ಬೆಂಗಳೂರು: ಹ್ಯಾಪಿ ಬಿಗ್ಬಾಸ್ ಎಂಬ ಹೊಸ ಪರಿಕಲ್ಪನೆಯೊಂದಿಗೆ ಅಕ್ಟೋಬರ್ 8ರಿಂದ ಆರಂಭವಾದ ಬಿಗ್ಬಾಸ್ ಸೀಸನ್ 10 ಹಿಂದಿನ ಸೀಸನ್ಗಳಿಗಿಂತ ಈ ಬಾರಿ ಸಿಕ್ಕಾಪಟ್ಟೆ ಸದ್ದು ಮಾಡಿತು. ಆರಂಭದಿಂದಲೇ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿದ ಬಿಬಿಕೆ-10 ನಿನ್ನೆ ಅದ್ಧೂರಿಯಾಗಿ ಮುಕ್ತಾಯಗೊಂಡಿತು. ಕಾರ್ತಿಕ್ ಮಹೇಶ್ ವಿನ್ನರ್ ಆಗಿ ಹೊರಹೊಮ್ಮಿದರೆ, ಡ್ರೋನ್ ಪ್ರತಾಪ್ ಪ್ರಥಮ ರನ್ನರ್ ಅಪ್ ಆದರು.
ಗ್ರ್ಯಾಂಡ್ ಫಿನಾಲೆ ವಾರಕ್ಕೆ ತುಕಾಲಿ ಸಂತೋಷ್, ವರ್ತೂರ್ ಸಂತೋಷ್, ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ, ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಎಂಟ್ರಿ ಕೊಟ್ಟಿದ್ದರು. ಶನಿವಾರದ ಫಿನಾಲೆ ಎಪಿಸೋಡ್ನಲ್ಲಿ ತುಕಾಲಿ ಸಂತೋಷ್ ಮನೆಯಿಂದ ಹೊರ ಬರುವ ಮೂಲಕ 5ನೇ ರನ್ನರ್ ಅಪ್ ಎನಿಸಿಕೊಂಡರು. ಭಾನುವಾರದ ಅಂತಿಮ ಫಿನಾಲೆ ಎಪಿಸೋಡ್ನಲ್ಲಿ ಐವರು ಸ್ಪರ್ಧಿಗಳು ಉಳಿದುಕೊಂಡಿದ್ದರು. ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿ ಎನಿಸಿಕೊಂಡರು. ಈ ಮೂಲಕ 4ನೇ ರನ್ನರ್ ಅಪ್ ಆದರು. ಇದಾದ ಬಳಿಕ ವಿನಯ್ ಗೌಡ ದೊಡ್ಮನೆಯಿಂದ ಹೊರಗಡೆ ಬರುವ ಮೂಲಕ 3ನೇ ರನ್ನರ್ ಅಪ್ ಆದರೆ, ಸಂಗೀತಾ ಶೃಂಗೇರಿ ಕೂಡ ಮನೆಯಿಂದ ಎಲಿಮಿನೇಟ್ ಆಗಿ 2ನೇ ರನ್ನರ್ ಅಪ್ ಎನಿಸಿಕೊಂಡರು.
ಅಂತಿಮವಾಗಿ ಮನೆಯಲ್ಲಿ ಕಾರ್ತಿಕ್ ಮತ್ತು ಪ್ರತಾಪ್ ಮಾತ್ರ ಉಳಿದುಕೊಂಡರು. ಎಂದಿನಂತೆ ಮನೆಯ ಒಳಗಡೆ ಹೋಗಿ ಇಬ್ಬರನ್ನು ಹೊರ ಕರೆತಂದ ಕಿಚ್ಚ, ಮಾಮೂಲಿಯಂತೆ ಅಧಿಕೃತ ಘೋಷಣೆಗೂ ಮುನ್ನ ಕೆಲ ಕಾಲ ಪ್ರೇಕ್ಷಕರ ಎದೆಬಡಿತವನ್ನು ಹೆಚ್ಚಿಸಿದರು. ಅಂತಿಮವಾಗಿ ಕಾರ್ತಿಕ್ ಮಹೇಶ್ ಕೈಯನ್ನು ಮೇಲೆತ್ತುವ ಮೂಲಕ ಅಧಿಕೃತ ಘೋಷಣೆ ಮಾಡಿದರು. ವಿನ್ನರ್ ಕಾರ್ತಿಕ್ಗೆ 50 ಲಕ್ಷ ನಗದು ಮತ್ತು ಒಂದು ಕಾರು ಬಹುಮಾನವಾಗಿ ಸಿಕ್ಕಿದೆ. ಪ್ರಥಮ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರಿಗೆ 10 ಲಕ್ಷ ರೂ. ನಗದು ಮತ್ತು ಒಂದು ಬೈಕ್ ಉಡುಗೊರೆಯಾಗಿ ಲಭಿಸಿದೆ.
ಕಾರ್ತಿಕ್ ಗೆಲುವಿಗೆ ಕಾರಣವೇನು? ಕಾರ್ತಿಕ್ಗೆ 2,97,39, 904 ಮತಗಳು ಬಂದಿದ್ದೇನೋ ನಿಜ. ಆದರೆ, ಅಷ್ಟು ಮತಗಳನ್ನು ಪಡೆಯಲು ಕಾರ್ತಿಕ್ ಅವರ ಶ್ರಮ ಸಾಕಷ್ಟಿದೆ. ಇಡೀ ಶೋನಲ್ಲಿ ಬ್ಯಾಲೆನ್ಸ್ ಆಗಿ ಆಡಿದ ಏಕೈಕ ಸ್ಪರ್ಧಿ ಅಂದರೆ ಅದು ಕಾರ್ತಿಕ್ ಮಹೇಶ್. ಅವರ ಪ್ರಯಾಣವು ಬಲವಾದ ಮೈಕಟ್ಟು, ಮಗುವಿನಂತಹ ಮುಗ್ಧತೆ, ನಿರ್ಣಯ ಮತ್ತು ಭಾವನಾತ್ಮಕ ಸ್ವಭಾವದಿಂದ ತುಂಬಿತ್ತು. ರಾಷ್ಟ್ರ ಪ್ರಶಸ್ತಿ ಪಡೆದ ಡೊಳ್ಳು ಸಿನಿಮಾದಲ್ಲಿ ತನ್ನ ಪಾತ್ರದಿಂದಲೇ ಸದ್ದು ಮಾಡಿದ್ದ ಕಾರ್ತಿಕ್, ಅನೇಕ ಧಾರಾವಾಹಿಗಳಲ್ಲೂ ತಮ್ಮ ನಟನೆ ಮೂಲಕ ಗಮನ ಸೆಳೆದಿದ್ದರು. ಬಿಗ್ಬಾಸ್ ಮನೆಯ ಒಳಗೆ ಅನಿಶ್ಚಿತತೆಗಳ ಹೊರತಾಗಿಯೂ ಕೆಲವೊಮ್ಮೆ 'ಅಸಮರ್ಥ' ಎಂಬ ಟ್ಯಾಗ್ ಅನ್ನು ಸಹ ಕಾರ್ತಿಕ್ ಎದುರಿಸುತ್ತಿದ್ದರು. ಆದರೆ, ಪ್ರತಿ ಸವಾಲನ್ನು ದೃಢನಿಶ್ಚಯದಿಂದ ಎದುರಿಸಿದರು. ಕಾರ್ತಿಕ್ ಅವರ ಆಟದ ವೈಖರಿ, ಸ್ನೇಹ ಮತ್ತು ನೇರ ನುಡಿ ಸ್ವಭಾವ ಎಲ್ಲರ ಗಮನ ಸೆಳೆಯಿತು. ಅದರಲ್ಲೂ ಒಂದು ಸಂದರ್ಭದಲ್ಲಿ ವಿನಯ್ ವಿರುದ್ಧ ಕಾರ್ತಿಕ್ ನಿಂತ ಪರಿ ಅವರ ಬಲ ಮತ್ತು ಸಾಮರ್ಥ್ಯವನ್ನು ನಿರೂಪಿಸಿತು.
ಕಾರ್ತಿಕ್ ಅವರ ನಾಯಕತ್ವ ಗುಣ ಇಡೀ ಸೀಸನ್ ಉದ್ದಕ್ಕೂ ಕಾಣಿಸಿದೆ. ಎರಡು ಬಾರಿ ಕ್ಯಾಪ್ಟನ್ ಕೂಡ ಆಗಿದ್ದರು. ಕ್ಯಾಪ್ಟನ್ ಆಗಿದ್ದ ಸಮಯದಲ್ಲಿ ತುಂಬಾ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳದೆ, ಎಲ್ಲರ ವಿಶ್ವಾಸವನ್ನು ಗಳಿಸಿದರು ಮತ್ತು ಸಂತೋಷದ ವಾತಾವರಣವನ್ನು ಉಳಿಸಿಕೊಂಡರು ಹಾಗೂ ಮನೆಯ ವಿವಿಧ ಚಟುವಟಿಕೆಗಳಲ್ಲಿ ತಮ್ಮ ನಾಯಕತ್ವ ಗುಣವನ್ನು ಎತ್ತಿ ತೋರಿಸಿದರು. ನಾಲ್ಕನೇ ವಾರದಲ್ಲಿ ಕಾರ್ತಿಕ್ ಅವರು ತಮ್ಮ ತಂಡವನ್ನು ತನಿಷಾ ತಂಡದ ವಿರುದ್ಧ ಗೆಲುವಿನ ದಡ ಸೇರಿಸಿದರು. ಪ್ರತಾಪ್, ನಮ್ರತಾ, ತುಕಾಲಿ ಸಂತೋಷ್ ಮತ್ತು ವರ್ತೂರ್ ಸಂತೋಷ್ ಅವರಿಂದ ಕಠಿಣ ಸ್ಪರ್ಧೆಯನ್ನು ಎದುರಿಸಿದರು ಆದರೆ, ನಾಯಕರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಎಂಟನೇ ವಾರದಲ್ಲಿ ಮತ್ತೆ ತಮ್ಮ ನಾಯಕತ್ವದ ಕೌಶಲ್ಯವನ್ನು ಕಾರ್ತಿಕ್ ಸಾಬೀತುಪಡಿಸಿದರು.
ಕಾರ್ತಿಕ್, ಸಂಗೀತಾ ಮತ್ತು ತನಿಷಾ ನಡುವೆ ಒಳ್ಳೆಯ ಸ್ನೇಹವಿತ್ತು. ಆರಂಭದಲ್ಲಿ ಸಂಗೀತಾ ಮತ್ತು ಕಾರ್ತಿಕ್ ಸ್ನೇಹಕ್ಕೆ ಪ್ರೀತಿಯ ಲೇಪನವೂ ಸಹ ಇತ್ತು. ಆದರೆ, ಪ್ರೀತಿ ಏನಿಲ್ಲ ಇಬ್ಬರದು ಪರಿಶುದ್ಧ ಸ್ನೇಹ ಎಂದು ಸಂಗೀತಾ ಹೇಳಿದ್ದರು. ಇಬ್ಬರ ನಡುವಿನ ಸ್ನೇಹ ಸಾಕಷ್ಟು ಏರಿಳಿತಗಳನ್ನು ಕಂಡಿತು. ಯಾವಾಗ ಕಾರ್ತಿಕ್ ವಿನಯ್ ತಂಡವನ್ನು ಸೇರಲು ನಿರ್ಧರಿಸಿದರೋ ಆಗ ಇಬ್ಬರ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿತು. ಇಬ್ಬರು ಸಾಕಷ್ಟು ಬಾರಿ ಕಚ್ಚಾಡಿಕೊಂಡರು. ಆದರೆ, ಎಲ್ಲಿಯೂ ಕಾರ್ತಿಕ್ ಅವರು ತಮ್ಮ ವ್ಯಾಪ್ತಿಯನ್ನು ಮೀರಲಿಲ್ಲ. ಇನ್ನು ಕಾರ್ತಿಕ್ ಅವರ ತುಂಟತನವು ಕೂಡ ಶೋನಲ್ಲಿ ಎಲ್ಲರ ಗಮನ ಸೆಳೆಯಿತು. ಸಂಗೀತಾ ಜತೆ ಆತ್ಮೀಯವಾಗಿದ್ದ ಕಾರ್ತಿಕ್, ಅವರಿಂದ ಅಂತರ ಕಾಯ್ದುಕೊಂಡ ಬಳಿಕ ನಮ್ರತಾ ಹಿಂದೆ ಬಿದ್ದರು. ನಮ್ರತಾ ಜತೆ ಫ್ಲರ್ಟ್ ಮಾಡುತ್ತಿದ್ದರು. ಆದರೆ, ಎಲ್ಲಿಯೂ ತಮ್ಮ ಸಂಬಂಧ ಆರೋಗ್ಯವಾಗಿ ಇರುವಂತೆ ಕಾರ್ತಿಕ್ ನೋಡಿಕೊಳ್ಳುತ್ತಿದ್ದರು.
ಆದಾಗ್ಯೂ ಕಾರ್ತಿಕ್ ಅವರ ಪ್ರಯಾಣವು ಭಾವನಾತ್ಮಕ ಸವಾಲುಗಳಿಂದಲೂ ಕೂಡಿತ್ತು. ಕಾರ್ತಿಕ್ ಅವರ ತಾಯಿ 81ನೇ ದಿನದಂದು ಮನೆಗೆ ಭೇಟಿ ನೀಡಿದಾಗ ವಿಶೇಷ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ತಾಯಿಯನ್ನು ಕಂಡು ತಮ್ಮ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮ ಬಲವಾದ ವ್ಯಕ್ತಿತ್ವಕ್ಕೆ ನಡುವೆ ಮೃದು ಸ್ವಭಾವವನ್ನು ಸಹ ಕಾರ್ತಿಕ್ ತೋರಿಸಿದರು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಬಿಗ್ ಬಾಸ್ ಕನ್ನಡದಲ್ಲಿ ಕಾರ್ತಿಕ್ ಮಹೇಶ್ ಅವರ ಪ್ರಯಾಣವು ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ಸವಾಲುಗಳಿಂದ ತುಂಬಿತ್ತು. ಹೀಗಾಗಿ ಕಾರ್ತಿಕ್ ಅವರು ಸಾಕಷ್ಟು ಜನರಿಗೆ ಇಷ್ಟವಾದರು. ಕೊನೆಗೆ ಇದು ಮತಗಳಾಗಿ ಪರಿವರ್ತನೆಗೊಂಡು ಅಂತಿಮವಾಗಿ ಗೆಲುವು ಕಾರ್ತಿಕ್ ಮಹೇಶ್ ಅವರದ್ದಾಯಿತು.