ಮುಂಬೈ: ಭಾರತೀಯ ಸಿನಿಪ್ರಿಯರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ ಆಧಾರಿತ 'ರಾಮಾಯಣ: ಭಾಗ 1' ಸಿನಿಮಾ (Ramayana) ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದ್ದು, ನೋಡುಗರಿಂದ ಮಿಶ್ರ ಅಭಿಪ್ರಾಯಗಳನ್ನು ಸ್ವೀಕರಿಸಿದೆ. ಮತ್ತೊಂದೆಡೆ, ಸಿನಿಮಾ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಕೊಟ್ಟಿರುವ ಹೇಳಿಕೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ನವೆಂಬರ್ 5ರಂದು ಸಿನಿಪ್ರಿಯರ ಮುಂದೆ ಭರ್ಜರಿಯಾಗಿ ಎಂಟ್ರಿಕೊಟ್ಟಿರುವ ಈ ಸಿನಿಮಾ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯನ್ನೇ ಆರಂಭಿಸಿದೆ. ಸಿನಿಮಾ ನೋಡಿದ ಅನೇಕ ನಟ-ನಟಿಯರು ಪಾತ್ರಗಳ ಕುರಿತಂತೆ ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಭಿಪ್ರಾಯ ಹಂಚಿಕೊಂಡು, ಚಿತ್ರಕ್ಕೆ ಬೆಂಬಲ ನೀಡುತ್ತಿದ್ದಾರೆ. ಹೀಗಿರುವಾಗಲೇ, 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಚಿತ್ರದ ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ರಾಮಾಯಣ ಬಗ್ಗೆ ಸಲ್ಮಾನ್ ಅಚ್ಚರಿ ಹೇಳಿಕೆಯನ್ನೇ ನೀಡಿದ್ದಾರೆ.
ವೇದಿಕೆಯಲ್ಲಿ 'ರಾಮಾಯಣ' ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್, ಜನರು ಕೇವಲ ಆ ಮಹಾಕಾವ್ಯದ ಮೂಲ ಕಥೆಯ ಬಗ್ಗೆ ಮಾತನಾಡಬೇಕೇ ವಿನಃ ಚಿತ್ರದ ಒಟ್ಟು ಬಜೆಟ್ ಮತ್ತು ವಿಎಫ್‌ಎಕ್ಸ್ ಕುರಿತು ಚರ್ಚಿಸುವುದು ಸರಿಯಲ್ಲ. 4,000 ಕೋಟಿ ರೂಪಾಯಿ ಬಜೆಟ್ ಮತ್ತು ವಿಎಫ್‌ಎಕ್ಸ್ ಬಗ್ಗೆ ನಡೆಯುತ್ತಿರುವ ಮಾತುಗಳು ಬೇಕಿಲ್ಲ. ಜನರು ರಾಮ, ರಾವಣ, ಸೀತೆ, ಲಕ್ಷಣ ಮುಂತಾದ ಪಾತ್ರಗಳು ಮತ್ತು ಆ ಕಥಾಹಂದರದ ಬಗ್ಗೆ ಮಾತ್ರ ಚರ್ಚಿಸಬೇಕು ಎಂದರು.
ರಾಮಾಯಣ ಬಗ್ಗೆ ಮಾತನಾಡುತ್ತಲೇ ತಮ್ಮ ಮಾತೃಭೂಮಿ ಸಿನಿಮಾದ ಹೀರೋ ಪಾತ್ರವನ್ನು ಗುಣಗಾನ ಮಾಡಿದ ಸಲ್ಲು, ನಮ್ಮ ಚಿತ್ರದಲ್ಲಿ ರಾಮನ ಎಲ್ಲ ಗುಣಗಳೂ ಇವೆ ಎಂದು ಹೇಳಿದರು. ತಮ್ಮ ಸಿನಿಮಾ ಈ ವರ್ಷದ ಏಪ್ರಿಲ್ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಅಂದುಕೊಂಡಂತೆ ಬಿಡುಗಡೆಗೊಳಿಸಲು ಸಾಧ್ಯವಾಗಲಿಲ್ಲ. ಇದೇ ಡಿಸೆಂಬರ್ 4ರಂದು ನಮ್ಮ ಚಿತ್ರ ನಿಮ್ಮ ಮುಂದೆ ಹಾಜರಾಗಲಿದೆ ಎಂದು ಹೇಳಿದರು.
'ರಾಮಾಯಣ' ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ತಕ್ಕ ಮಟ್ಟಿಗಿನ ಗಳಿಕೆಯನ್ನು ಕಂಡಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು, ಭಾರತದಲ್ಲಿ ಮೊದಲ ದಿನ 65 ಕೋಟಿ ರೂ. ಕಲೆಕ್ಷನ್ ಕಂಡಿದೆ. ಇನ್ನು, ಜಾಗತಿಕ ಮಟ್ಟದಲ್ಲಿ ಸಿನಿಮಾ ಮೊದಲ ದಿನ ಒಟ್ಟು 127.50 ಕೋಟಿ ರೂ. ಹಣವನ್ನು ದಾಖಲಿಸಿದೆ. ಇದು ಚಿತ್ರತಂಡಕ್ಕೆ ಕೊಂಚ ಹಿನ್ನೆಡೆ ಅನಿಸಿದರೂ ವಾರಾಂತ್ಯ ಮತ್ತು ದೀಪಾವಳಿ ಹಬ್ಬದ ಸಾಲು ರಜೆಗಳು ಚಿತ್ರದ ನಿರೀಕ್ಷಿತ ಗಳಿಕೆಗೆ ಬೂಸ್ಟ್ ನೀಡುವ ಎಲ್ಲ ಸಾಧ್ಯತೆಗಳಿವೆ,(ಏಜೆನ್ಸೀಸ್).