ. ಆದರೆ, ಈ ನಂಬಿಕೆಯನ್ನು ಸುಳ್ಳು ಮಾಡಿದ್ದು 'ಹನುಮಾನ್ ಅಂಶ' ಸಿನಿಮಾ. ನೀಮ್ ಕರೋಲಿ ಬಾಬಾ ಅವರ ಜೀವನ ಕಥೆಯನ್ನು ಆಧರಿಸಿದ ಈ ಭಕ್ತಿಪ್ರಧಾನ ಚಿತ್ರ ಕೇವಲ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿ, ಇಂದು 452.86 ಕೋಟಿ ರೂ. ಗಳಿಸಿದೆ. ಈ ಮಟ್ಟಿಗಿನ ಯಶಸ್ಸು ಕಂಡಿದ್ದರೂ ಬಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆಗಳಿಂದ ಯಾವುದೇ ಅಧಿಕೃತ ಅಭಿನಂದನೆ ಅಥವಾ ಪ್ರತಿಕ್ರಿಯೆ ಬಂದಿಲ್ಲ ಎಂದು ವಿಶಾಲ್ ಚತುರ್ವೇದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಗ್ ಬ್ಯಾನರ್​ ಮಂದಿಯ ನಡೆಗೆ ಕಿಡಿ

ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ ವಿಶಾಲ್ ಚತುರ್ವೇದಿ, ದೊಡ್ಡ ಬಜೆಟ್‌ನ ಸಿನಿಮಾಗಳು ಯಶಸ್ಸು ಕಂಡಾಗ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳು ಅಭಿನಂದನಾ ಸಂದೇಶಗಳನ್ನು ಹಂಚಿಕೊಳ್ಳುತ್ತವೆ. ಮತ್ತು ಆಯಾ ತಂಡದ ಸದಸ್ಯರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೆ. ಆದರೆ, ನಮ್ಮ ಚಿತ್ರದ ವಿಚಾರದಲ್ಲಿ ಆ ರೀತಿಯ ಪ್ರತಿಕ್ರಿಯೆ ಒಬ್ಬರಿಂದಲೂ ಬರಲಿಲ್ಲ ಎಂದು ಹೇಳಿದ್ದಾರೆ.

"ದೊಡ್ಡ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್​ ಕಂಡಾಗ ಪ್ರಮುಖ ನಿರ್ಮಾಣ ಸಂಸ್ಥೆಗಳು ಅಧಿಕೃತ ಹೇಳಿಕೆಗಳನ್ನು ರಿಲೀಸ್​ ಮಾಡುವುದನ್ನು ನೋಡಿದ್ದೇನೆ. ಆದರೆ, ನನ್ನ ಚಿತ್ರದ ಯಶಸ್ಸಿನ ಬಗ್ಗೆ ಯಾವುದೇ ಪ್ರಮುಖ ನಿರ್ಮಾಣ ಸಂಸ್ಥೆ ಪ್ರತಿಕ್ರಿಯಿಸಿಲ್ಲ. ವೈಯಕ್ತಿಕವಾಗಿ ಭೇಟಿಯಾದಾಗ ಅನೇಕರು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ, ಸಾರ್ವಜನಿಕವಾಗಿ ಅಭಿನಂದಿಸಿದವರು ಕೆಲವರು ಮಾತ್ರ" ಎಂದಿದ್ದಾರೆ.

ನಟ ವರುಣ್ ಧವನ್, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸೇರಿದಂತೆ ಕೆಲವೇ ಕೆಲವರು ನಮ್ಮ ಚಿತ್ರವನ್ನು ಅಭಿನಂದಿಸಿದ್ದಾರೆ. ಆದರೆ, ಯಾವುದೇ ಪ್ರಮುಖ ಸ್ಟುಡಿಯೋ ಅಥವಾ ನಿರ್ಮಾಣ ಸಂಸ್ಥೆಯಿಂದ, ಸ್ಟಾರ್​ಗಳಿಂದ ಅಧಿಕೃತ ಪತ್ರ ಅಥವಾ ಅಭಿನಂದನಾ ಹೇಳಿಕೆಗಳು ಬಂದಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.

ಸ್ಟಾರ್​ಗಳಿಲ್ಲ, ಬಿಗ್​ ಬಜೆಟ್ ಅಂತೂ ಇಲ್ವೇ ಇಲ್ಲ

ಒಂದು ಸಿನಿಮಾ ಯಶಸ್ವಿಯಾಗಲು ದೊಡ್ಡ ಬಜೆಟ್, ಖ್ಯಾತ ನಟರು ಅಥವಾ ದೊಡ್ಡ ನಿರ್ಮಾಣ ಸಂಸ್ಥೆಯ ಬೆಂಬಲವೇ ಬೇಕೆಂಬ ಕಲ್ಪನೆಯನ್ನು 'ಹನುಮಾನ್ ಅಂಶ' ಸಂಪೂರ್ಣವಾಗಿ ತಲೆಕೆಳಗಾಗಿಸಿದೆ. ಸಿನಿಮಾ ಎನ್ನುವುದು ಪ್ರೇಕ್ಷಕರಿಗಾಗಿ ಇರುವ ಮಾಧ್ಯಮ. ಒಂದು ಚಿತ್ರ ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಂತಿಮವಾಗಿ ಪ್ರೇಕ್ಷಕರೇ ನಿರ್ಧರಿಸುತ್ತಾರೆ. ಹಿಂದೆ ವಿಮರ್ಶಕರು ಮತ್ತು ಸಾಮಾಜಿಕ ಜಾಲತಾಣಗಳ ಅಭಿಪ್ರಾಯಗಳು ಸಿನಿಮಾಗಳ ಬಗ್ಗೆ ಜನರ ನಿರ್ಧಾರವನ್ನು ಪ್ರತಿಬಿಂಬಿಸುತ್ತಿದ್ದವು. ಆದರೀಗ, ಪ್ರೇಕ್ಷಕರೇ ತಮಗೆ ಇಷ್ಟವಾದ ಚಿತ್ರಗಳಿಗೆ ನೇರವಾಗಿ ಸಾಥ್​ ಕೊಡುತ್ತಾರೆ ಎಂದು ಹೇಳಿದ್ದಾರೆ.

'ರಾಮಾಯಣ' ಬಗ್ಗೆ ವಿಶಾಲ್ ಮಾತು

ಇದೇ ಸಂದರ್ಶನದಲ್ಲಿ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಬಗ್ಗೆಯೂ ವಿಶಾಲ್ ಚತುರ್ವೇದಿ ಮಾತನಾಡಿದ್ದಾರೆ. ಎರಡು ಭಾಗಗಳಲ್ಲಿ ನಿರ್ಮಾಣ ಆಗಿರುವ ಈ ಚಿತ್ರಕ್ಕೆ ಸುಮಾರು 4,000 ಕೋಟಿ ರೂ. ಬಜೆಟ್ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ನಾನಿನ್ನು ಈ ಸಿನಿಮಾವನ್ನು ನೋಡಿಲ್ಲ. ಕೆಲಸದ ಒತ್ತಡದಿಂದಾಗಿ ನೋಡಲು ಸಮಯ ಸಿಕ್ಕಿಲ್ಲ. ಖಂಡಿತವಾಗಿ ಶೀಘ್ರವೇ ರಾಮಾಯಣವನ್ನು ನೋಡುವ ಕಾತರವಿದೆ ಎಂದು ವಿಶಾಲ್ ಹೇಳಿದ್ದಾರೆ,(ಏಜೆನ್ಸೀಸ್).