"ದ ತಾಷ್ಕೆಂಟ್ ಫೈಲ್ಸ್', "ದ ಕಾಶ್ಮೀರ್ ಫೈಲ್ಸ್', "ದ ವ್ಯಾಕ್ಸಿನ್ ವಾರ್'ನಂತಹ ನೈಜ ಘಟನೆಯಾಧಾರಿತ ಚಿತ್ರಗಳ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಗಾಗ ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. 2023ರಲ್ಲಿ "ದ ವ್ಯಾಕ್ಸಿನ್ ವಾರ್' ಬಳಿಕ ಮತ್ತೊಂದು ನೈಜ ಘಟನೆಯಾಧಾರಿತ ಚಿತ್ರದ ಸಿದ್ಧತೆಯಲ್ಲಿದ್ದ ವಿವೇಕ್ ಇದೀಗ, "ದ ಡೆಲ್ಲಿ ಫೈಲ್ಸ್: ದ ಬೆಂಗಾಲ್ ಚಾಪ್ಟರ್'ನೊಂದಿಗೆ ವಾಪಸ್ಸಾಗಿದ್ದಾರೆ.
1940ರ ದಶಕದ ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತಿ&ಗತಿಗಳ ಸುತ್ತ ಸಾಗುವ ಈ ಕಥೆಯಲ್ಲಿ, ಮುಸ್ಲಿಂ ಲೀಗ್ 1946ರಲ್ಲಿ ಡೈರೆಕ್ಟ್ ಆ್ಯಕ್ಷನ್ ಡೇ ಘೋಷಣೆಯ ನಂತರ ನಡೆದ ದಂಗೆಗಳು ಹಾಗೂ ನವೋಖಲಿ ಹಿಂಸಾಚಾರದ ಮೇಲೂ ಬೆಳಕು ಚೆಲ್ಲಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೆ ಶೂಟಿಂಗ್ ಸಮಯದ ಕೆಲ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ವಿವೇಕ್, "ಬಂಗಾಳದಲ್ಲಿ ಶಾಂತಿ, ಸಾಮರಸ್ಯ ಮತ್ತೆ ನೆಲೆಯೂರಲಿ ಎಂದು ಆಶಿಸುತ್ತೇನೆ. ಯುವಕರು ಧೈರ್ಯ ಮತ್ತು ವಿವೇಕದಿಂದ ಭಾರತದ ಮೂಲ ಸಂಸತಿಯನ್ನು ಉಳಿಸಿಕೊಳ್ಳಲು ಹೋರಾಡಬೇಕಿದೆ. ಬಂಗಾಳ ಮತ್ತೊಂದು ಕಾಶ್ಮೀರ ಆಗದಿರಲಿ' ಎಂದು ಬರೆದುಕೊಂಡಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಹಲವೆಡೆ ಹಿಂದುಗಳು ತಮ್ಮ ಊರು ತೊರೆದು ಗುಳೆ ಹೊರಟಿದ್ದಾರೆ.