ಸಾಮಾನ್ಯವಾಗಿ ನಟಿಯರು ತೆರೆಯ ಮೇಲೆ ದಪ್ಪಗೆ ಕಾಣಲು ಇಷ್ಟಪಡುವುದಿಲ್ಲ. ಒಮ್ಮೆ ತೂಕ ಹೆಚ್ಚಿಸಿಕೊಂಡರೆ ಇಳಿಸಿಕೊಳ್ಳುವುದು ಕಷ್ಟ ಎನ್ನುವುದು ಒಂದು ಕಾರಣವಾದರೆ, ಮತ್ತೊಂದು ಬೇರೆ ಚಿತ್ರಗಳು ಕೈತಪ್ಪುವ ಆತಂಕವಿರುತ್ತದೆ. ಹೀಗಾಗಿಯೇ ನಾಯಕಿಯರು ಕಟ್ಟುನಿಟ್ಟಿನ ಡಯಟ್, ವರ್ಕೌಟ್ ರೂಢಿಸಿಕೊಂಡಿರುತ್ತಾರೆ. ಆದರೂ, ಭೂಮಿ ಪೇಡ್ನೆಕರ್ (ಧಮ್ ಲಗಾಕೇ ಹೈಶಾ), ಕಂಗನಾ ರಣಾವತ್ (ತಲೈವಿ), ಪರಿಣೀತಿ ಚೋಪ್ರಾ (ಅಮರ್ ಸಿಂಗ್ ಚಮ್ಕೀಲಾ), ವಿದ್ಯಾ ಬಾಲನ್ (ದ ಡರ್ಟಿ ಪಿಕ್ಚರ್), ಹುಮಾ ಖುರೇಷಿ (ಡಬಲ್ ಎಕ್ಸ್ಎಲ್), ಅನುಷ್ಕಾ ಶೆಟ್ಟಿ (ಸೈಜ್ ಜೀರೋ) ಸೇರಿ ಕೆಲ ನಟಿಯರು ತಮ್ಮ ಕಂಫರ್ಟ್ ಜೋನ್ನಿಂದ ಹೊರ ಬಂದು ಪಾತ್ರಗಳಿಗೆ ತೂಕ ಹೆಚ್ಚಿಸಿಕೊಂಡಿದ್ದಿದೆ. ಇದೀಗ ಈ ಸಾಲಿಗೆ ರಾಜ್ಯಪ್ರಶಸ್ತಿ ವಿಜೇತ ಮಲಯಾಳಂ ನಟಿ ನಿಮಿಷಾ ಸಜಾಯನ್ ಕೂಡ ಸೇರಿದ್ದಾರೆ. ಅಂಬಿಕಾ ಪಂಡಿತ್ ನಿರ್ದೇಶನದ ಹಿಂದಿ ಕೆಮ್ ಡ್ರಾಮಾ "ಬಬಿತಾ ಸಿಂಗ್ ರಿಪೋರ್ಟಿಂಗ್'ಗಾಗಿ 14 ಕೆಜಿ ತೂಕ ಹೆಚ್ಚಿಸಿಕೊಂಡು, ಇದೀಗ ಮತ್ತೆ ಅಷ್ಟೇ ತೂಕ ಇಳಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಈ ತೂಕದ ಜರ್ನಿ ಬಗ್ಗೆ ಅವರು, "ನಾನು ಬಬಿತಾ ಪಾತ್ರಕ್ಕಾಗಿ 58 ಕೆಜಿಯಿಂದ 72 ಕೆಜಿವರೆಗೆ 14 ಕಿಲೋ ತೂಕ ಹೆಚ್ಚಿಸಿಕೊಂಡಿದ್ದೆ. ಆದರೆ, ತೂಕ ಇಳಿಸಿಕೊಳ್ಳುವಾಗ ತುಂಬ ಕಷ್ಟಗಳನ್ನು ಎದುರಿಸಿದೆ. ಮೊದಲ 10 ದಿನಗಳ ಕಾಲ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ನಿದ್ರಾಹಿನತೆ, ಮೂಡ್ ಸ್ವಿಂಗ್ಸ್, ಹತಾಶೆ, ಸುಸ್ತು... ಹೀಗೆ ಹಲವು ಬಾರಿ ನನ್ನಿಂದ ಇನ್ನಾಗಲ್ಲ ಅಂತ ಟ್ರೇನರ್ ಮುಂದೆ ಕುಳಿತು ಕಣ್ಣೀರು ಹಾಕಿದ್ದಿದೆ. ಈಗ ಒಮ್ಮೆ ಹಿಂದಿರುಗಿ ಈ ಜರ್ನಿಯನ್ನು ನೋಡಿದರೆ ತಾಳ್ಮೆ ಮತ್ತು ನಂಬಿಕೆ ಎಷ್ಟು ಮುಖ್ಯ ಎಂಬುದರ ಅರಿವಾಗುತ್ತದೆ. ನಾನೇ ನಂಬಿಕೆ ಕಳೆದುಕೊಂಡಾಗ ಗಟ್ಟಿಯಾಗಿ ನಿಂತು ಧೈರ್ಯ ತುಂಬಿದ ಟ್ರೇನರ್ ಶಿುಗೆ ಧನ್ಯವಾದಗಳು' ಎಂದು ಹೇಳಿಕೊಂಡಿದ್ದಾರೆ. "ಬಬಿತಾ ಸಿಂಗ್ ರಿಪೋರ್ಟಿಂಗ್'ನಲ್ಲಿ ನಿಮಿಷಾ ಮಧ್ಯಪ್ರದೇಶದ ಎಎಸ್ಐ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಸದ್ಯ ಅವರು "ಎನ್ನ ವಿಳೈ' ಎಂಬ ಮಲಯಾಳಂ ಚಿತ್ರದಲ್ಲಿ ನಟಿಸಿದ್ದು, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.