ಬಾಲಿವುಡ್ ನಟರು ಮಾತ್ರವಲ್ಲ ನಟಿಯರಿಗೂ ಐಶಾರಾಮಿ ಕಾರುಗಳೆಂದರೆ ಕ್ರೇಜ್ ಹೆಚ್ಚು. ಮಾಧುರಿ ದೀಕ್ಷಿತ್, ಶ್ರದ್ಧಾ ಕಪೂರ್, ಮಲ್ಲಿಕಾ ಶೆರಾವತ್, ಶಿಲ್ಪಾ ಶೆಟ್ಟಿ, ಮಮತಾ ಮೋಹನ್ದಾಸ್ ಸೇರಿ ಹಲವು ನಟಿಯರು ಕೋಟ್ಯಂತರ ರೂ. ಮೌಲ್ಯದ ಕಾರುಗಳನ್ನು ಹೊಂದಿದ್ದಾರೆ. ಅದರಲ್ಲೂ 90ರ ದಶಕದ ಬಾಲಿವುಡ್ನ ಅತ್ಯಂತ ಜನಪ್ರಿಯ ನಟಿ 57 ವರ್ಷದ ಮಾಧುರಿ ದೀಕ್ಷಿತ್ಗೆ ಕಾರುಗಳ ಮೇಲೆ ವಿಶೇಷ ಒಲವು.
ಈಗಾಗಲೇ ತಲಾ 3 ಕೋಟಿ ರೂ. ಮೌಲ್ಯದ ಮರ್ಸಿಡೀಸ್ ಮೇಬ್ಯಾಕ್ ಎಸ್560 ಮತ್ತು ರೇಂಜ್ ರೋವರ್ ವೋಗ್ ಹಾಗೂ 3.5 ಕೋಟಿ ರೂ. ಮೌಲ್ಯದ ಪೋರ್ಷೆ 911 ಟರ್ಬೊ ಎಸ್ ಕಾರುಗಳನ್ನು ಹೊಂದಿರುವ ಅವರು, ಇದೀಗ 6 ಕೋಟಿ ರೂ. ಮೌಲ್ಯದ ಮತ್ತೊಂದು ಐಶಾರಾಮಿ ಸೂಪರ್ಕಾರ್ ಖರೀದಿಸಿದ್ದಾರೆ.
ಇತ್ತೀಚೆಗಷ್ಟೆ ಪತಿ ಡಾ. ಶ್ರೀರಾಮ್ ನೆನೆ ಜತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಾಧುರಿ, ಹೊಚ್ಚ ಹೊಸ ಫೆರಾರಿ 296 ಜಿಟಿಎಸ್ ರೋಸೋ ಕೋರ್ಸಾದಲ್ಲಿ ಮನೆಗೆ ಹೊರಟಿದ್ದಾರೆ. ಕೆಂಪು ಬಣ್ಣದ ಫೆರಾರಿಯಲ್ಲಿ ಪತಿಯ ಜತೆ ಮಾಧುರಿ ಸವಾರಿ ಮಾಡುತ್ತಿರುವ ವಿಡಿಯೋ ಸದ್ಯ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ಕಳೆದ ವರ್ಷ "ಭೂಲ್ ಭುಲಯ್ಯಾ 3' ಚಿತ್ರದಲ್ಲಿ ಮಾಧುರಿ ದೀತ್ ನಟಿಸಿದ್ದರು.