ಚಿತ್ರ: ಕಾಲವೇ ಮೋಸಗಾರ
ನಿರ್ದೇಶನ: ಸಂಜಯ್ ಕುಲಕರ್ಣಿ
ತಾರಾಗಣ: ಭರತ್ ಸಾಗರ್, ಯಶಸ್ವಿನಿ ರವೀಂದ್ರ, ವಿಜಯ್ ಚೆಂಡೂರ್, ಶಂಕರಮೂರ್ತಿ, ಕುರಿ ಪ್ರತಾಪ್, ಬ್ಯಾಂಕ್ ಜನಾರ್ದನ್, ದರ್ಶನ್ ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
"ಪ್ರತಿ ಲವ್ಸ್ಟೋರಿಯಲ್ಲೂ ಒಬ್ಬ ಹೀರೋ ಮತ್ತು ಒಬ್ಬ ವಿಲನ್ ಇರ್ತಾರೆ. ಆದರೆ, ನನ್ನ ಲವ್ಸ್ಟೋರಿಲಿ ನಾನೇ ಹೀರೋ, ನಾನೇ ವಿಲನ್' ಅಂತಾನೆ ಕಿಟ್ಟು (ಭರತ್). ಪ್ರೀತಿಸಿದ ಹುಡುಗಿಯೇ ಕಿಟ್ಟು ಕಿಡ್ನ್ಯಾಪ್ಗೆ ಬೆಂಗಳೂರಿನ ಟಾಪ್ ರೌಡಿಗೆ ಸುಪಾರಿ ಕೊಟ್ಟಿರುತ್ತಾಳೆ. ಆಕೆಯ ನಿಶ್ಚಿತಾರ್ಥದ ವಿಷಯ ತಿಳಿದು ನೋವಿನ ನಶೆಯಲ್ಲಿ ಮಿಂದೇಳಲು ಬಾರ್ಗೆ ಬಂದಿರುತ್ತಾನೆ. ಅದೇ ಬಾರ್ಗೆ ಅವತ್ತೇ ಎಂಗೇಜ್ ಆದ ಅವಿನಾಶ್ (ಶಂಕರ್) ಕೂಡ ಖುಷಿಯ ದಿನವನ್ನು ಆಚರಿಸಲು ಬಂದಿರುತ್ತಾನೆ. ಅವಿನಾಶ್ಗೆ ಕಿಟ್ಟು ಮೇಲೆ ಕುತೂಹಲ ಮತ್ತು ಕನಿಕರ ಎರಡೂ ಮೂಡುತ್ತದೆ. ಹೀಗಾಗಿ ನಿಮ್ಮ ಲವ್ಸ್ಟೋರಿ ಹೇಳಿ ಅಂತ ಕಿಟ್ಟುಗೆ ದುಂಬಾಲು ಬೀಳುತ್ತಾನೆ. ಅಲ್ಲಿಂದ ಕಿಟ್ಟು ಮತ್ತು ಸಂಗೀತ ಶಿಕ್ಷಕಿ ಸಂಧ್ಯಾ (ಯಶಸ್ವಿನಿ) ಪ್ರೇಮಕಥೆ ತೆರೆದುಕೊಳ್ಳುತ್ತದೆ. ಅವರ ಪ್ರೀತಿ ಹೇಗಾಯಿತು? ಬ್ರೇಕಪ್ಗೆ ಏನು ಕಾರಣ? ಕಿಟ್ಟು&ಸಂಧ್ಯಾ ಮತ್ತೆ ಒಂದಾಗುತ್ತಾರಾ? ತಿಳಿಯಲು "ಕಾಲವೇ ಮೋಸಗಾರ' ನೋಡಿ...
ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರ ರಿಲೀಸ್ ಆಗಿಯೇ ನಾಲ್ಕು ವರ್ಷಗಳಾಗಬೇಕಿತ್ತು. ಆದರೆ, ಕರೊನಾ ಕೊಟ್ಟ ಏಟಿಗೆ ತಡವಾಗಿದೆ. ಹಾಗಂತ ಈ ಕಥೆ ಔಟ್ಡೇಟೆಡ್ ಕೂಡ ಅಲ್ಲ. ಏಕೆಂದರೆ, ಇತ್ತೀಚೆಗೆ ಮೇಘಾಲಯದಲ್ಲಿ ನಡೆದ ಹನಿಮೂನ್ ಮರ್ಡರ್ ಕೇಸ್ನಲ್ಲಿ ಪತ್ನಿಯೇ ಪತಿಯನ್ನು ಕೊಲ್ಲಿಸಲು ಸುಪಾರಿ ನೀಡಿದ್ದಳು. ಆದರೆ, ಈ ಚಿತ್ರದಲ್ಲಿ ಬಾಯ್ಫ್ರೆಂಡ್ ಹೆಡೆಮುರಿ ಕಟ್ಟಲು ಗರ್ಲ್ಫ್ರೆಂಡ್ ಸುಪಾರಿ ಕೊಟ್ಟಿರುತ್ತಾಳೆ. ಇಂತಹ ಕೆಲ ವಿಷಯಗಳು ಚಿತ್ರವನ್ನು ನೋಡಿಸಿಕೊಂಡು ಹೋಗುತ್ತವೆ.
ಹಾಗೇ ನಾಯಕ ನಟ ಭರತ್ ಸಾಗರ್ ಕಿಟ್ಟು ಪಾತ್ರವನ್ನು ಜೀವಿಸಿದ್ದಾರೆ. ಡಾನ್ಸ್, ಫೈಟ್ಸ್ ಜತೆಗೆ ನಟನೆಯಲ್ಲೂ ಮಿಂಚಿರುವ ಅವರಿಗೆ ಉತ್ತಮ ಅವಕಾಶಗಳು ದೊರೆತರೆ, ಚಿತ್ರರಂಗದಲ್ಲಿ ಭವಿಷ್ಯದ ಭರವಸೆಯ ನಾಯಕನಾಗುವ ಎಲ್ಲ ಲಕ್ಷಣಗಳಿವೆ. ಯಶಸ್ವಿನಿ ಕೂಡ ಕೆಲ ಸನ್ನಿವೇಶಗಳಲ್ಲಿ ಗಮನ ಸೆಳೆಯುತ್ತಾರೆ. ಕುರಿ ಪ್ರತಾಪ್ ಮತ್ತು ವಿಜಯ್ ಚೆಂಡೂರ್ ಅಲ್ಲಲ್ಲಿ ನಗಿಸುತ್ತಾರೆ. ಉಳಿದ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಲೋಕೇಶ್ ಅವರ ಬಿಜಿಎಂ ಮತ್ತು ಸಂಗೀತ ಚಿತ್ರಕ್ಕೆ ಪೂರಕವಾಗಿವೆ. ಚಿತ್ರಕಥೆ ಮತ್ತಷ್ಟು ಗಟ್ಟಿಯಾಗಿದ್ದರೆ, ಸಿನಿಮಾ ಪ್ರೇಕ್ಷಕರಿಗೆ ಇತ್ತಷ್ಟು ಹತ್ತಿರವಾಗುತ್ತಿತ್ತು. ಉಳಿದಂತೆ ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ.