- ಆರು ವರ್ಷಗಳ ಬಳಿಕ ನಟನೆಗೆ ಮರಳಲಿರುವ ನಟಿ ಬಿಪಾಶಾ ಬಸು
- ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಬಹುತೇಕ ಬೆಳ್ಳಿತೆರೆಯಿಂದ ಬ್ರೇಕ್ ಪಡೆದ ನಟಿ
- ‘ಬಾರಾಬಂಕಿ’ ಎಂಬ ಕ್ರೈಂ-ಥ್ರಿಲ್ಲರ್ ಮೂಲಕ ಮತ್ತೆ ಬಾಲಿವುಡ್ ಗೆ ವಾಪಸ್
ಬಾಲಿವುಡ್ ನಟಿ ಬಿಪಾಶಾ ಬಸು ಆರು ವರ್ಷಗಳ ಬಳಿಕ ನಟನೆಗೆ ಮರಳುತ್ತಿದ್ದಾರೆ. 2020ರಲ್ಲಿ ತೆರೆಕಂಡಿದ್ದ ‘ಡೇಂಜರಸ್’ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಅವರು ಆ ಬಳಿಕ ನಟನೆಯಿಂದ ದೂರ ಉಳಿದಿದ್ದರು. 2016ರಲ್ಲಿ ಕರಣ್ ಸಿಂಗ್ ಗ್ರೋವರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಬಹುತೇಕ ಬೆಳ್ಳಿತೆರೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಅವರು, ‘ವೆಲ್ಕಂ ಟು ನ್ಯೂಯಾರ್ಕ್’ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು ಬಿಟ್ಟರೆ, ಕಿರುತೆರೆಯಲ್ಲಿ ಕೆಲ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆರು ವರ್ಷಗಳ ಬಳಿಕ 47 ವರ್ಷದ ಬಿಪಾಶಾ ಮತ್ತೆ ವೆಬ್‌ಸರಣಿ ಮೂಲಕವೇ ನಟನೆಗೆ ಮರಳುತ್ತಿದ್ದಾರೆ. ನಿರ್ದೇಶಕ ಹನ್ಸಲ್ ಮೆಹ್ತಾ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಬಾರಾಬಂಕಿ’ ಎಂಬ ಕ್ರೈಂ-ಥ್ರಿಲ್ಲರ್‌ನಲ್ಲಿ ಅವರು ನಟಿಸುತ್ತಿದ್ದಾರೆ. ಈಗಾಗಲೇ ನಟಿ ಮುಂಬೈನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ್ ಲಾಲ್ ರಚಿಸಿರುವ ‘ದ ಬಾರಾಬಂಕಿ ನಾರ್ಕೋಸ್: ಬಸ್ಟಿಂಗ್ ಇಂಡಿಯಾಸ್ ಮೋಸ್ಟ್ ನಟೋರಿಯಸ್ ಡ್ರಗ್ ಕಾರ್ಟೆಲ್’ ಪುಸ್ತಕವನ್ನು ಆಧಾರಿಸಿ, ಈ ಸರಣಿ ಮೂಡಿಬರುತ್ತಿದೆ. ಈಗಾಗಲೇ ಶೂಟಿಂಗ್ ಆರಂಭಿಸಲಾಗಿದ್ದು, ಇಲ್ಲಿ ಬಿಪಶಾ ಪವರ್‌ಫುಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಶಾಲ್ ಜೇತ್ವಾ, ಸನ್ನಿ ಕೌಶಲ್ ಕೂಡ ತಾರಾಗಣದಲ್ಲಿದ್ದಾರೆ. -ಏಜೆನ್ಸೀಸ್