ಸಿನಿವಾಣಿ

ಬಿಗ್‌ಬಾಸ್ ಸೀಸನ್ 7ರ ವಿನ್ನರ್ ಆಗಿ 'ಶೈನ್' ಆದ ಶೆಟ್ಟಿ: 61 ಲಕ್ಷ ರೂ. ನಗದು, ಟಾಟಾ ಅಲ್‌ಟ್ರೋಜ್​ ಕಾರು ಬಹುಮಾನ

ಬೆಂಗಳೂರು: ನೂರ ಹದಿಮೂರು ದಿನಗಳ ಕಾಲ ಪ್ರೇಕ್ಷಕರ ಕುತೂಹಲ ಉಳಿಸಿಕೊಂಡೇ ಬಂದಿದ್ದ "ಬಿಗ್​ಬಾಸ್​ ಕನ್ನಡ ಸೀಸನ್​ 7'ರ ಗ್ರ್ಯಾಂಡ್​ ಫಿನಾಲೆಯಲ್ಲಿ ವಿಜೇತರಾಗಿ ನಟ ಶೈನ್ ಶೆಟ್ಟಿ ಹೊರಹೊಮ್ಮಿದ್ದಾರೆ.

ಅವರಿಗೆ ಪ್ರಬಲ ಸ್ಪಧಿಯಾಗಿದ್ದವರ ಪೈಕಿ ಕುರಿ ಪ್ರತಾಪ್ ಮೊದಲನೇ ಹಾಗೂ ವಾಸುಕೀ ವೈಭವ್ ಎರಡನೇ ರನ್ನರ್​ ಅಪ್​ ಆಗಿದ್ದಾರೆ.

ಗ್ರ್ಯಾಂಡ್ ಫಿನಾಲೆಯ ವಿಜೇತರಾಗುವ ಮೂಲಕ ಶೈನ್ ಶೆಟ್ಟಿ ಬಹುಮಾನದ 50 ಲಕ್ಷ ರೂ. ಸೇರಿ ಒಟ್ಟು 61 ಲಕ್ಷ ರೂ. ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ, ಅವರಿಗೆ ಹೊಚ್ಚ ಹೊಸ ಮಾಡೆಲ್‌ನ ಟಾಟಾ ಅಲ್‌ಟ್ರೋಜ್​ ಕಾರು ಕೂಡ ಕೊಡುಗೆಯಾಗಿ ಸಿಕ್ಕಿದೆ.

ಬಹಳ ಕುತೂಹಲ ಕೆರಳಿಸಿದ್ದ ಈ ಗ್ರ್ಯಾಂಡ್ ಫಿನಾಲೆ ಪ್ರವೇಶಕ್ಕೆ ಶನಿವಾರ ನಡೆದ ಹಣಾಹಣಿಯಲ್ಲಿ ಶೈನ್​ ಶೆಟ್ಟಿ, ವಾಸುಕೀ ವೈಭವ್​, ಕುರಿ ಪ್ರತಾಪ್​, ದೀಪಿಕಾ ದಾಸ್​, ಭೂಮಿ ಶೆಟ್ಟಿ ಅವರಿದ್ದರು.

ದೀಪಿಕಾ ದಾಸ್​ ಮತ್ತು ಭೂಮಿ ಶೆಟ್ಟಿ ಎಲಿಮಿನೇಟ್​ ಆಗಿದ್ದರು. ಹೀಗಾಗಿ ಭಾನುವಾರ ಗ್ರ್ಯಾಂಡ್ ಫಿನಾಲೆಯಲ್ಲಿ ಶೈನ್ ಶೆಟ್ಟಿ, ವಾಸುಕೀ ವೈಭವ್, ಕುರಿ ಪ್ರತಾಪ್ ಸ್ಪರ್ಧಿಗಳಾಗಿದ್ದರು.

ಗ್ರ್ಯಾಂಡ್ ಫಿನಾಲೆಯ ಬಹಳ ಕೌತುಕದ ಹಂತದಲ್ಲೇ ಮೊದಲಿಗೆ ಗಾಯಕ, ಸಂಗೀತ ನಿರ್ದೇಶಕ ವಾಸುಕೀ ವೈಭವ್ ಔಟ್ ಆಗಿದ್ದರಿಂದ, ಎರಡನೇ ರನ್ನರ್ ಅಪ್ ಎನಿಸಿಕೊಂಡರು. ಬಳಿಕ ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್ ಪೈಕಿ ಶೈನ್ ಮೇಲುಗೈ ಸಾಧಿಸಿದ್ದರಿಂದ ಅವರು 'ಬಿಗ್‌ಬಾಸ್ ಕನ್ನಡ ಸೀಸನ್ 7'ರ ವಿಜೇತರಾಗಿ, ಗೆಲುವಿನ ನಗೆ ಬೀರಿದ್ದಾರೆ.

ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ 'ಕಲರ್ಸ್ ಕನ್ನಡ ವಾಹಿನಿ'ಯಲ್ಲಿ 113 ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು 18 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಕುಂದಾಪುರದ ಹುಡುಗ ಶೈನ್ ಶೆಟ್ಟಿ:  ಬಿಗ್‌ಬಾಸ್ ಕನ್ನಡ ಸೀಸನ್ 7ರ ವಿಜೇತ ಶೈನ್ ಶೆಟ್ಟಿ ಮೂಲತಃ ಕುಂದಾಪುರದವರು. ಬಳಿಕ ಬೆಂಗಳೂರಿಗೆ ಬಂದ ಇವರು 'ಲಕ್ಷ್ಮೀ ಬಾರಮ್ಮ ಮೀರಾ ಮಾಧವ' ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಮಹದಾಸೆ ಹೊಂದಿರುವ ಇವರಿಗೆ ಅದೃಷ್ಟ ಸಹಕರಿಸದ್ದರಿಂದ ಅನಿವಾರ್ಯವಾಗಿ ಹೊಟೇಲ್ ಉದ್ಯಮದತ್ತ ಹೊರಳಬೇಕಾಯಿತು‌.

'ಗಲ್ಲಿ ಕಿಚನ್' ಎಂಬ ಫುಡ್ ಟ್ರಕ್ ಆರಂಭಿಸಿ ಜೀವನ ಸಾಗಿಸುತ್ತಿರುವಾಗ ಇವರಿಗೆ 'ಬಿಗ್‌ಬಾಸ್' ಸ್ಪರ್ಧಿ ಆಗುವ ಅವಕಾಶ ಒದಗಿ ಬಂತು. ಆಗಿದ್ದಾಗಲಿ ಎಂದು ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ ಶೈನ್ ಈಗ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.