ಹೈದರಾಬಾದ್: ಕಾಂಟ್ರೋವರ್ಷಿಯಲ್ ಡೈರೆಕ್ಟರ್ ಎಂದೇ ಹೆಸರಾದವರು ರಾಮ್ಗೋಪಾಲ್ ವರ್ಮಾ. ಕನ್ನಡದಲ್ಲೂ ಶಿವರಾಜಕುಮಾರ್ ಅಭಿನಯದ 'ಕಿಲ್ಲಿಂಗ್ ವೀರಪ್ಪನ್' ಎಂಬ ಚಿತ್ರವನ್ನು ನಿರ್ದೇಶಿಸಿರುವ ರಾಮ್ಗೋಪಾಲ್ ವರ್ಮಾ, ಒಂದಲ್ಲಾ ಒಂದು ಕಾರಣಕ್ಕೆ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರ ಕುರಿತು ಸದ್ದಿಲ್ಲದೆ ಒಂದು ಬಯೋಪಿಕ್ ಶುರುವಾಗಿದೆ.
ವಿಶೇಷವೆಂದರೆ, ವರ್ಮಾ ಅವರ ಬಯೋಪಿಕ್ಗೆ ಇಂದು ಚಾಲನೆ ಸಿಕ್ಕಿದ್ದು, ಈ ಚಿತ್ರಕ್ಕೆ ವರ್ಮಾ ಅವರ ತಾಯಿ ಸೂರ್ಯವತಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರೆ, ಸಹೋದರಿ ವಿಜಯಾ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ.
ರಾಮ್ಗೋಪಾಲ್ ವರ್ಮಾ ಅವರು ಚಿತ್ರರಂಗದಲ್ಲಿ ರಾಮು ಎಂದೇ ಜನಪ್ರಿಯರಾಗಿರುವುದರಿಂದ ಚಿತ್ರಕ್ಕೆ 'ರಾಮು' ಎಂಬ ಹೆಸರನ್ನೇ ಇಡಲಾಗಿದೆ. ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ದೊರಸಾಯಿ ತೇಜ ನಿರ್ದೇಶನ ಮಾಡಿದರೆ, ಬೊಮ್ಮಕು ಮುರಳಿ ಎನ್ನುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ವಿಶೇಷವೆಂದರೆ, ವರ್ಮಾ ಅವರ ಯೌವ್ವನದ ಪಾತ್ರವನ್ನು ದೊರಸಾಯಿ ತೇಜ ಅವರೇ ನಿರ್ವಹಿಸುತ್ತಿದ್ದಾರೆ. 20 ವಯಸ್ಸಿನ ತೇಜ, ಚಿತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ವರ್ಮಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಇದನ್ನೂ ಓದಿ: ಸಿಸಿಬಿ ಕಚೇರಿಗೆ ವಕೀಲರ ಜೊತೆ ಬಂದ ಐಂದ್ರಿತಾ-ದಿಗಂತ್
ಇದಕ್ಕೂ ಮುನ್ನ, ವರ್ಮಾ ಅವರ ಕುರಿತಾಗಿ 'ಪರಂಜೀವಿ' ಎಂಬ ಚಿತ್ರ ಬಂದಿತ್ತು. ಟಾಲಿವುಡ್ನ ಖ್ಯಾತ ನಟ ಪವನ್ ಕಲ್ಯಾಣ್ ಕುರಿತು 'ಪವರ್ ಸ್ಟಾರ್' ಎಂಬ ಚಿತ್ರವನ್ನು ವರ್ಮಾ ಮಾಡಿದ್ದರಿಂದ, ಪವನ್ ಅವರ ಅಭಿಮಾನಿಗಳು ಸಿಟ್ಟಿಗೆದ್ದು, 'ಪರಂಜೀವಿ' ಎಂಬ ಚಿತ್ರ ಮಾಡಿದ್ದರು.
ಇದೀಗ ರಾಮ್ಗೋಪಾಲ್ ವರ್ಮಾ ಕುರಿತು 'ರಾಮು' ಎಂಬ ಹೆಸರಿನ ಬಯೋಪಿಕ್ ಅಧಿಕೃತವಾಗಿ ಇಂದು ಶುರುವಾಗಿದೆ. ಈ ಹಿಂದೆ ದಾದಾ ಸಾಹೇಬ್ ಫಾಲ್ಕೆ ಕುರಿತಾಗಿ ಒಂದು ಬಯೋಪಿಕ್ ನಿರ್ಮಾಣವಾಗಿತ್ತು. ಅದನ್ನು ಹೊರತುಪಡಿಸಿದರೆ, ಚಿತ್ರನಿರ್ದೇಶಕರೊಬ್ಬರ ಕುರಿತು ಬಯೋಪಿಕ್ ಆಗುತ್ತಿರುವುದು ಇದು ಎರಡನೆಯ ಬಾರಿ ಇರಬಹುದೇನೋ?