ಸಿನಿವಾಣಿ

ಬಿಗ್​ಬಾಸ್​ನಿಂದ ಕಿರಣ್ ಹೊರಗೆ..

Webdesk - Ravikanth

ಬೆಂಗಳೂರು: ಬಿಗ್​ಬಾಸ್ ಕನ್ನಡ ಓಟಿಟಿ ಸೀಸನ್ 1 ಕಳೆದ ಆಗಸ್ಟ್ 7ರಂದು ಪ್ರಾರಂಭವಾಗಿತ್ತು. ಇದು ದಿನದ 24 ತಾಸು ಸತತ 42 ದಿನಗಳ ಕಾಲ ನೇರಪ್ರಸಾರದಲ್ಲಿ ನಡೆಯುತ್ತಿರುವ ಮೊದಲ ಓಟಿಟಿ ಸೀಸನ್. ಈಗ ಮೊದಲ ವಾರ ಪೂರ್ಣಗೊಂಡಿದ್ದು ಬಿಗ್​ಬಾಸ್ ಮನೆಯಿಂದ ಕಿರಣ್ ಯೋಗೇಶ್ವರ್ ಹೊರಬಂದಿದ್ದಾರೆ. ಕಡಿಮೆ ಸಮಯದಲ್ಲಿ ಹೊರಬಂದ ಬೇಸರದಲ್ಲೇ ವಿಜಯವಾಣಿ ಜತೆ ಅವರು ಮಾತಿಗಿಳಿದರು.

‘ನಾನು ಆಗಾಗ ಸೋಲೋಟ್ರಿಪ್ ಹೋಗುತ್ತಿರುತ್ತೇನೆ. ಹೀಗಾಗಿ ಬಿಗ್​ಬಾಸ್ ಮನೆಗೆ ಹೋದಾಗ ಹೆಚ್ಚೇನೂ ಕಷ್ಟವಾಗಲಿಲ್ಲ. ಇಷ್ಟು ದೊಡ್ಡ ವೇದಿಕೆ ಸಿಕ್ಕಿದೆ, ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಬೇಕು, ಕಿರಣ್ ಅಂದರೆ ಯಾರು ಎಂಬುದನ್ನು ಜನರಿಗೆ ತಿಳಿಸಬೇಕು ಎಂಬ ಆಸೆ ಇತ್ತು. ಒಂದೇ ವಾರದಲ್ಲಿ ಹೊರಬಂದಿದ್ದು ಬೇಸರ ಉಂಟು ಮಾಡಿದೆ. ಆದರೆ, ಬಿಗ್​ಬಾಸ್ ಮನೆಯಲ್ಲಿ ಒಂದೊಳ್ಳೆ ಅನುಭವವಂತೂ ದೊರೆಯಿತು’ ಎಂದು ಮಾತು ಪ್ರಾರಂಭಿಸುತ್ತಾರೆ ಕಿರಣ್ ಯೋಗೇಶ್ವರ್. ಹಾಗಾದರೆ ನೀವು ಎಡವಿದ್ದೆಲ್ಲಿ? ಎಂದು ಕೇಳಿದರೆ, ‘ನಾನು ಬೇರೆಯವರಂತೆ ಕ್ಯಾಮರಾಗಾಗಿ ಕೆಲಸ ಮಾಡುತ್ತಿರಲಿಲ್ಲ, ಸುಖಾಸುಮ್ಮನೆ ಜಗಳ ಆಡುತ್ತಿರಲಿಲ್ಲ. ಅಡುಗೆ ಮನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದೆ. ಹೊರಗೆ ಯಾರು ಗೇಮ್್ಲಾ್ಯನ್ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿರಲಿಲ್ಲ. ಅದೇ ಸಮಸ್ಯೆ ಆಗಿರಬಹುದು’ ಎನ್ನುವ ಕಿರಣ್​ಗೆ ಮತ್ತೊಮ್ಮೆ ಬಿಗ್​ಬಾಸ್​ಗೆ ಹೋಗುವ ಅವಕಾಶ ಸಿಕ್ಕರೆ ಹೋಗಲು ಸಿದ್ಧ ಎನ್ನುತ್ತಾರೆ. ‘ಬಿಗ್​ಬಾಸ್ ಮನೆ ಒಂಥರಾ ಅಡಿಕ್ಷನ್ ಆಗಿಬಿಟ್ಟಿದೆ. ಯಾವಾಗ ಕರೆದರೂ ವಾಪಸ್ ಹೋಗುತ್ತೇನೆ’ ಎಂದು ನಗುತ್ತಾರೆ ಕಿರಣ್. ಇನ್ನು ತಮ್ಮ ನೆಚ್ಚಿನ ಪ್ರತಿಸ್ಪರ್ಧಿಗಳ ಕುರಿತು ಹೇಳಿಕೊಳ್ಳುವ ಅವರು, ‘ನನಗೆ ರಾಕೇಶ್, ಅರ್ಜುನ್ ತುಂಬ ಬುದ್ಧಿವಂತರು ಅಂತನ್ನಿಸುತ್ತದೆ. ಅವರಲ್ಲಿ ಅರ್ಜುನ್ ಗೆಲ್ಲಬಹುದು ಅಂತಂದುಕೊಂಡಿದ್ದೇನೆ. ನಂದು, ಜಸ್ವಂತ್ ಮತ್ತು ರಾಕೇಶ್ ಮೂವರೂ ಬಿಗ್​ಬಾಸ್ ಮನೆಯಲ್ಲಿ ದೊರೆತ ಗುಡ್ ಫ್ರೆಂಡ್ಸ್’ ಎಂದು ಹೇಳಿಕೊಳ್ಳುತ್ತಾರೆ ಕಿರಣ್ ಯೋಗೇಶ್ವರ್.

ಸುದೀಪ್, ಯಶ್ ಜತೆ ನಟಿಸುವಾಸೆ !: ‘ಐಟಿ ಕೆಲಸ, ಉದ್ಯಮ, ಮಾಡೆಲಿಂಗ್ ಅಂತ ಹಲವು ಕೆಲಸ ಮಾಡುತ್ತಿದ್ದೆ. ಆದರೆ ಬಿಗ್​ಬಾಸ್​ಗಾಗಿ ಎಲ್ಲವನ್ನೂ ಪಕ್ಕಕ್ಕಿಟ್ಟು ಬಂದಿದ್ದೆ. ಸಿಕ್ಕ ಅವಕಾಶವನ್ನೇ ಸದ್ಬಳಕೆ ಮಾಡಿಕೊಳ್ಳುತ್ತೇನೆ. ಕನ್ನಡ ಚಿತ್ರಗಳಲ್ಲಿ ನಟಿಸುವಾಸೆ ಇದೆ. ಕಿಚ್ಚ ಸುದೀಪ್, ಯಶ್ ಜತೆ ನಟಿಸಲು ಅವಕಾಶ ಸಿಕ್ಕರೆ ನನ್ನ ಕನಸು ನನಸಾದಂತೆ’