ಸಿನಿವಾಣಿ

ಬಿಗ್​ಬಾಸ್ ಕನ್ನಡ​ ಸೀಸನ್​ 11: ಗ್ರ್ಯಾಂಡ್​ ಓಪನಿಂಗ್​ಗೂ ಮುನ್ನವೇ ಸ್ಪರ್ಧಿಗಳ ಹೆಸರು ಘೋಷಣೆ

ಬೆಂಗಳೂರು: ಬಿಗ್​ಬಾಸ್​ ಸೀಸನ್​ 11ಕ್ಕೆ (Bigg Boss Kannada 11) ದಿನಗಣನೆ ಆರಂಭವಾಗಿದೆ. ಸೆ. 29ರಿಂದ ಬಿಗ್​ಬಾಸ್​ ಸೀಸನ್​ 11 ಆರಂಭವಾಗಲಿದ್ದು, ಈ ಬಾರಿಯೂ ನಟ ಕಿಚ್ಚ ಸುದೀಪ್​ (Kichcha Sudeepa) ಅವರೇ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಯಶಸ್ವಿ 10 ಆವೃತ್ತಿಯನ್ನು ಮುಗಿಸಿರುವ ಬಿಗ್​ಬಾಸ್ ಶೋ 11ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಈ ಬಾರಿ ಸಮ್​ಥಿಂಗ್​ ಸ್ಪೆಷಲ್​ ಸಹ ಇರಲಿದ್ದು, ಇದು ಹೊಸ ಅಧ್ಯಾಯ ಎಂದು ಹೇಳಿರುವುದರಿಂದ ಈ ಶೋ ಮೇಲೆ ಹೆಚ್ಚು ನಿರೀಕ್ಷೆ ಇದೆ.

ನಿನ್ನೆಯಷ್ಟೇ ಕಲರ್ಸ್​ ಕನ್ನಡ ವಾಹಿನಿ ವತಿಯಿಂದ ಬಿಗ್​ಬಾಸ್​ ಸೀಸನ್​ 11ರ ಕುರಿತು ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಕಲರ್ಸ್​ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್​ ಪ್ರಶಾಂತ್ ನಾಯಕ್, ಶೋ ಆರಂಭಕ್ಕೂ ಮುನ್ನವೇ ಈ ಬಾರಿ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದರು. ಸಾಮಾನ್ಯವಾಗಿ ಸ್ಪರ್ಧಿಗಳ ಸುಳಿವನ್ನು ಮೊದಲೇ ಬಿಟ್ಟುಕೊಡುವುದಿಲ್ಲ. ಏಕೆಂದರೆ, ಇದನ್ನು ಜನರ ಕುತೂಹಲಕ್ಕೆ ಬಿಡಲಾಗುತ್ತದೆ. ಇದೇ ಕುತೂಹಲ ಕಾರಣದಿಂದಾಗಿ ಬಿಗ್​ಬಾಸ್​ ಆರಂಭದ ಎಪಿಸೋಡ್​ಗಾಗಿ ಜನರು ಕಾಯುತ್ತಾರೆ. ಅಂದು ಯಾರೆಲ್ಲ ಮನೆಯ ಒಳಗೆ ಹೋಗುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಟಿವಿ ಮುಂದೆ ಕುಳಿತಿರುತ್ತಾರೆ. ಆ ಎಪಿಸೋಡ್​ಗೆ ಒಳ್ಳೆಯ ಟಿಆರ್​ಪಿ ಕೂಡ ಬರುತ್ತದೆ. ಆದರೆ, ಈ ಬಾರಿ ಮೊದಲೇ ಸ್ಪರ್ಧಿಗಳನ್ನು ಘೋಷಣೆ ಮಾಡುವುದಾಗಿ ಕಲರ್ಸ್​ ಕನ್ನಡ ವಾಹಿನಿ ಹೇಳಿದೆ.

ಶನಿವಾರ (ಸೆ.28) ನಡೆಯಲಿರುವ ರಾಜಾ ರಾಣಿ ಗ್ರ್ಯಾಂಡ್​ ಫಿನಾಲೆಯಲ್ಲಿ ಬಿಗ್​ಬಾಸ್​ ಸೀಸನ್​ 11ರ ಕೆಲ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸುವುದಾಗಿ ಪ್ರಶಾಂತ್ ನಾಯಕ್ ಹೇಳಿದರು. ಅಲ್ಲದೆ, ಈ ಬಾರಿಯ ಶೋನಲ್ಲಿ ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆ ಇರಲಿದೆ. ಇದೇ ಈ ಬಾರಿಯ ಹೊಸತನ. ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕೋ ಅಥವಾ ನರಕಕ್ಕೆ ಹೋಗಬೇಕೋ ಎಂಬುದನ್ನು ನಿರ್ಧರಿಸಲು ವೀಕ್ಷಕರು ಮತ ಚಲಾಯಿಸಬಹುದು ಎಂದು ಪ್ರಶಾಂತ್​ ನಾಯಕ್​ ತಿಳಿಸಿದರು.

ಇತ್ತೀಚೆಗಷ್ಟೇ ಬಿಡುಗಡೆಯಾದ ಪ್ರೋಮೋ ಕೂಡ ಸ್ವರ್ಗ ಮತ್ತು ನರಕದ ಥೀಮ್​ನಲ್ಲಿ ಶೂಟ್​ ಮಾಡಲಾಗಿದೆ. ಈ ಬಾರಿ ಬಿಗ್​ಬಾಸ್​ನಲ್ಲಿ ಎರಡು ಮನೆ ಇರಲಿದೆ. ಒಂದು ಮನೆಯನ್ನು ನರಕದಂತೆ ಮತ್ತು ಇನ್ನೊಂದು ಮನೆಯನ್ನು ಸ್ವರ್ಗದಂತೆ ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ. ಸ್ವರ್ಗದ ಮನೆಯಲ್ಲಿ ಇರುವವರು ಬಿಗ್​ಬಾಸ್ ಮನೆಯ ಎಲ್ಲಾ ಸೌಕರ್ಯಗಳನ್ನು ಬಳಸಲಿದ್ದಾರೆ ಮತ್ತು ಅನುಭವಿಸಲಿದ್ದಾರೆ. ನರಕದ ಮನೆಯಲ್ಲಿರುವವರಿಗೆ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತದೆ ಎನ್ನಲಾಗಿದೆ. ಈ ಎರಡು ಮನೆಯಲ್ಲಿ ಇರುವವರು ಯಾವಾಗಬೇಕಾದರೂ ಅದಲು-ಬದಲಾಗಬಹುದು. ಅದು ಬಿಗ್​ಬಾಸ್​ ನೀಡುವ ಟಾಸ್ಕ್​ ಆಧಾರದ ಮೇಲಿರುತ್ತದೆ ಎನ್ನಲಾಗಿದೆ.

ಸ್ವರ್ಗ ಮತ್ತು ನರಕದ ಪರಿಕಲ್ಪನೆಯಲ್ಲಿ ಎರಡು ಮನೆ ಇದ್ದರೆ ಈ ಬಾರಿಯ ಶೋ ಇನ್ನಷ್ಟು ರೋಚಕವಾಗಿರಲಿದೆ. ಇದಕ್ಕೆಲ್ಲ ಉತ್ತರ ಸಿಗಬೇಕೆಂದರೆ ಬಿಗ್​ಬಾಸ್​ ಶೋ ಆರಂಭವಾಗಬೇಕಿದೆ. ಅದು ತುಂಬಾ ದೂರವೇನಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಶೋ ಆರಂಭವಾಗಲಿದ್ದು, ಮತ್ತೆ ಮೂರು ತಿಂಗಳ ಕಾಲ ಬಿಗ್​ಬಾಸ್​ ಮನರಂಜನೆ ಸಿಗಲಿದೆ.

ಇನ್ನು ಈ ಬಾರಿ ಬಿಗ್​ಬಾಸ್​ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಕುತೂಹಲವೂ ಎಲ್ಲರಲ್ಲಿದೆ. ಸದ್ಯದ ಮಾಹಿತಿ ಪ್ರಕಾರ ಕೆಲ ಸಂಭಾವ್ಯ ಸ್ಪರ್ಧಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಸೋಶಿಯಲ್​ ಮೀಡಿಯಾ ಸ್ಟಾರ್​ ವರ್ಷಾ ಕಾವೇರಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ನಟ ಹಾಗೂ ಸೋಶಿಯಲ್​ ಮೀಡಿಯಾ ಸ್ಟಾರ್​ ವರುಣ್​ ಆರಾಧ್ಯ ಜತೆ ಲವ್​ ಬ್ರೇಕಪ್​ ಮಾಡಿಕೊಂಡು ವರ್ಷಾ ಕಾವೇರಿ ಸುದ್ದಿಯಾಗಿದ್ದರು. ನಟಿ ಪ್ರೇಮಾ ಅವರ ಹೆಸರು ಸಹ ಕೇಳಿಬರುತ್ತಿದೆ. ಸಿನಿಮಾಗಳಿಂದ ಅಂತರ ಕಾಯ್ದುಕೊಂಡು ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿರುವ ಪ್ರೇಮಾ, ಬಿಗ್‌ ಬಾಸ್‌ ಸೀಸನ್‌‌ 11ಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಗಿದೆ.

ಹಾಸ್ಯನಟ ರಾಘವೇಂದ್ರ, ತುಕಾಲಿ ಸಂತೋಷ್​ ಪತ್ನಿ ಮಾನಸ, ನಟಿ ಹಾಗೂ ಮಾಡೆಲ್​ ಜ್ಯೋತಿ ರೈ, ನಟಿ ಹಾಗೂ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ, ಸೋಶಿಯಲ್​ ಮೀಡಿಯಾ ಸ್ಟಾರ್​ ನಾಗರಾಜ್​ ಕುಡಪಲ್ಲಿ, ನಟಿ ಪ್ರಿಯಾ ಶಠಮರ್ಷಣ, ಕಾಮಿಡಿಯನ್​ ಮುಕಳೆಪ್ಪ, ನಟಿ ಪ್ರಿಯಾ ಸವದಿ, ಕಾಮಿಡಿಯನ್​ ಶಿವಪುತ್ರ, ಯುವ ರಾಜಕಾರಣಿ ನಿಶಾ ಯೋಗೇಶ್ವರ್​, ರಾಜಕಾರಣಿ ಮೊಹಮ್ಮದ್ ನಲಪಾಡ್​ ಹ್ಯಾರಿಸ್​, ನಟ ತ್ರಿವಿಕ್ರಮ್, ಸುನಿಲ್ ರಾವ್, ಭವ್ಯ ಗೌಡ, ಮೋಕ್ಷಾ ಪೈ ಹಾಗೂ ರೀಲ್ಸ್ ರೇಷ್ಮಾ ಹೀಗೆ ಬಹುತೇಕರ ಹೆಸರುಗಳು ಕೇಳಿ ಬರ್ತಿವೆ. ಖ್ಯಾತ ಯೂಟ್ಯೂಬರ್​ ಡಾ. ಬ್ರೋ ಹೆಸರು ಕೂಡ ಕೇಳಿಬಂದಿದೆ. ಆದರೆ, ಮೂರು ತಿಂಗಳ ಕಾಲ ಒಂದೇ ಕಡೆ ಇರಲು ನನ್ನಿಂದ ಸಾಧ್ಯವಿಲ್ಲ ಎಂದು ಡಾ. ಬ್ರೋ ಹೇಳಿದ್ದಾರೆ. ಒಂದು ವೇಳೆ ಅವರು ಬಂದರೂ ಕೂಡ ಅಚ್ಚರಿಪಡಬೇಕಿಲ್ಲ.

ಇನ್ನು ಮಾಧ್ಯಮ ಲೋಕದ ಆ್ಯಂಕರ್​ಗಳಾದ ಸುಕನ್ಯ, ಜಯಪ್ರಕಾಶ್​ ಶೆಟ್ಟಿ, ಅಜಿತ್​ ಹನುಮಕ್ಕನವರ್​, ಹರೀಶ್​ ನಾಗರಾಜು ಹಾಗೂ ರಾಧಾ ಹೀರೇಗೌಡರ್​ ಹೆಸರುಗಳು ಕೂಡ ಕೇಳಿಬರುತ್ತಿವೆ. ಆದರೆ, ಅಂತಿಮವಾಗಿ ಯಾರು ಮನೆಯ ಒಳಗೆ ಪ್ರವೇಶಿಸುತ್ತಾರೆ ಎಂಬುದು ತಿಳಿದುಕೊಳ್ಳಲು ಸೆ.29ರವರೆಗೆ ಕಾಯಬೇಕಿದೆ. ನಿಮ್ಮ ಪ್ರಕಾರ ಯಾರೆಲ್ಲ ಬಿಗ್​ಬಾಸ್​ ಮನೆಯನ್ನು ಪ್ರವೇಶಿಸಬಹುದು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.