Amitabh Bachchan (ಚಿತ್ರ X)
Amitabh Bachchan: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಇಂದು ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ನಟರಲ್ಲಿ ಒಬ್ಬರು. ಆದರೆ, ಈ ಹಂತ ತಲುಪಲು ಅವರು ನಡೆದುಬಂದ ಹಾದಿ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಆರಂಭದ ದಿನಗಳಲ್ಲಿ ಅವರ ಎತ್ತರ ಹಾಗೂ ನಟನೆಯ ಬಗ್ಗೆ ಹಲವರು ಟೀಕೆ ಮಾಡಿದ್ದಲ್ಲದೆ, ಸೆಟ್‌ನಿಂದ ಆಚೆ ಹಾಕಿದ ಘಟನೆಗಳೂ ನಡೆದಿದ್ದವು.
ಇತ್ತೀಚೆಗೆ 'ಕೌನ್ ಬನೇಗಾ ಕರೋಡ್‌ಪತಿ 18' (KBC 18) ಶೋನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತ ಕ್ರೀಡಾಪಟುಗಳಾದ ಲೋವ್ಲಿನಾ ಬೋರ್ಗೊಹೈನ್, ಝಂಡು ಕುಮಾರ್, ಶರ್ಮಿಳಾ ಧನ್ಕರ್ ಹಾಗೂ ಅಸ್ಮಿತಾ ಡೇ ಭಾಗವಹಿಸಿದ್ದರು. ಈ ಸಮಯದಲ್ಲಿ ಅಸ್ಮಿತಾ ಅವರು, ಕ್ರೀಡಾಪಟುಗಳಂತೆ ನಿಮಗೂ ಆರಂಭದಲ್ಲಿ ನಿರ್ದೇಶಕರಿಂದ ಬೈಗುಳ ಸಿಗುತ್ತಿತ್ತೇ? ಎಂದು ಪ್ರಶ್ನಿಸಿದರು.
ಎತ್ತರ ಜಾಸ್ತಿ ಇದೆ, ಮನೆಗೆ ಹೋಗು!
ಈ ಪ್ರಶ್ನೆಗೆ ತಮಾಷೆಯಾಗಿಯೇ ಉತ್ತರಿಸಿದ ಅಮಿತಾಭ್, ಆರಂಭದ ದಿನಗಳಲ್ಲಿ ನನಗೂ ತುಂಬಾ ಅವಮಾನಗಳಾಗಿವೆ. ನಿನಗೆ ನಟನೆ ಬರುವುದಿಲ್ಲ, ತುಂಬಾ ಎತ್ತರ ಇದ್ದೀಯಾ, ಮನೆಗೆ ಹೋಗು ಎಂದು ಹೇಳುತ್ತಿದ್ದರು ಎಂದು ಬಿಗ್ಬಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಮುಂದುವರಿದು ಮಾತನಾಡಿದ ಅವರು, ಕಷ್ಟಪಟ್ಟು ಅವಕಾಶ ಸಿಕ್ಕ ಮೇಲೆಯೂ, ಸಂಭಾಷಣೆ ಹೇಳುವುದು ಹೀಗಾ? ಎಂದು ಗದರಿಸುತ್ತಿದ್ದರು. ಅವರು ನೀಡುತ್ತಿದ್ದ ತಿದ್ದುಪಡಿಗಳಿಂದಲೇ ನಾನು ದಿನಕಳೆದಂತೆ ನನ್ನ ನಟನೆಯನ್ನು ಸುಧಾರಿಸಿಕೊಂಡೆ ಎಂದಿದ್ದಾರೆ.
ಲೇಟಾಗಿ ಬಂದು ಸೆಟ್‌ನಿಂದಲೇ ಹೊರಬಿದ್ದಿದ್ದ ಘಟನೆ
ಮತ್ತೊಂದು ಆಸಕ್ತಿಕರ ಘಟನೆಯನ್ನು ಹೇಳಿದ ಅಮಿತಾಭ್, ಅವರು ಎಂದಿಗೂ ಟೈಮ್ಗೆ ಬೆಲೆ ಕೊಡುವುದಾಗಿ ತಿಳಿಸಿದ್ದಾರೆ. ಆರಂಭದ ದಿನಗಳಲ್ಲಿ ನನ್ನ ಬಳಿ ಕಾರಿರಲಿಲ್ಲ. ಹಾಗಾಗಿ ಬೇರೆ ಅವರ ಕಾರಿನಲ್ಲಿ ಸೆಟ್ಗೆ ಲೇಟಾಗಿ ತಲುಪಿದೆ. ಆಗ ನಿರ್ದೇಶಕರು ಸೆಟ್ನ ಹೊರಗಡೆಯೇ ನಿಂತು ಇಂದಿನ ಶೂಟಿಂಗ್ ಮುಗೀತು ನೀನು ಇಲ್ಲಿಂದ ಹೊರಡು ಎಂದು ಕಳುಹಿಸಿದ್ದರು ಎಂದು ಹೇಳಿದರು.
ಬಿಗ್ ಬಿ ಮುಂದಿನ ಸಿನಿಮಾ
ಚಿತ್ರರಂಗದ ವಿಚಾರಕ್ಕೆ ಬಂದರೆ, ಅಮಿತಾಭ್ ಬಚ್ಚನ್ ಅವರು ಪ್ರಭಾಸ್ ಅಭಿನಯದ 'ಕಲ್ಕಿ 2' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಡಿಸೆಂಬರ್ 2027 ರಲ್ಲಿ ತೆರೆಕಾಣುವ ನಿರೀಕ್ಷೆಯಿದೆ (ಏಜೆನ್ಸೀಸ್).