ಮುಂಬೈ: ಬಾಲಿವುಡ್ ನಟಿ ಅನನ್ಯಾ ರಾಜ್ (35) (Ananya Raj) ಜುಲೈ 15ರಂದು ಇಹಲೋಕ ತ್ಯಜಿಸಿದ್ದು, ಈ ಆಘಾತಕಾರಿ ಸುದ್ದಿಯನ್ನು ಅವರ ಕುಟುಂಬಸ್ಥರು ತಡವಾಗಿ ಬಹಿರಂಗಪಡಿಸಿದ್ದಾರೆ. ಸುದೀರ್ಘ 1 ವರ್ಷಕ್ಕೂ ಹೆಚ್ಚು ಕಾಲದಿಂದ ತೀವ್ರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ನಟಿ, ಜುಲೈ 15ರ ಮುಂಜಾನೆ ನಿದ್ರೆಯಲ್ಲೇ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದಾರೆ.
ನಟಿಯ ಮರಣ ಸಂಭವಿಸಿ ಸುಮಾರು 1 ತಿಂಗಳ ನಂತರ ಅವರ ಕುಟುಂಬವು ನಟಿಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಭಾವನಾತ್ಮಕ ಹೇಳಿಕೆಯನ್ನು ಹಂಚಿಕೊಳ್ಳುವ ಮೂಲಕ ಈ ದುಃಖದ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಕುಟುಂಬಸ್ಥರು ಹೇಳಿದ್ದೇನು?
ಅತ್ಯಂತ ದುಃಖದಿಂದ ನಾವು ಅನನ್ಯಾ ಜುಲೈ 15ರ ಮುಂಜಾನೆ ಅಗಲಿದ್ದಾರೆ ಎಂದು ತಿಳಿಸುತ್ತಿದ್ದೇವೆ. ಅವರು ನಿದ್ರೆಯಲ್ಲಿರುವಾಗಲೇ ಶಾಂತಿಯುತವಾಗಿ ಕೊನೆಯುಸಿರೆಳೆದರು. ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅವರು ದೈಹಿಕ ಮತ್ತು ಮಾನಸಿಕ ಅಸ್ವಸ್ವತೆ ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದರು ಎಂದು ಹೇಳಿದ್ದಾರೆ.
ಆ ಎಲ್ಲಾ ಸವಾಲುಗಳನ್ನು ಗೆಲ್ಲಲು ಅವರು ಒಬ್ಬ ಶೂರ ಯೋಧೆಯಂತೆ ಹೋರಾಡಿದ್ದರು. ಅನನ್ಯಾ ಧೈರ್ಯಶಾಲಿ ಹುಡುಗಿಯಾಗಿದ್ದು, ರಾಣಿಯಂತೆ ಜೀವನ ನಡೆಸಿದವರು. ಮಗು, ನಿನ್ನ ಗೈರುಹಾಜರಿ ನಮ್ಮನ್ನು ಸದಾ ಕಾಡುತ್ತದೆ. ಆದಾಗ್ಯೂ, ಪ್ರತಿಯೊಬ್ಬರೂ ಆಕೆಯ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಬೇಕಾಗಿ ವಿನಂತಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಮಗೆ ಸಂಪೂರ್ಣ ಖಾಸಗಿತನ ಹಾಗೂ ಶಾಂತಿಯನ್ನು ನೀಡಬೇಕಾಗಿ ವಿನಂತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಅನನ್ಯಾ ರಾಜ್ ಹಿನ್ನಲೆ
ಮುಂಬೈನಲ್ಲಿ ಬೆಳೆದು ದೊಡ್ಡವರಾದ ಅನನ್ಯಾ ರಾಜ್, ಚಿತ್ರರಂಗ ಮತ್ತು ಸಂಗೀತ ವೀಡಿಯೋಗಳ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ತಮ್ಮ ನಟನಾ ಕೌಶಲದಿಂದ ಗಮನ ಸೆಳೆದಿದ್ದ ಅವರು, 2016ರಲ್ಲಿ ತೆರೆಕಂಡ '7 ಅವರ್ಸ್ ಟು ಗೋ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ತದನಂತರ 2017ರಲ್ಲಿ ಮೂಡಿಬಂದ 'ದಿ ಫೈನಲ್ ಎಕ್ಸಿಟ್' ಹಾಗೂ 2019ರ ಹಾರರ್ ಥ್ರಿಲ್ಲರ್ 'ಗೋಸ್ಟ್' ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಾತ್ರರಾಗಿದ್ದರು.
ಕೇವಲ 35ನೇ ವಯಸ್ಸಿಗೆ ನಟಿಯೊಬ್ಬರು ಅಕಾಲಿಕವಾಗಿ ಕೊನೆಯುಸಿರೆಳೆದಿರುವುದು ಚಲನಚಿತ್ರ ರಂಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಲನಚಿತ್ರ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ (ಏಜೆನ್ಸೀಸ್).