Aishwarya Rai: ಫರಾ ಖಾನ್ ನಿರ್ದೇಶನದಲ್ಲಿ ಮೂಡಿಬಂದ, ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಹ್ಯಾಪಿ ನ್ಯೂ ಇಯರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ದೊಡ್ಡ ಹಿಟ್ ಆಯಿತು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ಮಾಹಿತಿ. ಆದರೆ, ಈ ಸೂಪರ್ ಹಿಟ್ ಸಿನಿಮಾಗೆ ಮೊದಲ ಆಯ್ಕೆ ದೀಪಿಕಾ ಪಡುಕೋಣೆ ಅಲ್ಲ, ಬದಲಿಗೆ ಐಶ್ವರ್ಯಾ ರೈ ಬಚ್ಚನ್ ಎಂಬ ವಿಚಾರ ನಿಮಗೇನಾದರೂ ತಿಳಿದಿದಿಯೇ?
ಐಶ್ವರ್ಯಾ ರೈ ಸಿನಿಮಾ ಬೇಡ ಎಂದಿದ್ದೇಕೆ?
ಐಶ್ವರ್ಯಾ ಮಗಳು ಆರಾಧ್ಯಾ ಹುಟ್ಟಿದ ನಂತರ ಚಿತ್ರರಂಗದಿಂದ ಸಣ್ಣ ವಿರಾಮ ತೆಗೆದುಕೊಂಡಿದ್ದರು. ಈ ವೇಳೆ ಅವರಿಗೆ 'ಹ್ಯಾಪಿ ನ್ಯೂ ಇಯರ್' ಚಿತ್ರದ ಆಫರ್ ಬಂದಿತ್ತು. ಕಂಬ್ಯಾಕ್ ಮಾಡಲು ಇದು ಉತ್ತಮ ಸಿನಿಮಾವಾಗಿದ್ದರೂ, ಅವರು ಈ ಆಫರ್ ಅನ್ನು ನಯವಾಗಿಯೇ ನಿರಾಕರಿಸಿದ್ದರು. ಇದಕ್ಕೆ ಮುಖ್ಯ ಕಾರಣವೆಂದರೆ ಅವರ ಪತಿ ಅಭಿಷೇಕ್ ಬಚ್ಚನ್ ಮತ್ತು ಶಾರುಖ್ ಖಾನ್ ಎಂದು ಹೇಳಿದ್ದಾರೆ.
ಹಳೆಯ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಐಶ್ವರ್ಯಾ, ತಾಯ್ತನದ ನಂತರ ಚಿತ್ರರಂಗಕ್ಕೆ ಮರಳಲು ಇದು ನಿಜಕ್ಕೂ ಉತ್ತಮವಾದ ಅವಕಾಶವಿತ್ತು. ಇಷ್ಟು ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ, ಖಚಿತವಾದ ಬಾಕ್ಸ್ ಆಫೀಸ್ ಗೆಲವು ಎಲ್ಲವೂ ಕಣ್ಣಮುಂದೆಯೇ ಇತ್ತು. ಆದರೆ, ನನ್ನ ಪತಿ ಅಭಿಷೇಕ್ ಬಚ್ಚನ್ ಈಗಾಗಲೇ ಸಿನಿಮಾದಲ್ಲಿದ್ದರು. ಕಥೆಯ ಪ್ರಕಾರ, ನಾನು ಶಾರುಖ್ ಅವರೊಂದಿಗೆ ರೊಮ್ಯಾಂಟಿಕ್ ಕೆಮಿಸ್ಟ್ರಿ ಅನುಭವಿಸಬೇಕಿತ್ತು ಎಂದಿದ್ದಾರೆ.
ನಾನು ಬೇರೆ ಸಿನಿಮಾದಲ್ಲಿ ನಟಿಯಾಗಿ ಕೆಲಸ ಮಾಡುತ್ತಿದ್ದರೆ ನಾನು ಖಂಡಿತವಾಗಿ ಒಪ್ಪುತ್ತಿದ್ದೆ. ಆದರೆ, ಪತಿ ಅದೇ ಸಿನಿಮಾದಲ್ಲಿದ್ದಾಗ ನಾನು ಆ ರೀತಿಯಾಗಿ ನಟಿಸುವುದರಿಂದ ವೀಕ್ಷಕರಲ್ಲಿ ಗೊಂದಲ ಅಥವಾ ಚರ್ಚೆಗಳು ಕಾರಣವಾಗಬಾರದು ಎನಿಸಿತು. ಆದಾಗ್ಯೂ, ಒಬ್ಬ ನಟಿಯಾಗಿ ಈ ಸಿನಿಮಾದಿಂದ ಹಿಂದೆ ಸರಿಯುವುದು ಸುಲಭವಾಗಿರಲಿಲ್ಲ, ಆದರೆ ಒಬ್ಬ ಪತ್ನಿಯಾಗಿ ನಾನು ಆ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಐಶ್ವರ್ಯಾ ಹೇಳಿದ್ದಾರೆ.
ಕಂಬ್ಯಾಕ್ ಮಿಸ್ ಆದರೂ ನಿರ್ಧಾರಕ್ಕೆ ಬದ್ಧ
ಐಶ್ವರ್ಯಾ ರೈ ಅವರ ಈ ನಿರ್ಧಾರದಿಂದಾಗಿ ಕೊನೆಗೆ ಆ ಪಾತ್ರ ದೀಪಿಕಾ ಪಡುಕೋಣೆ ಅವರ ಪಾಲಾಯಿತು. ಸಿನಿಮಾ ದೊಡ್ಡ ಯಶಸ್ಸು ಕಂಡರೂ, ಐಶ್ವರ್ಯಾ ಅವರು ನಟಿಯ ಸ್ಥಾನಕ್ಕಿಂತ ಪತ್ನಿಯ ಜವಾಬ್ದಾರಿಗೆ ಆದ್ಯತೆ ನೀಡಿ ಈ ಹೆಜ್ಜೆ ಇಟ್ಟಿದ್ದರು.
ಪ್ರಸ್ತುತ ಮಾಜಿ 'ಮಿಸ್ ವರ್ಲ್ಡ್' ಐಶ್ವರ್ಯಾ ರೈ ಬಚ್ಚನ್ ಅವರು 'ದೇವದಾಸ್', 'ಜೋಧಾ ಅಕ್ಬರ್', 'ಗುರು', 'ಹುಮ್ ದಿಲ್ ದೇ ಚುಕೆ ಸನಮ್' ಮತ್ತು 'ತಾಲ್' ನಂತಹ ಕಾಲಜಯಿ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಬಾಲಿವುಡ್‌ನ ಅತ್ಯಂತ ಗೌರವಾನ್ವಿತ ನಟಿಯರಲ್ಲಿ ಒಬ್ಬರಾಗಿದ್ದಾರೆ (ಏಜೆನ್ಸೀಸ್).