ಸಿನಿವಾಣಿ

22 ವರ್ಷಗಳ ನಂತರ ಮೆಜೆಸ್ಟಿಕ್​ ಸೀಕ್ವಲ್​ ; ಮರಿದಾಸನಾಗಿ ಬರಲಿದ್ದಾರೆ ಯುವನಟ ಭರತ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಮೆಜೆಸ್ಟಿಕ್​' ಚಿತ್ರದ "ದಾಸ' ಪಾತ್ರದ ಮೂಲಕ ದರ್ಶನ್​ 2002ರಲ್ಲಿ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ್ದರು. ಇದೀಗ 22 ವರ್ಷಗಳ ನಂತರ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್​ ಪುತ್ರ "ಮರಿದಾಸ'ನಾಗಿ "ಮೆಜೆಸ್ಟಿಕ್​ 2' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನೆರವೇರಿಸಲಾಗಿದೆ. ಅಂದು "ಮೆಜೆಸ್ಟಿಕ್​'ಗೆ ಕಥೆ ಬರೆದಿದ್ದ ರಾಮು ಇದೀಗ, ಇಂದಿನ ಮೆಜೆಸ್ಟಿಕ್​ ಕಥೆಯೊಂದಿಗೆ ಸೀಕ್ವಲ್​ಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ.

"ನಿರ್ದೇಶಕ ಪಿ.ಎನ್​. ಸತ್ಯ ಮತ್ತು "ಜೋಗಿ' ಪ್ರೇಮ್​ ಜತೆ ಕೆಲಸ ಮಾಡಿದ್ದೆ. ನಾನು ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್​ನಲ್ಲಿ ಏನೆಲ್ಲಾ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುದನ್ನು ಕಣ್ಣಾರೆ ನೋಡಿ "ಮೆಜೆಸ್ಟಿಕ್​' ಕಥೆ ಬರೆದಿದ್ದೆ. ಈಗಿನ ರೌಡಿಸಂ ಹೇಗಿದೆ ಅಂತ ಈ ಸೀಕ್ವಲ್​ನಲ್ಲಿ ಹೇಳಲಿದ್ದೇನೆ. ಇದು ರೌಡಿಸಂ ಮತ್ತು ಆ್ಯಕ್ಷನ್​ ಕಥೆ. ಮೊದಲ ಚಿತ್ರಕ್ಕಿಂತ ಹತ್ತು ಪಟ್ಟು ಹೆಚ್ಚು ವಿಷಯ ಈ ಚಿತ್ರದಲ್ಲಿರಲಿದೆ' ಎಂದು ಮಾಹಿತಿ ನೀಡಿದರು ನಿರ್ದೇಶಕ ರಾಮು.

ನಾಯಕ ಭರತ್​, "ನಮ್ಮ ಚಿತ್ರದ ಪ್ರಮುಖ ಆಕರ್ಷಣೆಯೇ ಟೈಟಲ್​. ಪಾತ್ರಕ್ಕಾಗಿ ತುಂಬ ಸಿದ್ಧತೆ ಮಾಡಿಕೊಂಡಿದ್ದೇನೆ' ಎಂದರು. ಭರತ್​ಗೆ ಸಂಹಿತಾ ವಿನ್ಯಾ ನಾಯಕಿಯಾಗಿದ್ದು, ನಾಯಕನ ತಾಯಿಯ ಪಾತ್ರದಲ್ಲಿ ಶ್ರುತಿ ನಟಿಸಲಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತ, ವೀನಸ್​ ಪೂರ್ತಿ ಛಾಯಾಗ್ರಹಣ ಇರಲಿದೆ.