ಬೆಂಗಳೂರು: ಚಂದನವನದಲ್ಲಿ ಇದೊಂದು ಐತಿಹಾಸಿಕ ಚಿತ್ರವಾದರೂ ಇದನ್ನು ಚಾರಿ‘ತ್ರಿ’ಕ ಸಿನಿಮಾ ಎನ್ನುವುದೇ ಹೆಚ್ಚು ಸೂಕ್ತ. ಏಕೆಂದರೆ ಈ ಸಿನಿಮಾದ ಹೈ-ಲೈಟ್ ‘ತ್ರಿ’ಪಾತ್ರಗಳು. ಅಂದರೆ, ಬಿಚ್ಚುಗತ್ತಿ ಭರಮಣ್ಣ ನಾಯಕ, ದಳವಾಯಿ ಮುದ್ದಣ್ಣ ಹಾಗೂ ಗುಡಿಕೋಟೆ ರಾಜಕುಮಾರಿ ಸಿದ್ದಾಂಬೆ. ಚಿತ್ರಕಥೆ ಈ ಮೂರು ಪಾತ್ರಗಳ ಮೇಲೆ ರಚಿತವಾಗಿದ್ದಷ್ಟೇ ಅಲ್ಲ, ಚಿತ್ರದಲ್ಲಿ ಅತಿಹೆಚ್ಚು ರಾರಾಜಿಸಿದ್ದು ಈ ಮೂರು ಪಾತ್ರಗಳೇ. 16ನೇ ಶತಮಾನದಲ್ಲಿ ಚಿತ್ರದುರ್ಗದಲ್ಲಿ ನಡೆದ ಐತಿಹಾಸಿಕ ಘಟನಾವಳಿಗಳ ಕುರಿತು ಸಾಹಿತಿ ಡಾ.ಬಿ.ಎಲ್. ವೇಣು ಅವರು ರಚಿಸಿದ್ದ ಕಾದಂಬರಿ ‘ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ’ ಆಧಾರಿತವಾಗಿ ನಿರ್ದೇಶಕ ಹರಿ ಸಂತೋಷ್ ತಮ್ಮದೇ ಶೈಲಿಯ ದೃಶ್ಯಾವಳಿಗಳ ಮೂಲಕ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಭರಮಣ್ಣನ ಪಾತ್ರದಲ್ಲಿ ನಾಯಕ ರಾಜ್ವರ್ಧನ್ ಇಲ್ಲಿ ಅಪಾರ ಶ್ರಮವಹಿಸಿ ತಮ್ಮ ಪ್ರತಿಭೆಯ ಭರಪೂರ ಪ್ರದರ್ಶನ ಮಾಡಿದ್ದಾರೆ. ‘ಬಿಚ್ಚುಗತ್ತಿ’ಯ ವರಸೆ ಮೂಲಕ ಇವರು ಭರವಸೆಯ ನಾಯಕನಾಗುವ ಸೂಚನೆಗಳನ್ನು ತೋರಿದ್ದಾರೆ. ಸಿದ್ದಾಂಬೆ ಆಗಿ ನಟಿಸಿರುವ ಹರಿಪ್ರಿಯಾ, ಧುತ್ತೆಂದು ಅಖಾಡಕ್ಕಿಳಿಯುವ ಮೂಲಕ ರಾಜಕುಮಾರಿಯಾಗಿ ಭರ್ಜರಿ ಪ್ರವೇಶ ನೀಡುತ್ತಾರೆ. ಮತ್ತೊಂದೆಡೆ ನಿರಾಭರಣೆ ಆಗಿಯೂ ಆಕರ್ಷಕವಾಗಿ ಕಾಣಿಸಿಕೊಂಡಿದ್ದರಿಂದ ಎರಡು ಲುಕ್ನಲ್ಲೂ ‘ಪ್ರಿಯ’ವೆನಿಸುತ್ತಾರೆ. ಇನ್ನು ಈ ಚಿತ್ರದುದ್ದಕ್ಕೂ ಅಬ್ಬರಿಸುವ ಭಯಂಕರ ಪಾತ್ರವೆಂದರೆ ದಳವಾಯಿ ಮುದ್ದಣ್ಣನದು. ‘ಬಾಹುಬಲಿ’ ಸಿನಿಮಾದಲ್ಲಿ ಕಾಲಕೇಯ ರಾಜನಾಗಿ ಗಮನ ಸೆಳೆದಿದ್ದ ಪ್ರಭಾಕರ್ ಇಲ್ಲಿ ಮುದ್ದಣ್ಣನಾಗಿ ಪಾತ್ರದ ತೂಕಕ್ಕೆ ತಕ್ಕ ಅಭಿನಯ ತೋರಿದ್ದಾರೆ. ಹಾವಭಾವಗಳ ಮೂಲಕ ದಳವಾಯಿ ಪಾತ್ರಕ್ಕೆ ಅವರು ನ್ಯಾಯ ಸಲ್ಲಿಸಿದ್ದರೂ ಆ ಪಾತ್ರದ ಸಂಭಾಷಣೆಗಳಲ್ಲಿನ ಅಪಭ್ರಂಶಗಳಿಂದಾಗಿ ಅಲ್ಲಲ್ಲಿ ರಸಭಂಗವಾಗುತ್ತದೆ. ಉಳಿದಂತೆ ಸ್ಪರ್ಶ ರೇಖಾ, ಶ್ರೀನಿವಾಸ ಮೂರ್ತಿ, ರಮೇಶ್ ಪಂಡಿತ್, ಮಾಸ್ಟರ್ ಅನ್ಮೋಲ್ ವಿಜಯ್
ಚಿತ್ರ: ಬಿಚ್ಚುಗತ್ತಿ ನಿರ್ದೇಶನ: ಹರಿ ಸಂತೋಷ್ ನಿರ್ಮಾಣ: ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್ ಪಾತ್ರವರ್ಗ: ರಾಜ್ವರ್ಧನ್, ಹರಿಪ್ರಿಯಾ, ಪ್ರಭಾಕರ್, ಸ್ಪರ್ಶ ರೇಖಾ, ಶ್ರೀನಿವಾಸಮೂರ್ತಿ, ರಮೇಶ್ ಪಂಡಿತ್, ಎಸ್.ಶಿವರಾಂ, ಪ್ರದೀಪ್ಚಂದ್ರ, ಡಿಂಗ್ರಿ ನಾಗರಾಜ್ ಮತ್ತಿತರರು.
| ರವಿಕಾಂತ ಕುಂದಾಪುರ