ಸಿನಿವಾಣಿ

ಬಾಲಿವುಡ್​​ ಸ್ಟಾರ್​ ಜೋಡಿಗೆ ಜೀವ ಬೆದರಿಕೆ: ಪೊಲೀಸ್​ ಠಾಣೆಯಲ್ಲಿ ದೂರು ದಾಖಲು

ಮುಂಬೈ: ಬಾಲಿವುಡ್​ನ ಸ್ಟಾರ್​ ಜೋಡಿಯಾಗಿರುವ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ಗೆ ಜೀವಬೆದರಿಕೆ ಹಾಕಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ವಿಕ್ಕಿ ಕೌಶಲ್​ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಸಲ್ಮಾನ್​ ಖಾನ್​ಗೂ  ಜೀವಬೆದರಿಕೆ ಹಾಕಲಾಗಿತ್ತು. ಸದ್ಯ ಇದು ತನಿಖಾ ಹಂತದಲ್ಲಿದ್ದು, ಈ ಬೆನ್ನಲ್ಲೇ ಕತ್ರಿನಾ ದಂಪತಿಗೂ ಜೀವಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರಿಗೂ ಜೀವಬೆದರಿಕೆ ಹಾಕಲಾಗಿದೆ ಎಂದು ವಿಕ್ಕಿ ದೂರಿನಲ್ಲಿ ತಿಳಿಸಿದ್ದಾರೆ.

ಮುಂಬೈನ ಸಂತಾಕ್ರೂಜ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಸದ್ಯ ತನಿಖೆ ಕೈಗೊಳ್ಳಲಾಗಿದೆ. ವಿಶೇಷವೆಂದರೆ ಆದಿತ್ಯ ರಾಜಪೂತ್​ ಎಂಬ ಹೆಸರಿನಿಂದ ಸಾಮಾಜಿಕ ಜಾಲತಾಣದ ಮೂಲಕ ಜೀವಬೆದರಿಕೆ ಹಾಕಿದ್ದಾನೆ. ಈತನಿಗೆ ವಿಕ್ಕಿ ಕೌಶಲ್​ ಹಲವು ಬಾರಿ ತಿಳಿ  ಹೇಳಿದರೂ ಕೇಳಲಿಲ್ಲ ಆದ್ದರಿಂದ ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಈ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಈತನ ಹೆಸರು ನಕಲಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು,ಸದ್ಯದಲ್ಲೇ ಈತನ ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)