ಸಿನಿವಾಣಿ

bhuvanam gaganam movie review: ಸರಳ ಪ್ರೇಮಕಥೆಯಲ್ಲಿ ಅರ್ಥಪೂರ್ಣ ಪ್ರಯಾಣ

ಚಿತ್ರ: ಭುವನಂ ಗಗನಂ

ನಿರ್ದೇಶನ: ಗಿರೀಶ್ ಮೂಲಿಮನಿ

ನಿರ್ಮಾಣ: ಎಂ.ಮುನೇಗೌಡ

ತಾರಾಗಣ: ಪ್ರಮೋದ್, ಪೃಥ್ವಿ ಅಂಬಾರ್, ರೇಚೆಲ್ ಡೇವಿಡ್, ಅಶ್ವತ್ಥಿ, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಮತ್ತಿತರರು.

ಶಿವ ಸ್ಥಾವರಮಠ

ಅಭಿ (ಪ್ರಮೋದ್) ಕಡು ಕೋಪಿಷ್ಠ. ಎದುರಾಳಿಯ ಮಾತಿಗೆ ಎದುರೇಟು ಕೊಡವಾತ. ಕಾಲೇಜಿನಲ್ಲಿ ಓದುವಾಗಲೇ ಆತ ನಂದಿನಿಯ (ರೇಚೆಲ್ ಡೇವಿಡ್) ಪ್ರೀತಿಯಲ್ಲಿ ಸೆರೆಯಾಗುತ್ತಾನೆ. ತಂದೆ-ತಾಯಿಯ ವಿರೋಧ ಕಟ್ಟಿಕೊಂಡು ಮದುವೆಯೂ ಆಗುತ್ತಾನೆ. ಇದು ಒಂದು ಕಥೆಯಾದರೆ, ಇನ್ನೊಬ್ಬ ಮುಗ್ಧಜೀವಿ ರಾಮ್ (ಪೃಥ್ವಿ ಅಂಬಾರ್). ಹುಟ್ಟಿನಿಂದ ಬುದ್ದಿಮಾಂಧ್ಯ. ಮೈಕಲ್ ಜಾಕ್ಸನ್ ಮೇಲೆ ವಿಪರೀತ ಅಭಿಮಾನ. ಡಾನ್ಸರ್ ಆಗುವ ಕನಸು ಕಂಡಾತ. ಈತನ ಜೀವನದಲ್ಲಿಯೂ ಒಂದು ಗಾಢವಾದ ನೋವಿನ ಕಥೆಯಿದೆ. ಇಂತಹ ಮುಗ್ಧಜೀವಿ ರಾಮ್ ಮತ್ತು ಕಡು ಕೋಪಿಷ್ಠ ಅಭಿ ಒಂದೇ ಹಾದಿಯಲ್ಲಿ ಭೇಟಿಯಾಗುತ್ತಾರೆ. ಬಳಿಕ, ಇಬ್ಬರ ಕಥೆ ಮುಂದುವರಿಯುತ್ತದೆ. ಹಾಗಾದರೆ, ಪಯಣದ ಕಥೆ ಏನು ಎಂದು ತಿಳಿಯಬೇಕಾದರೆ ನೀವು ‘ಭುವನಂ ಗಗನಂ’ ಸಿನಿಮಾ ನೋಡಲೇಬೇಕು.

ಗಿರೀಶ್ ಮೂಲಿಮನಿ ಒಂದು ಸರಳ ಕಥೆಯಲ್ಲಿ ಅರ್ಥಪೂರ್ಣ ಜೀವನಯಾನವನ್ನು ನಿರೂಪಿಸಿದ್ದಾರೆ. ಇಲ್ಲಿ ಎರಡು ಪ್ರತ್ಯೇಕ ಕಥೆಗಳನ್ನು ಒಂದೇ ಹಾದಿಯಲ್ಲಿ ಕ್ರಮಬದ್ಧವಾಗಿ ಜೋಡಿಸಿದ್ದಾರೆ. ಜೀವನದಲ್ಲಿ ಸಂಬಂಧಗಳು ಎಷ್ಟು ಮುಖ್ಯ ಎಂಬುದನ್ನು ಮೊದಲಿಗೆ ಹೇಳಿದರೆ, ಮನುಷ್ಯನ ಮುಗ್ಧತೆಗೂ ಒಂದು ಮೌಲ್ಯವಿದೆ ಎಂಬುದನ್ನು ಮತ್ತೊಂದು ಪಾತ್ರದ ಮೂಲಕ ಹೇಳಿದ್ದಾರೆ. ಮೊದಲರ್ಧದಲ್ಲಿ ಪ್ರಮೋದ್ ಆವರಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಪೃಥ್ವಿ ಮಿಂಚುತ್ತಾರೆ. ಕಥೆ ಸ್ವಲ್ಪ ಲೆಂಥಿ ಹಾಗೂ ನಿಧಾನಗತಿ ಎನಿಸುತ್ತದೆ. ಹಾಸ್ಯಕ್ಕೆ ಹೆಚ್ಚು ಒತ್ತು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಕ್ಲೈಮ್ಯಾಕ್ಸ್ ಪರಿಣಾಮಕಾರಿಯಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಕಣ್ಣು ತೇವವಾಗಿಸುತ್ತದೆ.

ಪ್ರಮೋದ್ ಮತ್ತೊಮ್ಮೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ರೂಪದಲ್ಲಿ ಮಿಂಚಿದ್ದಾರೆ. ಕೊನೆಯಲ್ಲಿ ಎಮೋಷನ್ ದೃಶ್ಯಗಳಲ್ಲಿ ಗಮನಸೆಳೆಯುತ್ತಾರೆ. ಪೃಥ್ವಿ ಅಂಬಾರ್ ಪಾತ್ರದಲ್ಲಿ ಜೀವಿಸಿದ್ದು, ಮನೋಜ್ಞವಾಗಿ ಅಭಿನಯಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಅವರ ನಟನೆಯೇ ಕೇಂದ್ರಬಿಂದು. ಕಥೆಯಲ್ಲಿ ಇಬ್ಬರ ಪಾತ್ರಗಳನ್ನು ಸಮದೂಗಿಸಲಾಗಿದೆ. ರೇಚೆಲ್ ಡೇವಿಡ್, ಅಶ್ವತ್ಥಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಗಿರೀಶ್ ಮೂಲಿಮನಿ, ಪ್ರಸನ್ನ ಸಂಭಾಷಣೆ ಆಪ್ತವಾಗುತ್ತದೆ. ಗುಮ್ಮನೇನಿ ವಿಜಯ್ ಸಂಗೀತ ಕಥೆಗೆ ತಕ್ಕಂತೆ ಮೂಡಿಬಂದಿದೆ. ಸಂಬಂಧಗಳನ್ನು ಎಂದಿಗೂ ನಾವು ನಾವಾಗಿಯೇ ದೂರ ಮಾಡಿಕೊಳ್ಳಬಾರದು. ದೂರವಾದರೂ, ದೇವರು ಕೂಡಿಸಲು ಸಜ್ಜಾಗಿರುತ್ತಾನೆ. ಆಗ ತಾಳ್ಮೆಯಿಂದ ಸೇರಲು ಸಿದ್ಧರಾಗಿರಬೇಕು ಎಂಬ ಸಂದೇಶ ನೀಡುವ ‘ಭುವನಂ ಗಗನಂ’ ಚಿತ್ರವನ್ನು ಒಮ್ಮೆ ನೋಡಬಹುದು.