ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್
ಆಗ್ರಾ: ಇತ್ತೀಚೆಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker) ನೀಡಿದ್ದ ಹೇಳಿಕೆಯೊಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಸ್ವರಾ ನೀಡಿರುವ ಹೇಳಿಕೆಯಿಂದ ನಮ್ಮ ಮಹಿಳೆಯರ ಗೌರವಕ್ಕೆ ಧಕ್ಕೆಯಾಗಿದೆ, ಹೀಗಾಗಿ ಯಾರು ಸ್ವರಾಳ ನಾಲಿಗೆಯನ್ನು ಕತ್ತರಿಸುತ್ತಾರೋ ಅವರಿಗೆ 1.50 ಲಕ್ಷ ಬಹುಮಾನ ನೀಡುವುದಾಗಿ ಯೋಗಿ ಯೂತ್ ಬ್ರಿಗೆಡ್ ರಾಜ್ಯಾಧ್ಯಕ್ಷ ಕುವರ್ ಅಜಯ್ ತೋಮರ್ ಘೋಷಿಸಿದ್ದಾರೆ.
ಕ್ಷತ್ರೀಯ ಕುಲಕ್ಕೆ ಅಗೌರವ!
ಇತ್ತೀಚೆಗೆ ಸ್ವರಾ ಭಾಸ್ಕರ್ ವೇದಿಕೆಯೊಂದರಲ್ಲಿ ಅಲ್ಲಾವುದ್ಧೀನ್ ಖಿಲ್ಜಿಯ ದಂಡಯಾತ್ರೆ ಕಾರಣ ನೂರಾರು ರಜಪೂತ್ ಸ್ತ್ರೀಯರು ಜೋಹಾರ್ ಆಚರಿಸಿದಕ್ಕೆ, ಇದೊಂದು ಪುಕ್ಕಲುತನ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಸಮಸ್ತ ಕ್ಷತ್ರೀಯ ಕುಲಕ್ಕೆ ಅಗೌರವನ್ನು ಉಂಟುಮಾಡಲಾಗಿದೆ. ಅಷ್ಟೇ ಅಲ್ಲದೇ, ನಮ್ಮ ತಾಯಂದಿರ, ಸಹೋದರಿಯರ ಬಲಿದಾನವನ್ನು, ಪುಕ್ಕಲುತನಕ್ಕೆ ನಟಿ ಹೋಲಿಸಿದ್ದಾರೆ.
ಜೋಹಾರ್ ಅನ್ನು ಸ್ವಾಭಿಮಾನಕ್ಕೆ ಆಚರಿಸದರೇ ಹೊರತು, ಹೇಡಿತನದಿಂದಲ್ಲ. ಸ್ವರಾಳ ಈ ಹೇಳಿಕೆಯನ್ನು ನಾವು ಸುಮ್ಮನೆ ಕೇಳಿಸಿಕೊಂಡು ಇರಲ್ಲ. ಯಾರು ಈ ಸ್ವರಾ ಭಾಸ್ಕರ್ಳ ನಾಲಿಗೆಯನ್ನು ಕತ್ತರಿಸುತ್ತಾರೋ ಅವರಿಗೆ 1.50 ಲಕ್ಷ ಹಣವನ್ನು ನಾನು ಉಡುಗೊರೆಯಾಗಿ ನೀಡಲಿದ್ದೆನೆಂದು ಅಜಯ್ ತೋಮರ್ ತಿಳಿಸಿದ್ದಾರೆ.
ಸ್ವರಾ ಹೇಳಿದ್ದೇನು?
ಇತ್ತೀಚೆಗೆ ವೇದಿಕೆಯೊಂದರಲ್ಲಿ ಕಾಣಿಸಿಕೊಂಡಿದ್ದ ಸ್ವರಾ ಭಾಸ್ಕರ್, ನಾನು ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತ್ ಸಿನಿಮಾದ ಕ್ಲೈಮಾಕ್ಸ್ ನೋಡುವಾಗ ಅಲ್ಲಿ ಸುಮಾರು 800 ಜನ ಮಹಿಳೆಯರು ಬೆಂಕಿಗೆ ಬಿದ್ದು ಪ್ರಾಣ ಕಳೆದುಕೊಂಡರು. ಇದನ್ನು ನೋಡುವಾಗ ಅತ್ಯಾಚಾರದ ನಂತರ ಸ್ತ್ರೀ ಬದುಕಲು ಸಾಧ್ಯವಿಲ್ಲ ಎನ್ನುವಂತೆ ಚಿತ್ರಿಸಿದ್ದಾರೆಂದು ನನಗೆ ಅನ್ನಿಸಿತು. ಇದೊಂದು ಹೇಡಿತನವೆಂದು ನಾನು ಬನ್ಸಾಲಿ ಅವರಿಗೆ ಪತ್ರ ಪರೆದಿದ್ದೆ ಎಂದು ಸ್ವರಾ ಹೇಳಿದ್ದರು.
ಆದರೆ ನಟಿಯ ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾದ ನಂತರ, ಸ್ವರಾ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಾನು ಅತ್ಯಾಚಾರಕ್ಕೆ ಒಳಗಾದ ಮಹಿಳೆ, ಸಮಾಜದಲ್ಲಿ ಬದುಕಬೇಕು. ಅದನ್ನು ಬಿಟ್ಟು ಪ್ರಾಣವನ್ನು ಕಳೆದುಕೊಳ್ಳಬಾರದು ಎಂಬ ಅರ್ಥದಲ್ಲಿ ಜೋಹಾರ್ನ್ನು ಉದಾಹರಣೆಯಾಗಿ ಬಳಸಿದ್ದೆ. ನಾನು ರಾಣಿ ಪದ್ಮಾವತಿಗೆ ಅಗೌರವ ತರುವಂತೆ ಹೇಳಿಕೆ ನೀಡಿಲ್ಲ ಎಂದಿದ್ದಾರೆ, (ಏಜನ್ಸೀಸ್).