ಸಿನಿವಾಣಿ

ಇವರೇನಾ ಆ 16 ಜನ? ಬಿಬಿಕೆ ಸೀಸನ್​ 11ರ ಸ್ಪರ್ಧಿಗಳ ಬಗ್ಗೆ ಹೆಚ್ಚಿದ ಕುತೂಹಲ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಬಿಗ್​ಬಾಸ್​ ಕನ್ನಡ ಸೀಸನ್​ 11'ಕ್ಕೆ ಕ್ಷಣಗಣನೆ ಆರಂಭವಾಗಿದೆ. "ಬಿಬಿಕೆ 11' ಘೋಷಣೆ ಆದಾಗಿನಿಂದ ಬಿಗ್​ಬಾಸ್​ ಮನೆ ಸೇರಲಿರುವ 16 ಸ್ಪರ್ಧಿಗಳು ಯಾರು ಎಂಬ ಚರ್ಚೆಯೂ ಜೋರಾಗಿ ನಡೆಯುತ್ತಿದೆ. ಅವರಲ್ಲಿ ಐವರು ಸ್ಪರ್ಧಿಗಳ ಹೆಸರು ಇಂದು ರಾತ್ರಿ "ರಾಜಾರಾಣಿ ಗ್ರಾ$ಂಡ್​ ಫಿನಾಲೆ'ಯಲ್ಲಿ ಹೊರಬೀಳಲಿದ್ದು, ಉಳಿದ 11 ಸ್ಪರ್ಧಿಗಳ ಬಗ್ಗೆ ನಾಳೆ ಬಿಗ್​ಬಾಸ್​ ಓಪನಿಂಗ್​ ಸಂಚಿಕೆಯಲ್ಲಿ ಗೊತ್ತಾಗಲಿದೆ. ಅದರ ನಡುವೆಯೇ ಜಾಲತಾಣದಲ್ಲಿ ಬಿಗ್​ಬಾಸ್​ ಮನೆ ಸೇರಲಿರುವ ಸೆಲೆಬ್ರಿಟಿಗಳ ಬಗ್ಗೆ ರಿಯಾಲಿಟಿ ಶೋ ಅಭಿಮಾನಿಗಳೇ ಲೆಕ್ಕಾಚಾರ ಹಾಕುತ್ತಿದ್ದು, ಹಲವರ ಹೆಸರು ಕೇಳಿಬರುತ್ತಿದೆ.

ಬಿಗ್​ಬಾಸ್​ ಸ್ಪರ್ಧಿಗಳು ಇವರೇನಾ?
ನಟ ಕಿರಣ್​ ರಾಜ್​, ನಟಿ ಹರಿಪ್ರಿಯಾ, ಸೋಷಿಯಲ್​ ಮೀಡಿಯಾ ತಾರೆ ಭೂಮಿಕಾ ಬಸವರಾಜ್​, ಐಶ್ವರ್ಯಾ ಸಿಂಧೋಗಿ, ಪ್ರೇಮಾ, ಗೌತಮಿ ಜಾಧವ್​, ಮೋತಾ ಪೈ, ಪಂಕಜ್​ ನಾರಾಯಣ್​, ತಾನ್ವಿ ರಾವ್​, ತ್ರಿವಿಕ್ರಮ್​, ನಿರೂಪಕ ಹರೀಶ್​ ನಾಗರಾಜ್​, ಖುಷಿ ಗೌಡ, ಭಾವನಾ ಮೆನನ್​, ಧರ್ಮ ಕೀರ್ತಿರಾಜ್​, ರಂಜಿತ್​ ಕುಮಾರ್​, ರಾವೇಂದ್ರ, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ, ಹುಲಿ ಕಾರ್ತಿಕ್​, ಚೇತನ್​ ಚಂದ್ರ, ಜಗಪ್ಪ, ಐಶ್ವರ್ಯಾ ರಂಗರಾಜನ್​, … ಹೀಗೆ ಬಿಗ್​ಬಾಸ್​ ಕನ್ನಡ ಸೀಸನ್​ 11ರ ಮನೆ ಸೇರಲಿದ್ದಾರೆ ಎಂದು ಹಲವರ ಹೆಸರು ಜಾಲತಾಣದಲ್ಲಿ ಓಡಾಡುತ್ತಿದೆ.

ನನಗೆ ನಾನೇ ಬಾಸು!
ಆದರೆ, ಕೆಲ ತಾರೆಯರು ಬಿಗ್​ಬಾಸ್​ ಮನೆಗೆ ಹೋಗುತ್ತಿಲ್ಲ, ಅದೆಲ್ಲ ರೂಮರ್​ ಅಷ್ಟೇ ಎಂದು ಗಾಳಿಸುದ್ದಿಗೆ ಬ್ರೇಕ್​ ಹಾಡಿದ್ದಾರೆ. ಸದ್ಯ "ರಾನಿ' ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ "ಕನ್ನಡತಿ' ಧಾರಾವಾಹಿ ಖ್ಯಾತಿಯ ನಟ ಕಿರಣ್​ ರಾಜ್​ ಹೆಸರು ಈ ಬಾರಿಯ ಬಿಬಿಕೆಯಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಖುದ್ದು ಕಿರಣ್​ ಪ್ರತಿಕ್ರಿಯೆ ನೀಡಿದ್ದು, ""ರಾನಿ' ಚಿತ್ರಕ್ಕೆ ಪ್ರೀತಿ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಆದರೆ, ಬಿಗ್​ಬಾಸ್​ ಎಂಟ್ರಿ ಒಂದು ರೂಮರ್​ ಅಷ್ಟೇ. ಅದು ನಿಜವಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ ನಟಿ ಹರಿಪ್ರಿಯಾ ಕೂಡ ಬಿಗ್​ಬಾಸ್​ ಮನೆ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಅದಕ್ಕವರು, "ಇಲ್ಲಪ್ಪಾ ಇಲ್ಲ..!! ನನಗೆ ನಾನೆ ಬಾಸು. ನಾನು ನಮ್ಮ ಮನೆ ಬಿಟ್ಟು ಯಾವ ಮನೆಗೂ ಹೋಗುತ್ತಿಲ್ಲ' ಎಂದು ಹೇಳಿಕೊಂಡಿದ್ದಾರೆ.

ಒಂದು ಅವಕಾಶ ಕೊಡಿ…
ನಟ, ನಿರ್ದೇಶಕ ಹುಚ್ಚ ವೆಂಕಟ್​ ಬಿಗ್​ಬಾಸ್​ ಸೀಸನ್​ 3ರಲ್ಲಿ ಸ್ಪರ್ಧಿಸಿದ್ದರು. ಆದರೆ, ಅಲ್ಲಿ ಗಲಾಟೆ ಮಾಡಿಕೊಂಡು ಅವರು ಮನೆ ಸೇರಿದ 21 ದಿನಗಳಲ್ಲೇ ಗಲಾಟೆ ಮಾಡಿಕೊಂಡು ಹೊರಹಾಕಲ್ಪಟ್ಟರು. ಇದೀಗ ವೆಂಕಟ್​, "ನನಗೆ ಒಂದು ಅವಕಾಶ ಕೊಡಿ. ಯಾವುದೇ ರೀತಿಯ ಗಲಾಟೆ ಮಾಡುವುದಿಲ್ಲ, ಎಲ್ಲ ಟಾಸ್ಕ್​ಗಳನ್ನೂ ಮಾಡುತ್ತೇನೆ. ಒಂದು ದಿನದ ಮಟ್ಟಿಗೆ, ಒಂದು ವಾರಕ್ಕೆ ಅಥವಾ ಪೂರ್ತಿ ಸೀಸನ್​ಗಾದರೂ ಸರಿ ಬರುತ್ತೇನೆ' ಎಂದು ಕೇಳಿಕೊಂಡಿದ್ದಾರೆ.