ಮುಂಬೈ: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಅವರ ರಾಮನಿಗಿಂತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾವಣನ ಪಾತ್ರವೇ ಹೆಚ್ಚು ಪವರ್ಫುಲ್ ಆಗಿ ಹೈಲೈಟ್ ಆಗಿದೆಯೇ? ಎಂಬ ಪ್ರಶ್ನೆ ಪ್ರೇಕ್ಷಕರ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದೀಗ ಈ ಚರ್ಚೆಗೆ ಚಿತ್ರದಲ್ಲಿ ಜಟಾಯು ಪಾತ್ರಕ್ಕೆ ಧ್ವನಿ ನೀಡಿರುವ ಹಿರಿಯ ನಟ ಅನುಪಮ್ ಖೇರ್ ಖಡಕ್ ಹಾಗೂ ಅಷ್ಟೇ ಆಸಕ್ತಿದಾಯಕ ಉತ್ತರ ನೀಡಿದ್ದಾರೆ.
'ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅನುಪಮ್ ಖೇರ್ ಅವರಿಗೆ, ಪ್ರೇಕ್ಷಕರು ರಾಮನಿಗಿಂತ ರಾವಣನ ದೃಶ್ಯಗಳಿಗೇ ಹೆಚ್ಚು ಫಿದಾ ಆಗುತ್ತಿರುವುದಕ್ಕೆ ಕಾರಣವೇನು? ಎಂದು ಕೇಳಲಾಯಿತು. ಇದಕ್ಕೆ ನಗುತ್ತಲೇ ಉತ್ತರಿಸಿದ ಖೇರ್, ಇದು ನಿರ್ದೇಶಕ ನಿತೇಶ್ ತಿವಾರಿ ಅವರ ಉದ್ದೇಶಪೂರ್ವಕ ಮಾಸ್ಟರ್ ಪ್ಲಾನ್ ಮೊದಲಿನಿಂದಲೂ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ತರುವ ಯೋಜನೆಯಿತ್ತು. ಮೊದಲ ಭಾಗದಲ್ಲಿ ಖಳನಾಯಕ ಎಷ್ಟು ಭಯಾನಕ ಮತ್ತು ಅತ್ಯಂತ ಶಕ್ತಿಶಾಲಿ ಎಂಬುದನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ರಿಜಿಸ್ಟರ್ ಮಾಡುವುದು ಅಗತ್ಯವಾಗಿತ್ತು. ಆಗಷ್ಟೇ ಎರಡನೇ ಭಾಗದಲ್ಲಿ ರಾಮನು ಆ ಮಹಾಶಕ್ತಿಶಾಲಿ ರಾವಣನನ್ನು ಸಂಹರಿಸಿದಾಗ, ಅಧರ್ಮದ ವಿರುದ್ಧ ಧರ್ಮದ ಗೆಲುವು ಇನ್ನಷ್ಟು ರೋಚಕವಾಗಿ ಮತ್ತು ಪರಿಣಾಮಕಾರಿಯಾಗಿ ಮೂಡಿಬರಲು ಸಾಧ್ಯ ಎಂದು ವಿವರಿಸಿದ್ದಾರೆ.
ಈ ತಂತ್ರಕ್ಕೆ ಬಾಲಿವುಡ್ನ ಎವರ್ಗ್ರೀನ್ ಸಿನಿಮಾಗಳಾದ ಶೋಲೆ ಮತ್ತು ಕರ್ಮ ಚಿತ್ರಗಳನ್ನು ಉದಾಹರಣೆಯಾಗಿ ನೀಡಿದ ಅವರು, ಗಬ್ಬರ್ ಸಿಂಗ್ನಂತಹ ಖಳನಾಯಕ ಎಷ್ಟು ಕ್ರೂರಿ ಮತ್ತು ಬಲಶಾಲಿ ಎಂದು ತೋರಿಸಿದಾಗ ಮಾತ್ರ, ಕೊನೆಯಲ್ಲಿ ನಾಯಕ ಆತನನ್ನು ಸೋಲಿಸಿದಾಗ ಪ್ರೇಕ್ಷಕರಿಗೆ ಸಿಗುವ ಕಿಕ್ ಮತ್ತು ತೃಪ್ತಿಯೇ ಬೇರೆ ಇರುತ್ತದೆ. ಇಲ್ಲೂ ಅದೇ ಸೂತ್ರವನ್ನು ಬಳಸಲಾಗಿದೆ ಎಂದಿದ್ದಾರೆ.
ರಾವಣನ ಪಾತ್ರ ರಾಮನಿಗಿಂತ ಹೆಚ್ಚು ಆಸಕ್ತಿದಾಯಕವಾಗಿದೆ ಎಂಬ ವಾದವನ್ನು ತಳ್ಳಿಹಾಕಿದ ಅನುಪಮ್ ಖೇರ್, ನಿಜ ಹೇಳಬೇಕೆಂದರೆ, ರಾಮನ ವ್ಯಕ್ತಿತ್ವವೇ ರಾವಣನ ಪಾತ್ರವನ್ನು ಇನ್ನಷ್ಟು ಕುತೂಹಲಕಾರಿಯನ್ನಾಗಿಸಿದೆ. ಮೊದಲ ಭಾಗದಲ್ಲಿ ರಾವಣನ ಅಬ್ಬರ ಮತ್ತು ವೈಭವವನ್ನು ತೋರಿಸಲಾಗಿದೆ. ಆದರೆ, ಶ್ರೀರಾಮನ ಪಾತ್ರದ ನಿಜವಾದ ಶಕ್ತಿ ಮತ್ತು ಆಳ ಇನ್ನೂ ತೆರೆದುಕೊಳ್ಳಬೇಕಿದೆ. ವಾಲಿ ಸಂಹಾರ, ಮೇಘನಾದನೊಂದಿಗಿನ ಭೀಕರ ಯುದ್ಧದಂತಹ ರೋಚಕ ಘಟನೆಗಳು ಎರಡನೇ ಭಾಗದಲ್ಲಿ ಬರಲಿವೆ. ಪ್ರೇಕ್ಷಕರು ಇಡೀ ಮಹಾಕಾವ್ಯವನ್ನು ಒಂದೇ ಭಾಗದಲ್ಲಿ ಅಳೆಯಲು ಆತುರಪಡುತ್ತಿದ್ದಾರೆ ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೊತೆಗೆ, ಜಟಾಯು ಸಾವಿನ ಅಂಚಿನಲ್ಲಿರುವಾಗ ರಾಮ ಭಾವುಕರಾಗಿ ಕಣ್ಣೀರು ಹಾಕುವ ದೃಶ್ಯದಲ್ಲಿ ರಾಮನೊಳಗಿನ ಮಾನವೀಯ ಮೌಲ್ಯಗಳು ಎಷ್ಟು ಅದ್ಭುತವಾಗಿ ಮೂಡಿಬಂದಿವೆ ಎಂಬುದನ್ನೂ ಅವರು ಸ್ಮರಿಸಿದ್ದಾರೆ.
ಸಂದರ್ಶನದಲ್ಲಿ ಜಟಾಯು ಪಾತ್ರಕ್ಕೆ ಧ್ವನಿ ನೀಡಿದ ರೋಚಕ ಅನುಭವವನ್ನೂ ಖೇರ್ ಹಂಚಿಕೊಂಡಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ನನ್ನನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಿ, ಜಟಾಯು ಮತ್ತು ರಾವಣನ ನಡುವಿನ ಸುಮಾರು 9 ನಿಮಿಷಗಳ ಯುದ್ಧದ ದೃಶ್ಯವನ್ನು ತೋರಿಸಿದರು. ಆ ದೃಶ್ಯದ ತೀವ್ರತೆ ನೋಡಿ ನಾನು ತಕ್ಷಣ ಡಬ್ಬಿಂಗ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಮರುದಿನ ಬರಲು ಸಮಯ ಕೇಳಿದೆ ಎಂದಿದ್ದಾರೆ.
ಸಾಮಾನ್ಯವಾಗಿ ಇಂತಹ ದೃಶ್ಯಗಳಿಗೆ 20 ನಿಮಿಷಗಳಲ್ಲಿ ಡಬ್ಬಿಂಗ್ ಮುಗಿಸಬಹುದು. ಆದರೆ, ಜಟಾಯು ಕೊನೆಯುಸಿರೆಳೆಯುವ ಆ ಭಾವುಕ ಕ್ಷಣದ ಕೇವಲ 10-12 ಸಂಭಾಷಣೆಗಳಿಗೆ ಜೀವ ತುಂಬಲು ನಾನು ಬರೋಬ್ಬರಿ 5 ರಿಂದ 6 ಗಂಟೆಗಳ ಕಾಲ ತೆಗೆದುಕೊಂಡೆ. ಆ ಪಾತ್ರದ ಆತ್ಮ ಮತ್ತು ನೋವು ಪ್ರೇಕ್ಷಕರ ಹೃದಯಕ್ಕೆ ತಟ್ಟಬೇಕೆಂಬುದೇ ನನ್ನ ಗುರಿಯಾಗಿತ್ತು ಎಂದು ಅನುಪಮ್ ಖೇರ್ ಮನಬಿಚ್ಚಿ ಮಾತನಾಡಿದ್ದಾರೆ. ಒಟ್ಟಿನಲ್ಲಿ, ರಾಮಾಯಣ' ಭಾಗ-1ರಲ್ಲಿ ಯಶ್ ಅವರ ರಾವಣನ ಅಬ್ಬರ ಜೋರಾಗಿದ್ದರೆ, ಭಾಗ-2ರಲ್ಲಿ ರಣಬೀರ್ ಕಪೂರ್ ಅವರ ರಾಮನ ವಿಶ್ವರೂಪ ದರ್ಶನವಾಗಲಿದೆ ಎಂಬ ಸುಳಿವನ್ನು ಅನುಪಮ್ ಖೇರ್ ನೀಡಿದ್ದು, ಸೀಕ್ವೆಲ್ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ ( ಏಜೇನ್ಸಿಸ್)