ಸಿನಿವಾಣಿ

ಪಟಾಕಿ ನಿಷೇಧ ವಿಚಾರ: ಐಪಿಎಸ್​ ಅಧಿಕಾರಿ ಡಿ. ರೂಪಾ ಟ್ವಿಟ್​ಗೆ ಕಂಗನಾ ಟಾಂಗ್​

ಬೆಂಗಳೂರು: ಪಟಾಕಿ ಬಗ್ಗೆ ಹೇಳಿಕೆ ನೀಡಿ ಹಲವು ಚರ್ಚೆಗೆ ಕಾರಣವಾಗಿದ್ದ ಐಪಿಎಸ್​ ಅಧಿಕಾರಿ ಡಿ. ರೂಪಾ ಅವರಿಗೆ ಬಾಲಿವುಡ್​ ನಟಿ ಕಂಗನಾ ರಣಾವತ್​ ಟಾಂಗ್​ ಕೊಟ್ಟಿದ್ದಾರೆ. ಅಷ್ಟಕ್ಕೂ ‘ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಬಂದಿಲ್ಲ. ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಅದರ ಪ್ರಸ್ತಾಪವಿಲ್ಲ. ವಿದೇಶಿಗರ ಆಗಮನಿದಿಂದ ನಮ್ಮ ದೇಶಕ್ಕೆ ಪಟಾಕಿಗಳು ಬಂದವು' ಎಂದು ರೂಪಾ ಸೋಷಿಯಲ್ ಮೀಡಿಯಾದಲ್ಲಿ ಪಟಾಕಿ ಬ್ಯಾನ್​ ಕುರಿತಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಇದೀಗ ಆ ಹೇಳಿಕೆ ಒಂದಷ್ಟು ವಿವಾದಕ್ಕೆ ಕಾರಣವಾಗುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ನಿಮ್ಮಂಥವರನ್ನು ಸರ್ಕಾರ ನೇಮಕಮಾಡಿಕೊಳ್ಳುವುದು ಸಾಮಾನ್ಯರ ಮೂಲಭೂತ ಹಕ್ಕುಗಳನ್ನು ರಕ್ಷಿಸಲೆಂದು. ಆದರೆ ನೀವು ಮಾಡುತ್ತಿರುವುದೇನು. ಖಚಿತ ಮಾಹಿತಿಯನ್ನು ಒದಗಿಸಿದರೂ ಅದರೊಂದಿಗೆ ಸೆಣಸಾಡದ ನೀವು ಟ್ರು ಇಂಡೊಲಜಿ ಟ್ವಿಟರ್​ ಖಾತೆಯನ್ನೇ ಬ್ಲಾಕ್​ ಮಾಡಿಸಿದ್ದೀರಿ. ನಿಮಗೆ ನಾಚಿಗೆಯಾಗಬೇಕು ಎಂದಿದ್ದಾರೆ.

ದೇಶದ ಹಲವೆಡೆ ಮತ್ತು ಕರ್ನಾಟಕದಲ್ಲಿಯೂ ದೀಪಾವಳಿ ಪ್ರಯುಕ್ತ ಆಯಾ ರಾಜ್ಯಗಳ ಸರ್ಕಾರಗಳು ಪಟಾಕಿ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದವು. ಅದರಂತೆ ಕರ್ನಾಟಕದಲ್ಲಿಯೂ ಪಟಾಕಿ ನಿಷೇಧಿಸಲಾಗಿತ್ತು. ಆ ನಿಷೇಧದ ಕುರಿತು ಐಪಿಎಸ್ ಅಧಿಕಾರಿ ಡಿ. ರೂಪಾ, ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಪಟಾಕಿ ಪ್ರಸ್ತಾಪವೇ ಇಲ್ಲ ಎಂದಿದ್ದರು. ಪ್ರಸ್ತಾಪವಿದೆ ಎಂದು ವಾದಿಸಿದವರ ಟ್ವಿಟರ್​ ಖಾತೆಗಳನ್ನೂ ಬ್ಲಾಕ್​ ಮಾಡಿಸಿದ್ದರು. ಸಾಕಷ್ಟು ಟ್ರೋಲ್​ ಸಹ ಆಗಿದ್ದರು.