ಮುಂಬೈ: ಬಾಲಿವುಡ್ ನಟರ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅಟ್ಟಹಾಸ ಮುಂದುವರಿದಿದ್ದು, ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ ಬೆನ್ನಲ್ಲೇ ಈಗ ಇನ್ನೊಬ್ಬ ನಟನಿಗೆ ಹಣದ ಬೇಡಿಕೆ ಒಡ್ಡಿ ಬೆದರಿಕೆ ಕರೆ ಮಾಡಿರುವ ಬಗ್ಗೆ ವರದಿಯಾಗಿದೆ. ತನ್ನ ಹಾಸ್ಯಭರಿತ ಅಭಿನಯದ ಮೂಲಕ ಖ್ಯಾತಿಗಳಿಸಿರುವ ನಟ ತುಷಾರ್ ಕಪೂರ್‌ಗೆ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಕರೆ ಮಾಡಿ ಸುಮಾರು 5 ಕೋಟಿ ರೂ. ಗಳ ಬೇಡಿಕೆ ಇಟ್ಟಿದ್ದಾರೆಂದು ತಿಳಿದುಬಂದಿದೆ.
ಮಾಹಿತಿ ಪ್ರಕಾರ, ತನ್ನನ್ನು ತಾನು ಹ್ಯಾರಿ ಬಾಕ್ಸರ್ ಎಂದು ಹೇಳಿಕೊಂಡ ವ್ಯಕ್ತಿ, ತಾನು ಬಿಷ್ಣೋಯ್ ಗ್ಯಾಂಗ್‌ನಿಂದ ಕರೆ ಮಾಡುತ್ತಿದ್ದು, ಕೂಡಲೇ 5 ಕೋಟಿ ಹಣವನ್ನು ನೀಡಬೇಕು ಇಲ್ಲದಿದ್ದರೆ, ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ನಟ ತುಷಾರ್ ಕಪೂರ್‌ಗೆ ಬೆದಿರಿಕೆ ಒಡ್ಡಿದ್ದಾನೆ. ಕೂಡಲೇ ತುಷಾರ್ ಕಪೂರ್, ಮುಂಬೈ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದು, ತನಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.
ತುಷಾರ್ ಕಪೂರ್ ಸಲ್ಲಿಸಿರುವ ದೂರನ್ನು ಸ್ವೀಕರಿಸಿದ ಮುಂಬೈ ಪೊಲೀಸರು, ತನಿಖೆ ನಡೆಸುತ್ತಿದ್ದು, ನಟನಿಗೆ ಬಂದಿರುವ ಕರೆ ಹುಸಿ ಬೆದರಿಕೆ ಕರೆ ಇರಬಹುದೆಂದು ಅನುಮಾನ ವ್ಯಕ್ತವಾಗುತ್ತಿದೆ. ಹ್ಯಾರಿ ಬಾಕ್ಸರ್ ಎಂದು ಆತ ಕರೆಯಲ್ಲಿ ಹೇಳಿಕೊಂಡಿದ್ದಾನೆ. ಆದರೆ ಕಾಲ್ ರೆಕಾರ್ಡಿಂಗ್ನಲ್ಲಿರುವ ಧ್ವಿನಿಗೂ, ಹ್ಯಾರಿ ಬಾಕ್ಸರ್ ಧ್ವನಿಗೂ ಹೊಂದಾಣಿಕೆ ಆಗುತ್ತಿಲ್ಲ ಎನ್ನುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಆದರೂ, ಇತ್ತೀಚೆಗೆ ಬಾಲಿವುಡ್ ನಟರನ್ನು ಬಿಷ್ಣೋಯ್ ಗ್ಯಾಂಗ್ ಗುರಿಮಾಡಿಕೊಂಡಿರುವ ಕಾರಣ, ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆಂದು ತಿಳಿದುಬಂದಿದೆ.
ಇನ್ನು ಕೆಲ ದಿನಗಳ ಹಿಂದೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೂ ಬೆದರಿಕೆ ಕರೆ ಬಂದಿದ್ದ ಹಿನ್ನಲೆಯಲ್ಲಿ ಬಿಗ್ ಬಿ, ತಮ್ಮ ಜನತಾ ದರ್ಶನದ ಸಂದರ್ಭದಲ್ಲಿ ಬುಲೆಟ್ ಪ್ರೂಫ್ಗ್ಲಾಸ್ ಹಿಂದಿನಿಂದ ನಿಂತು ಅಭಿಮಾನಿಗಳನ್ನು ಬೇಟಿ ಮಾಡಿದ್ದ ವಿಡಿಯೋಗಳು ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗಿದ್ದವು.
ಅಕ್ಟೋಬರ್ನಲ್ಲಿ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ, ಈಗ ನವೆಂಬರ್ ಮೊದಲ ವಾರದಲ್ಲಿ ಅಮಿತಾಭ್ ಬಚ್ಚನ್ ಹಾಗೂ ತುಷಾರ್ ಕಪೂರ್‌ಗೆ ಬೆದರಿಕೆ ಕರೆ, ಇವನ್ನೆಲ್ಲಾ ನೋಡುತ್ತಿರ ಬೇಕಾದರೆ, ಬಿಷ್ಣೋಯ್ ಗ್ಯಾಂಗ್ ಹಿಟ್ ಲಿಸ್ಟ್ನಲ್ಲಿ ಇನ್ನೂ ಎಷ್ಟು ಜನ ಬಾಲಿವುಡ್ ತಾರೆಗಳಿದ್ದಾರೆಂದು ಕಾತುರದಿಂದ ಕಾಯುವಂತಾಗಿದೆ. ಜತೆಗೆ ತಮ್ಮ ಹೆಸರು ಈ ಲಿಸ್ಟ್ನಲ್ಲಿದೆಯೇ? ಎಂದು ನಟ-ನಟಿಯರು ಹೆದರುವ ಪರಿಸ್ಥಿತಿ ಖಂಡಿತವಾಗಿ ನಿರ್ಮಾಣವಾಗಿದ್ದು, ಪೊಲೀಸ್ ಇಲಾಖೆ ಈ ಕುರಿತು ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಶಿಸುವಂತಾಗಿದೆ, (ಏಜೆನ್ಸೀಸ್).