ಸಿನಿವಾಣಿ

ಕತ್ತಿ ಹಿಡಿದವರ ಬಿಚ್ಚು ಮಾತು, ಸಾಹಸ

malli

ನಿರ್ದೇಶಕ ಹರಿ ಸಂತೋಷ್, ನಟರಾದ ರಾಜವರ್ಧನ್, ‘ಬಾಹುಬಲಿ’ ಪ್ರಭಾಕರ್, ನಟಿ ಹರಿಪ್ರಿಯಾ ಮುಂತಾದವರೆಲ್ಲ ಸೇರಿ ಪ್ರೇಕ್ಷಕರನ್ನು 16ನೇ ಶತಮಾನಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ. ಅರ್ಥಾತ್, 16ನೇ ಶತಮಾನದಲ್ಲಿ ಚಿತ್ರದುರ್ಗದಲ್ಲಿ ನಡೆದ ದಳವಾಯಿ ದಂಗೆ ಕುರಿತು, ಬಿ.ಎಲ್. ವೇಣು ಅವರ ಕಾದಂಬರಿ ಆಧಾರಿತವಾಗಿ ಮೂಡಿ ಬಂದಿರುವ ಸಿನಿಮಾ ‘ಬಿಚ್ಚುಗತ್ತಿ’ ಇಂದು (ಫೆ.28) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಆ ಬಗ್ಗೆ ಹರಿ ಸಂತೋಷ್, ರಾಜವರ್ಧನ್, ಹರಿಪ್ರಿಯಾ ಅವರ ಅನಿಸಿಕೆ-ಅಭಿಪ್ರಾಯಗಳ ಸಾರಾಂಶವಿಲ್ಲಿದೆ.

ಖ್ಯಾತ ಸಾಹಿತಿ ಡಾ.ಬಿ.ಎಲ್. ವೇಣು ಅವರ ‘ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿ ಆಧಾರಿತವಾಗಿ ‘ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ನಿರ್ವಿುಸಲಾಗಿರುವ ಚಿತ್ರವೇ ‘ಬಿಚ್ಚುಗತ್ತಿ: ಚಾಪ್ಟರ್ 1-ದಳವಾಯಿ ದಂಗೆ’. 16ನೇ ಶತಮಾನದಲ್ಲಿ ನಡೆದ ಈ ಐತಿಹಾಸಿಕ ಕಥಾನಕವನ್ನು ನಿರ್ದೇಶಕ ಹರಿ ಸಂತೋಷ್ ತೆರೆ ಮೇಲೆ ಮೂಡಿಸಿದ್ದು, ಇದರಲ್ಲಿ ಭರಮಣ್ಣ ನಾಯಕನಾಗಿ ರಾಜವರ್ಧನ್, ಗುಡಿಕೋಟೆ ರಾಜಕುಮಾರಿ ಸಿದ್ದಾಂಬೆ ಆಗಿ ಹರಿಪ್ರಿಯಾ ಹಾಗೂ ದಳವಾಯಿ ಮುದ್ದಣ್ಣನಾಗಿ ‘ಬಾಹುಬಲಿ’ ಸಿನಿಮಾ ಖ್ಯಾತಿಯ ಪ್ರಭಾಕರ್ ಪರದೆ ಮೇಲೆ ರಾರಾಜಿಸಿದ್ದಾರೆ.

ಗತಕಾಲದ ಈ ಪಾತ್ರಗಳನ್ನು ಪ್ರಸ್ತುತ ಕಾಲಘಟ್ಟದಲ್ಲಿ ದೃಶ್ಯಗಳ ಮೂಲಕ ಕಟ್ಟಿಕೊಡುವ ಹಾಗೂ ಅಭಿನಯದ ಮೂಲಕ ಪ್ರದರ್ಶಿಸುವುದು ಸುಲಭದ ಮಾತೇನಲ್ಲ. ಆ ನಿಟ್ಟಿನಲ್ಲಿ ತಾವು ಎದುರಿಸಿರುವ ಸವಾಲುಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ ನಾಯಕ-ನಾಯಕಿ ಮತ್ತು ನಿರ್ದೇಶಕರು.

ಅನಾಮಿಕ ಕರೆಯಾಗಿ ಬಂದ ಭರಮಣ್ಣ

‘ಒಂದು ದಿನ ಚಿತ್ರದುರ್ಗದಿಂದ ಯಾರೋ ಕರೆ ಮಾಡಿ ಬಹುಕೋಟಿ ರೂ. ಹೂಡಿಕೆಯ ‘ಬಿಚ್ಚುಗತ್ತಿ’ ಸಿನಿಮಾ ನಿರ್ಮಾಣದ ಬಗ್ಗೆ ಹೇಳಿ ಭರಮಣ್ಣ ನಾಯಕನ ಪಾತ್ರದ ಬಗ್ಗೆ ಹೇಳಿದ್ದರು. ನಾನು ಅದನ್ನು ಫೇಕ್ ಕಾಲ್ ಎಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅದಾಗಿ ಎರಡನೇ ದಿನಕ್ಕೆ ಹಂಸಲೇಖ ಅವರೂ ಅದನ್ನೇ ಹೇಳಿದಾಗ ಒಪ್ಪಿದೆ, 15 ದಿನಗಳಲ್ಲಿ ಮಾತುಕತೆ ಮುಗಿದು ಎಲ್ಲ ಅಂತಿಮವೂ ಆಯ್ತು. ಆದರೆ ಇಂದಿಗೂ ಆ ಕರೆ ಮಾಡಿದ್ದು ಯಾರು ಎನ್ನುವುದು ನನಗೆ ಗೊತ್ತಿಲ್ಲ..’

- ಹೀಗೆ ಅನಾಮಿಕ ಕರೆಯಾಗಿ ಭರಮಣ್ಣ ಬಂದ ಬಗೆಯನ್ನು ಹೇಳಿಕೊಂಡವರು ಅದೇ ಪಾತ್ರ ಮಾಡಿ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ನಟ ರಾಜವರ್ಧನ್. ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್ ಅವರ ಪುತ್ರ ಆಗಿರುವ ಇವರು, ಈ ಚಿತ್ರಕ್ಕೆ ಭರ್ತಿ 2 ವರ್ಷ ಸಮಯ ಮೀಸಲಿಟ್ಟು ಭಾರಿ ಪರಿಶ್ರಮ ವಹಿಸಿದ್ದಾರೆ. ‘ಅಂದು ಮೊದಲ ಸಲ ಇಂಥದ್ದೊಂದು ದೊಡ್ಡ ಅವಕಾಶ ಬಂದಾಗ ಒಪ್ಪಿಕೊಳ್ಳಬೇಕೋ ಬೇಡವೋ..’ ಎಂದು ಸ್ವಲ್ಪ ಹಿಂಜರಿದಿದ್ದ ರಾಜವರ್ಧನ್, ನನ್ನ ಅವತ್ತಿನ ನಿರ್ಧಾರ ಸರಿಯಾಗಿಯೇ ಇತ್ತು ಎಂದು ಇಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ.

‘ಟ್ರೇಲರ್ ಬಿಡುಗಡೆ ಆದ ಬಳಿಕವಂತೂ ನನ್ನ ಪಾತ್ರಕ್ಕೆ ಬಹಳಷ್ಟು ಮೆಚ್ಚುಗೆ ಬಂದಿದೆ. ಹಾಗಂತ ನಾನು ದೊಡ್ಡ ನಿರೀಕ್ಷೆ ಏನೂ ಇಟ್ಟುಕೊಂಡಿಲ್ಲ, ಪಟ್ಟಶ್ರಮಕ್ಕೆ ಫಲ ಸಿಕ್ಕರೆ ಸಾಕು, ಖುಷಿ ಆಗುತ್ತದೆ. ಎಲ್ಲಕ್ಕಿಂತ ಹೆಚ್ಚು ನನ್ನ ತಂದೆ ಖುಷಿ ಪಡುತ್ತಾರೆ’ ಎನ್ನುತ್ತಾರೆ ಅವರು.

ಅಂದಹಾಗೆ ಈಗಾಗಲೇ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದ್ದರೂ ಪಾತ್ರಕ್ಕಾಗಿ ಪಟ್ಟ ಶ್ರಮದ ಪ್ರಮಾಣ ಬಹಳವೇ ಇದೆಯಂತೆ. ‘ಈ ಚಿತ್ರಕ್ಕಾಗಿ 2 ವರ್ಷ ಡೇಟ್ಸ್ ಕೊಟ್ಟಿದ್ದೆ. ಅದರಲ್ಲೂ ತಯಾರಿಗೇ ಒಂದೂವರೆ ವರ್ಷ ವಿನಿಯೋಗಿಸಿದ್ದೆ. ಹೀಗೆ ವೃತ್ತಿಯ ಆರಂಭಿಕ ದಿನಗಳಲ್ಲಿ ಒಂದು ಚಿತ್ರಕ್ಕೆ 2 ವರ್ಷ ಡೇಟ್ಸ್ ಕೊಟ್ಟು ವರ್ಷಕ್ಕೂ ಅಧಿಕ ಕಾಲ ತಯಾರಿ ನಡೆಸುವುದು ಸುಲಭವೇನಲ್ಲ. ಮೊದಲನೆಯದಾಗಿ ಈ ಸಮಯದಲ್ಲಿ ಬೇರೆ ಸಂಪಾದನೆ ಇರುವುದಿಲ್ಲ, ಜತೆಗೆ ನಾನಾ ತರಬೇತಿ ಬೇರೆ. ಅದರಲ್ಲೂ ವಿಲನ್ ಪ್ರಭಾಕರ್ ಅವರ ಪರ್ಸನಾಲಿಟಿ-ದೇಹತೂಕಕ್ಕೆ ಸರಿಯಾಗಿ ದೇಹ ಹುರಿಗೊಳಿಸಿಕೊಂಡು ತೂಕ ಹೆಚ್ಚಿಸಿಕೊಳ್ಳಬೇಕಿತ್ತು.

ಚಿತ್ರ ಒಪ್ಪಿಕೊಂಡಾಗ 81 ಕೆ.ಜಿ. ತೂಕವಿದ್ದೆ, ನಂತರ 108 ಕೆ.ಜಿ.ಗೆ ಹೆಚ್ಚಿಸಿಕೊಂಡೆ. ಜತೆಗೆ ಚಿತ್ರಕ್ಕಾಗಿ ಕುದುರೆ ಸವಾರಿ, ಕಳರಿಪಯಟ್ಟು ಮುಂತಾದವನ್ನು ಕಲಿಯಬೇಕಿತ್ತು. ಅದಕ್ಕೆ ತೂಕವೇ ಅನನುಕೂಲವಾಗಿತ್ತು. ಕಳರಿಪಯಟ್ಟು ತರಬೇತಿಗೆ ಸಣ್ಣಗಿರಬೇಕು, ಕುದುರೆ ಸವಾರಿಗೆ ಭಾರ ಕಡಿಮೆ ಇರಬೇಕು. ಹೆಚ್ಚು ತೂಕವಿದ್ದರೆ ಕುದುರೆ ಮೇಲೆ ಕೂರಿಸಿಕೊಳ್ಳುವುದಿಲ್ಲ’ ಎನ್ನುತ್ತ ಎದುರಿಸಿದ ಸವಾಲುಗಳ ಬಗ್ಗೆ ಹೇಳಿದರು ರಾಜವರ್ಧನ್. ‘ಉದ್ದನೆಯ ಕೇಶರಾಶಿಗಾಗಿ ಹೇರ್​ಸ್ಟಿಚ್ಚಿಂಗ್ ಮಾಡಿಸಬೇಕಿತ್ತು. ಅದಕ್ಕೆ ಒಮ್ಮೆಗೆ 1.8 ಲಕ್ಷ ಖರ್ಚಾಗುತ್ತಿದ್ದರಿಂದ ಬಜೆಟ್ ದೃಷ್ಟಿಯಿಂದ ಪದೇಪದೆ ಮಾಡಿಸುವಂತಿರಲಿಲ್ಲ.

ಹೀಗಾಗಿ ಒಮ್ಮೆ ಮಾಡಿಸಿ ಸುಮಾರು 6 ತಿಂಗಳ ಕಾಲ ಹಾಗೇ ಇರಬೇಕಾಗಿತ್ತು. ಆ ಗೆಟಪ್​ನಲ್ಲಿ ಸಾಕಷ್ಟು ಪಿನ್​ಗಳಿರುತ್ತಿದ್ದವು. ಸ್ನಾನ ಮಾಡಲು, ಮಲಗಲು ಹಿಂಸೆ ಎನಿಸುತ್ತಿತ್ತು. ಆದರೆ ಚಿತ್ರಕ್ಕಾಗಿ, ಪಾತ್ರಕ್ಕಾಗಿ ಅವೆಲ್ಲವನ್ನೂ ಸಹಿಸಿಕೊಂಡು ಅಪಾರ ಶ್ರಮದಿಂದ ಪಾತ್ರ ಮಾಡಿದೆ’ ಎಂಬುದಾಗಿ ಹೇಳಿದರು. ಇನ್ನು ಐತಿಹಾಸಿಕ ಪಾತ್ರವೆಂದರೆ ಅದಕ್ಕೆ ಜೀವಂತ ಉದಾಹರಣೆ ಎಂಬುದಿರಲ್ಲ. ಹೀಗಾಗಿ ಅವರು ವೇಣು ಅವರ ಕಾದಂಬರಿಯನ್ನು ಪದೇಪದೆ ಓದಿ, ರಾಜ್​ಕುಮಾರ್ ಅವರ ಹಳೇ ಸಿನಿಮಾ, ದರ್ಶನ್ ಅವರ ‘ಸಂಗೊಳ್ಳಿ ರಾಯಣ್ಣ’, ‘ಕುರುಕ್ಷೇತ್ರ’ ಚಿತ್ರಗಳನ್ನು ನೋಡಿ ಸಜ್ಜಾಗಿದ್ದರಂತೆ.

ತುಂಬ ಹುಷಾರಾಗಿರಬೇಕು...: ‘ಐತಿಹಾಸಿಕ ಪಾತ್ರಗಳ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿರುತ್ತದೆ. ಅಲ್ಲಿ ಒಂದು ಸಣ್ಣ ತಪ್ಪಾದರೂ ಹುಡುಕಿಬಿಡುತ್ತಾರೆ. ಉದಾಹರಣೆಗೆ ಹಣೆಗೊಂದು ಬೊಟ್ಟು ಇಡುವಾಗಲೂ ಎಚ್ಚರವಹಿಸಬೇಕು. ಅಲ್ಲಿ ಸ್ಟಿಕ್ಕರ್ ಇಟ್ಟರೆ ಆಗಿನ ಕಾಲದಲ್ಲಿ ಅದಿತ್ತಾ ಎಂಬ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ಇಂಥ ಪಾತ್ರಗಳನ್ನು ಮಾಡುವಾಗ ತುಂಬ ಹುಷಾರಾಗಿರಬೇಕು..’ ಎನ್ನುತ್ತಲೇ ಗುಡಿಕೋಟೆ ರಾಜಕುಮಾರಿ ಸಿದ್ದಾಂಬೆ ಆಗುವಾಗಿನ ಮುಂಜಾಗ್ರತೆ, ತಯಾರಿಗಳ ಕುರಿತೆಲ್ಲ ಹೇಳಿಕೊಂಡರು ನಟಿ ಹರಿಪ್ರಿಯಾ.

‘ಇಂಥ ಪಾತ್ರಗಳಿಗೆ ನಿರ್ದೇಶಕರು ನಮ್ಮನ್ನೇ ಆರಿಸಿಕೊಂಡಾಗ ಅವರು ನಾವು ಇಂಥದ್ದನ್ನು ಮಾಡಬಲ್ಲೆವು ಎಂದು ಇಟ್ಟ ನಂಬಿಕೆ ಬಗ್ಗೆ ಖುಷಿ ಎನಿಸುತ್ತದೆ’ ಎನ್ನುವ ಅವರು, ‘ಇಂಥದ್ದೆಲ್ಲ ಇಡೀ ತಂಡದ ಪ್ರಯತ್ನದಿಂದ ಮಾತ್ರ ಸಾಧ್ಯ. ನಿರ್ವಪಕರಿಗೆ ಚಿತ್ರದುರ್ಗದ ಮೇಲಿರುವ ಪ್ರೀತಿ, ನಿರ್ದೇಶಕರಿಗೆ ಚಿತ್ರೀಕರಣದ ಬಗ್ಗೆ ಇರುವ ಪರಿಣತಿ ಮುಂತಾದವೆಲ್ಲ ಒಗ್ಗೂಡಿದಾಗ ಮಾತ್ರ ಇಂಥದ್ದನ್ನೆಲ್ಲ ಮಾಡಬಹುದು’ ಎನ್ನುತ್ತಾರೆ.

ಚಿಕ್ಕಂದಿನಲ್ಲಿ ಛದ್ಮವೇಷಕ್ಕಾಗಿ ಅಮ್ಮ ತಮಗೆ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಅವರ ಪಾತ್ರಗಳನ್ನು ಹಾಕಿಸುತ್ತಿದ್ದುದನ್ನು ನೆನಪಿಸಿಕೊಂಡ ಅವರು, ಸಿದ್ದಾಂಬೆ ಆದ ಅನುಭವಗಳನ್ನೂ ಹಂಚಿಕೊಂಡರು. ‘ನನಗೆ ಹೊಸ ಸವಾಲು ಎದುರಿಸುವುದು ಇಷ್ಟ. ಅದೇ ಕಾರಣಕ್ಕೆ ಇಂಥ ಪಾತ್ರ ಕಷ್ಟ ಎಂದು ಗೊತ್ತಿದ್ದರೂ ಒಪ್ಪಿಕೊಂಡೆ. ಒಪ್ಪಿದ ಮೇಲೆ ಅದೆಷ್ಟೇ ಕಷ್ಟವಾದರೂ ಹಿಂಜರಿಯುವುದಿಲ್ಲ. ಹೀಗೆ ಹೊಸ ಥರದ ಪಾತ್ರಗಳನ್ನು ಮಾಡುವುದರಿಂದ ಹೊಸದನ್ನು ಕಲಿಯಬಹುದು’ ಎಂಬುದು ಹರಿಪ್ರಿಯಾ ಅಭಿಪ್ರಾಯ.

‘ನನಗೆ ಮೊದಲೇ ಕುದುರೆ ಸವಾರಿ ಗೊತ್ತಿತ್ತು. ಆದರೆ ಈ ಚಿತ್ರಕ್ಕಾಗಿ ಮತ್ತೆ ಅದನ್ನು ಕಲಿತು ಪರಿಣತಿ ಪಡೆದೆ. ಅದರಲ್ಲೂ ತರಬೇತಿ ಪಡೆದ ಕುದುರೆ ಬೇರೆ, ಶೂಟಿಂಗ್​ಗೆ ಬರುವ ಕುದುರೆಗಳು ಬೇರೆ ಇರುತ್ತವೆ. ಕುದುರೆ ಸವಾರಿ ವೇಳೆ ಕೆಲವು ಕಲಾವಿದರು ಬಿದ್ದಿದ್ದ ಬಗ್ಗೆ ಕೇಳಿದ್ದೆ. ಹೀಗಾಗಿ ಆ ಭಯದ ನಡುವೆ ಶೂಟಿಂಗ್​ನಲ್ಲಿ ಪಾಲ್ಗೊಳ್ಳಬೇಕಿತ್ತು. ಇನ್ನು ಈ ಪಾತ್ರಕ್ಕಾಗಿ ಕತ್ತಿವರಸೆ ಕಲಿತೆ. ಅದಕ್ಕೆ ನೈಜ ಸ್ಟೀಲ್ ಖಡ್ಗವನ್ನೇ ಕೊಟ್ಟಿದ್ದರು. ರೇಷ್ಮೆ ಉಡುಪು, ವಿಶೇಷ ಉಡುಗೆ ತೊಟ್ಟು ಖಡ್ಗ ಹಿಡಿದು ಫೈಟ್ ಮಾಡುವುದು ಚಾಲೆಂಜಿಂಗ್ ಆಗಿತ್ತು. ವಿಶೇಷ ಎಂದರೆ ಈ ಚಿತ್ರದಲ್ಲಿ ನಾನು ಡೂಪ್ ಇಲ್ಲದೆ ಫೈಟ್ ಮಾಡಿದ್ದೇನೆ’ ಎಂದು ಶೂಟಿಂಗ್ ಸಾಹಸ ಗಳನ್ನು ವಿವರಿಸಿದರು ಹರಿಪ್ರಿಯಾ.

ಅದಾಗೇ ಬಂದ ಅವಕಾಶ

‘ಐತಿಹಾಸಿಕ ಸಿನಿಮಾವೊಂದನ್ನು ಮಾಡುವ ಮಹದಾಸೆ ಇತ್ತು. ಆದರೆ ಇದು ನನಗೆ ಅದಾಗೇ ಬಂದ ಅವಕಾಶ..’- ಸಾಹಸ ಸಂಯೋಜನೆ ಮಾಡಲು ಬಂದು ಕೊನೆಗೆ ಕಾಸ್ಟೂ್ಯಮ್ ಡಿಸೈನರ್ ಆಗಿ ಆಕ್ಷನ್-ಕಟ್ ಕೂಡ ಹೇಳಿ ‘ಬಿಚ್ಚುಗತ್ತಿ’ ಎತ್ತಿಹಿಡಿದ ನಿರ್ದೇಶಕ ಹರಿ ಸಂತೋಷ್ ಅವರ ಮಾತಿದು. ಆರಂಭಿಕ ಯೋಜನೆ ಪ್ರಕಾರ ಈ ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ನಿರ್ದೇಶನ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಜವಾಬ್ದಾರಿ ಹರಿ ಸಂತೋಷ್​ಗೆ ವರ್ಗಾವಣೆ ಆಯಿತು.

‘ಮೊದಲು ಈ ಚಿತ್ರಕ್ಕೆ ನಿರ್ದೇಶಕ ಹಂಸಲೇಖ, ಹೀರೋ ರಾಜವರ್ಧನ್ ಎಂಬುದಷ್ಟೇ ಪಕ್ಕಾ ಆಗಿತ್ತು. ರಾಜ್ ನನಗೆ ಪರಿಚಯ ಇದ್ದಿದ್ದರಿಂದ ಸಾಹಸ ಸಂಯೋಜನೆ ಮಾಡುತ್ತೇನೆ ಎಂದಿದ್ದೆ. ಅದಕ್ಕೂ ಮುನ್ನ ಹಂಸಲೇಖ ಅವರು ಈ ಚಿತ್ರಕ್ಕೆ ಒಂದು ಕಾವ್ಯಾತ್ಮಕ ಸ್ಕ್ರಿಪ್ಟ್ ಮಾಡಿ ನಿರ್ದೇಶನಕ್ಕೆ ಸಜ್ಜಾಗಿದ್ದರು. ಆದರೆ ಆ ಪ್ರಕಾರ ಬಜೆಟ್ ಅಧಿಕ ಬೇಕಾದ್ದರಿಂದ ಹಾಗೂ ಈ ನಡುವೆ ನಾನು ಸಿನಿಮಾದಲ್ಲಿ ಇನ್​ವಾಲ್ವ್ ಆದ ರೀತಿ ನೋಡಿ ನಿರ್ದೇಶನದ ಜವಾಬ್ದಾರಿ ನನಗೇ ಬಂತು’ ಎಂದರು ನಿರ್ದೇಶಕ ಹರಿ.

‘16ನೇ ಶತಮಾನದ ಬಗ್ಗೆ ಸರಿಯಾದ ರೆಫರೆನ್ಸ್ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಂದಿನ ಉಡುಗೆ ತೊಡುಗೆ ಬಗ್ಗೆ ಗೊತ್ತಿರಲಿಲ್ಲ. ಆದರೆ ಕಾದಂಬರಿಯಲ್ಲಿನ ವಿವರಗಳ ಮೂಲಕ ಅಂದಿನ ಮೂಡ್ ಗ್ರಹಿಸಿ ನಾನೇ ಎಲ್ಲರ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದೆ. ವಿಷಯ-ವಿಷುವಲ್ ಎರಡನ್ನೂ ಬ್ಯಾಲೆನ್ಸ್ ಮಾಡಿ ತೋರಿಸುವ ಸವಾಲಿತ್ತು. ಅದರಲ್ಲೂ ಹಿಸ್ಟಾರಿಕಲ್ ಸಿನಿಮಾ ಮಾಡುವಾಗ ಎಲ್ಲವೂ ನಿಗದಿ ಆಗಿರುತ್ತವೆ. ತಪ್ಪಾದರೆ ಎಕ್ಸ್​ಕ್ಯೂಸ್ ಎಂಬುದೇ ಇಲ್ಲ. ಅದರಲ್ಲೂ ಇದು 16ನೇ ಶತಮಾನದ ಕಥೆಯಾದ್ದರಿಂದ 2019-20ರ ಯಾವ ಕುರುಹೂ ಕಾಣಿಸುವಂತಿರಲಿಲ್ಲ. ಅದು ದೊಡ್ಡ ಚಾಲೆಂಜ್ ಆಗಿತ್ತು. ಇನ್ನು ಬಜೆಟ್ ದೃಷ್ಟಿಯಿಂದ ಚಿತ್ರದುರ್ಗದಲ್ಲಿ 2 ದಿನ ಮಾತ್ರ ಶೂಟಿಂಗ್ ಮಾಡಿದ್ದು, ಉಳಿದಿದ್ದನ್ನು ನೆಲಮಂಗಲ ಬಳಿ ಬೆಟ್ಟದಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಯಿತು. ಒಳಾಂಗಣ ದೃಶ್ಯಗಳನ್ನು ರಾಕ್​ಲೈನ್ ಸ್ಟುಡಿಯೋದಲ್ಲಿ 9 ಸೆಟ್ ಹಾಕಿ ಶೂಟಿಂಗ್ ಮಾಡಲಾಯಿತು’ ಎಂದು ಸಿನಿಮಾ ನಿರ್ಮಾಣವಾದ ಬಗೆಯನ್ನು ವಿವರಿಸಿದರು ಹರಿ ಸಂತೋಷ್.

| ರವಿಕಾಂತ ಕುಂದಾಪುರ ಬೆಂಗಳೂರು