ಕಂಗನಾ ರಣಾವತ್ ಬಾಲಿವುಡ್ಗೆ ಎಂಟ್ರಿ ಕೊಟ್ಟು 15 ವರ್ಷಗಳಾಗಿವೆ. ಕಂಗನಾ ಅಭಿನಯದ ಮೊದಲ ಚಿತ್ರ ‘ಗ್ಯಾಂಗ್ಸ್ಟರ್’ ಬಿಡುಗಡೆಯಾಗಿ, ಏಪ್ರಿಲ್ 28ಕ್ಕೆ 15 ವರ್ಷಗಳಾಗಿದ್ದು, ಸೋಷಿಯಲ್ ಮೀಡಿಯಾ ಮೂಲಕ ಈ ವಿಷಯವನ್ನು ಹೇಳಿಕೊಂಡು ಸಂಭ್ರಮಿಸಿದ್ದಾರೆ.
ಅಷ್ಟೇ ಅಲ್ಲ, ಬಾಲಿವುಡ್ ಕಂಡ ಯೋಶೋಗಾಥೆಗಳಲ್ಲಿ ತಮ್ಮ ಹಾಗೂ ಶಾರೂಖ್ ಖಾನ್ ಪಯಣ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾನು ಮತ್ತು ಶಾರೂಖ್ ಖಾನ್ ನಡೆದು ಬಂದ ಹಾದಿ ಅತ್ಯಂತ ಮಹತ್ವದ್ದಾಗಿದ್ದು. ಇಬ್ಬರೂ ಬಾಲಿವುಡ್ನಲ್ಲಿ ಯಶಸ್ವಿಯಾಗಿದ್ದು ಕಡಿಮೆ ವಿಷಯವಲ್ಲ. ಅದರಲ್ಲೂ ಶಾರೂಖ್, ದೆಹಲಿಯಿಂದ ಬಂದವರಾಗಿದ್ದರು ಮತ್ತು ಕಾನ್ವೆಂಟ್ನಲ್ಲಿ ಶಿಕ್ಷಣ ಪಡೆದಿದ್ದರು. ಆದರೆ, ನಾನು ಹಿಮಾಚಲ ಪ್ರದೇಶದ ಒಂದು ಪುಟ್ಟ ಹಳ್ಳಿಯಿಂದ ಬಂದವಳು. ಶಿಕ್ಷಣವೂ ಇರಲಿಲ್ಲ, ಒಂದೇ ಒಂದು ಪದ ಇಂಗ್ಲೀಷ್ ಗೊತ್ತಿರಲಿಲ್ಲ’ ಎಂದು ನೆನಪಿಸಿಕೊಂಡಿದ್ದಾರೆ ಕಂಗನಾ.
ಈ ಕುರಿತು ಮತ್ತಷ್ಟು ಹೇಳಿಕೊಂಡಿರುವ ಅವರು, ‘ಪ್ರತಿ ಹೆಜ್ಜೆ ಸಹ ಒಂದು ಹೋರಾಟವಾಗಿತ್ತು. ತಂದೆ ಮತ್ತು ತಾತನ ಜತೆಗೆ ಕಚ್ಚಾಡಿಕೊಂಡು ಬಂದು, ಇಂದು ಈ ಹಂತಕ್ಕೆ ತಲುಪಿರುವುದು ಕಡಿಮೆ ವಿಷಯವಲ್ಲ. ಪ್ರತಿ ದಿನವೂ ಹೋರಾಟ ತಪ್ಪಿದ್ದಲ್ಲ ಮತ್ತು ಆ ಹೋರಾಟದಿಂದಲೇ ಇಂದು ಇಲ್ಲಿದ್ದೇನೆ’ ಎಂದು ಕಂಗನಾ ಹೇಳಿಕೊಂಡಿದ್ದಾರೆ. (-ಏಜೆನ್ಸೀಸ್).