ಸಿನಿವಾಣಿ

ವೀಕ್ಷಕರ ಪ್ರಕಾರ ಇವರೇ ನೋಡಿ ಈ ಬಾರಿ ಡ್ರೋನ್​ ಪ್ರತಾಪ್​ ಸ್ಥಾನ ತುಂಬುವ ಏಕೈಕ ಬಿಗ್​ಬಾಸ್​ ಸ್ಪರ್ಧಿ! Drone Prathap

ಬೆಂಗಳೂರು: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಹೊಸ ಸೀಸನ್‌ಗೆ ಭಾನುವಾರ ಚಾಲನೆ ದೊರೆತಿದೆ. ಬಿಗ್‌ ಬಾಸ್ ಕನ್ನಡ ಸೀಸನ್ 11 ರ ( Bigg Boss Kannada 11 ) 16 ಸ್ಪರ್ಧಿಗಳು ಬಿಗ್‌ಬಾಸ್‌ ಮನೆ ಸೇರಿದ್ದು, ಇಂದಿನಿಂದ ಅಸಲಿ ಆಟ ಆರಂಭವಾಗಲಿದೆ.

ಶನಿವಾರ (ಸೆ.28) ನಡೆದ ರಾಜಾರಾಣಿ ಗ್ರಾಂಡ್ ಫಿನಾಲೆಯಲ್ಲಿ ಗೌತಮಿ ಜಾಧವ್, ಗೊಲ್ಡ್ ಸುರೇಶ್, ಲಾಯರ್ ಜಗದೀಶ್ ಮತ್ತು ಚೈತ್ರಾ ಕುಂದಾಪುರ ನಾಲ್ವರು ಸ್ಪರ್ಧಿಗಳು ಬಿಗ್‌ಬಾಸ್‌ನಲ್ಲಿ ಭಾಗವಹಿಸುತ್ತಿರುವ ಬಗ್ಗೆ ಅಧಿಕೃತವಾಗಿ ಬಹಿರಂಗವಾಯಿತು. ಅವರೂ ಸೇರಿ ಯಮುನಾ ಶ್ರೀನಿಧಿ, ಭವ್ಯ ಗೌಡ, ಧರ್ಮ ಕೀರ್ತಿರಾಜ್, ಧನರಾಜ್ ಆಚಾ‌ರ್, ಅನುಷಾ ರೈ, ಶಿಶಿರ್ ಶಾಸ್ತ್ರಿ, ಮಾನಸಾ ಸಂತೋಷ್, ತ್ರಿವಿಕ್ರಮ್, ಐಶ್ವರ್ಯಾ ಶಿಂಧೋಗಿ, ಹಂಸಾ ಪ್ರತಾಪ್​ ಸೇರಿದಂತೆ ಉಳಿದ 12 ಸ್ಪರ್ಧಿಗಳು ಭಾನುವಾರ ಬಿಗ್‌ಬಾನ್ ಮನೆ ಸೇರಿದ್ದಾರೆ. ಇನ್ನು ನೂರು ದಿನಗಳ ಕಾಲ ಬಿಗ್‌ಬಾಸ್​ ಕನ್ನಡ ಸೀಸನ್ 11ರ ಸ್ಪರ್ಧೆ ಗೆಲ್ಲಲು ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿನ ಆಟ ಟಾಸ್ಕ್​ಗಳಲ್ಲಿ ಓಟ, ಮೈಂಡ್​ಗೇಮ್​ ನಡೆಯಲಿದೆ.

ಇನ್ನು ಬಿಗ್​ಬಾಸ್​ ಹೊಸ ಸೀಸನ್​ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದರಲ್ಲೂ ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಸಖತ್​ ಚರ್ಚೆಯಾಗುತ್ತಿದೆ. ಕಳೆದ ಬಾರಿಯ ಬಿಗ್​ಬಾಸ್​ನಲ್ಲಿ ಡ್ರೋನ್​ ಪ್ರತಾಪ್ ( Drone Prathap​​ ) ಮೇಲೆ ಎಲ್ಲರ ಗಮನ ನೆಟ್ಟಿತ್ತು. ಏಕೆಂದರೆ, ನಾನೇ ಡ್ರೋನ್​ ತಯಾರಿಸಿದ್ದೇನೆ, ನಾನೊಬ್ಬ ಯುವ ವಿಜ್ಞಾನಿ ಮತ್ತು ದೇಶ-ವಿದೇಶಗಳಲ್ಲಿ ನನಗೆ ಸಖತ್​ ಬೇಡಿಕೆ ಇದೆ ಎಂದು ಹಿಂದೊಮ್ಮೆ ಹೇಳಿಕೊಂಡಿದ್ದರು. ಅಲ್ಲದೆ, ಅದನ್ನು ನಿಜವೆಂದು ನಂಬಿ ಅನೇಕ ಸಂಘ-ಸಂಸ್ಥೆಗಳು ಪ್ರತಾಪ್​ಗೆ ಸನ್ಮಾನ ಸಹ ಮಾಡಿತ್ತು. ಆದರೆ, ನಂತರದ ದಿನಗಳಲ್ಲಿ ಪ್ರತಾಪ್​ ಹೇಳಿದ್ದೆಲ್ಲ ಸುಳ್ಳು ಎಂದು ಮಾಧ್ಯಮಗಳಲ್ಲಿ ವರದಿಯಾಯಿತು ಮತ್ತು ಭಾರಿ ಚರ್ಚೆಯಾಯಿತು. ಈ ಬಗ್ಗೆ ಪ್ರತಾಪ್ ಎಷ್ಟೇ ಸ್ಪಷ್ಟನೆ ನೀಡಿದರೂ ಸಾಕ್ಷಿ ಸಮೇತ ಸಾಬೀತು ಮಾಡಲು ಎಡವಿರುವುದರಿಂದ ಆತ ಹೇಳಿದ್ದೆಲ್ಲ ಸುಳ್ಳು ಎಂದು ಜನ ನಂಬಿದ್ದಾರೆ. ಹೀಗಾಗಿ ಬಿಗ್​ಬಾಸ್​ ಮನೆಯಲ್ಲಿ ಪ್ರತಾಪ್​ ವಿಶೇಷ ಗಮನ ಸೆಳೆದಿದ್ದರು. ಅಲ್ಲದೆ, ಕೊನೆಯವರೆಗೂ ಬಿಗ್​ಬಾಸ್​ ಮನೆಯಲ್ಲಿ ಉಳಿದಿದ್ದರು.

ಈ ಬಾರಿ ಡ್ರೋನ್​ ಪ್ರತಾಪ್​ ಸ್ಥಾನ ತುಂಬುವ ಸ್ಪರ್ಧಿಯೊಬ್ಬರು ಆಯ್ಕೆಯಾಗಿದ್ದಾರೆ ಎಂದು ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಆ ಸ್ಪರ್ಧಿ ಯಾರೆಂದರೆ ಹಿಂದು ಕಾರ್ಯಕರ್ತೆ ಎನಿಸಿಕೊಂಡಿರುವ ಚೈತ್ರಾ ಕುಂದಾಪುರ​. ಈ ಹಿಂದೆ ಬಿಜೆಪಿಯಿಂದ ಚುನಾವಣಾ ಟಿಕೆಟ್​ ಕೊಡಿಸುವುದಾಗಿ ನಂಬಿಸಿ, ಉದ್ಯಮಿಯಿಂದ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ಜೈಲುಪಾಲಾಗಿದ್ದರು. ಚೈತ್ರಾ ಅವರು ತಮ್ಮ ಭಾಷಣಗಳಲ್ಲಿ ಸತ್ಯಕ್ಕಿಂತ ಸುಳ್ಳುಗಳನ್ನೇ ಜಾಸ್ತಿ ಹೇಳಿದ್ದಾರೆ ಎಂಬುದು ಒಂದು ವರ್ಗದ ಜನರ ಅಭಿಪ್ರಾಯವಾಗಿದೆ. ಸುಳ್ಳು ಹೇಳುವುದರಲ್ಲಿ ಅಥವಾ ಕಾಗೆ ಹಾರಿಸುವುದರಲ್ಲಿ ಡ್ರೋನ್​ ಪ್ರತಾಪ್​ ಕೂಡ ನಿಸ್ಸೀಮರು. ಅದೇ ರೀತಿ ಚೈತ್ರಾ ಕುಂದಾಪುರ ಕೂಡ ಸುಳ್ಳು ಹೇಳುವುದರಲ್ಲಿ ತುಂಬಾ ಪ್ರವೀಣೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಡ್ರೋನ್​ ಪ್ರತಾಪ್​ ಮತ್ತು ಚೈತ್ರಾ ಕುಂದಾಪುರ ಸುಳ್ಳಿನ ಸರದಾರರು. ಇದೀಗ ಬಿಗ್​ಬಾಸ್ ಮನೇಲಿ ಡ್ರೋನ್​ ಪ್ರತಾಪ್​ ಸ್ಥಾನವನ್ನು ಚೈತ್ರಾ ಕುಂದಾಪುರ ತುಂಬಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದು ಎಷ್ಟರಮಟ್ಟಿಗೆ ನಿಜವೆಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಈ ಬಾರಿಯ ಬಿಗ್​ ಬಾಸ್​ ಸೀಸನ್​ 11ರಲ್ಲಿ ಸ್ವರ್ಗ ಮತ್ತು ನರಕ ಪರಿಕಲ್ಪನೆ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಧನರಾಜ್​ ಆಚಾರ್​, ಗೌತಮಿ ಜಾಧವ್​, ಲಾಯರ್​ ಜಗದೀಶ್​, ತ್ರಿವಿಕ್ರಮ್​, ಯಮುನಾ ಶ್ರೀನಿಧಿ, ಭವ್ಯಾ, ಹಂಸಾ ಪ್ರತಾಪ್​, ಐಶ್ವರ್ಯಾ ಶಿಂಧೋಗಿ ಮತ್ತು ಉಗ್ರಂ ಮಂಜು ಬಿಗ್​ಬಾಸ್​ ಮನೆಯ ಸ್ವರ್ಗಕ್ಕೆ ಸೇರಿದ್ದರೆ, ಅನುಷಾ ರೈ, ಶಿಶಿರ್​ ಶಾಸ್ತ್ರಿ, ಗೋಲ್ಡ್​ ಸುರೇಶ್​, ಮಾನಸಾ ಸಂತೋಷ್​, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಮತ್ತು ರಂಜಿತ್​ ನರಕವಾಸಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಶೋ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.